Advertisement

ಬಲವಾದ ಪಟ್ಟು ಹಿಡಿಯಬೇಕು ಪಾಕಿಸ್ಥಾನ ಹಣಿಯಲು ಸಕಾಲ

09:54 AM Sep 21, 2017 | Team Udayavani |

ಇಡೀ ಜಗತ್ತಿಗೆ ಬೆದರಿಕೆಯಾಗಿ ಪರಿಣಮಿಸಿರುವ ಉತ್ತರ ಕೊರಿಯಾವನ್ನು ಮುಂದಿಟ್ಟುಕೊಂಡು ಪಾಕಿಸ್ಥಾನವನ್ನು ಹಣಿಯಲು ಭಾರತ ಮಾಡಿರುವ ಪ್ರಯತ್ನ ಅತ್ಯಂತ ಜಾಣನಡೆ ಎಂದು ಅಂತಾರಾಷ್ಟ್ರೀಯ ಸಮುದಾಯದಿಂದ ಪ್ರಶಂಸೆಗೊಳಗಾಗಿದೆ. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಭಾಗವಹಿಸುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಉತ್ತರ ಕೊರಿಯಾದ ಅಣ್ವಸ್ತ್ರವನ್ನು ನಿಗ್ರಹಿಸುವುದಕ್ಕೂ ಮೊದಲು ಅದಕ್ಕೆ ಅಣು ತಂತ್ರಜ್ಞಾನವನ್ನು ಕೊಟ್ಟವರು ಯಾರು ಎಂದು ಪತ್ತೆ ಹಚ್ಚಿ ಅವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಹೇಳಿರುವುದು ಪಾಕಿಸ್ಥಾನವನ್ನು ಚಿಂತೆಗೀಡು ಮಾಡಿದ್ದರೆ ಅಚ್ಚರಿಯಿಲ್ಲ. ಏಕೆಂದರೆ ಪಾಕಿಸ್ಥಾನವೇ ಉತ್ತರ ಕೊರಿಯಾಕ್ಕೆ ಅಣು ತಂತ್ರಜ್ಞಾನವನ್ನು ಕೊಟ್ಟಿದೆ ಎನ್ನುವುದು ಕೆಲ ವರ್ಷಗಳ ಹಿಂದೆಯೇ ಬಯಲಾಗಿದೆ. ವಾರಕ್ಕೆರಡರಂತೆ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಾ ಅಮೆರಿಕ ಹಾಗೂ ಇಡೀ ಜಗತ್ತನ್ನು ಬೆದರಿಸುತ್ತಿರುವ ಉತ್ತರ ಕೊರಿಯಾದಷ್ಟೇ ಅದಕ್ಕೆ ಅಣು ತಂತ್ರಜ್ಞಾನ ಒದಗಿಸಿದವರೂ ಈಗಿನ ಬಿಕ್ಕಟ್ಟಿಗೆ ಜವಾಬ್ದಾರರಾಗುತ್ತಾರೆ. ಶಿಕ್ಷೆ ಕೊಡುವುದಾದರೆ ಎರಡೂ ದೇಶಗಳಿಗೆ ಕೊಡಬೇಕು ಎನ್ನುವ ವಾದವನ್ನು ಭಾರತ ಮಂಡಿಸಿದೆ. ಅಣ್ವಸ್ತ್ರ ಪರೀಕ್ಷೆಯಲ್ಲಿ ಉತ್ತರ ಕೊರಿಯಾ ಈಗ ಅಮೆರಿಕವನ್ನೇ ಮೀರಿಸುವ ಧಾವಂತದಲ್ಲಿದೆ. ಸೆ. 3ರಂದು ಉತ್ತರ ಕೊರಿಯಾ ಅತ್ಯಂತ ಪ್ರಬಲವಾಗಿರುವ ಅಣು ಬಾಂಬ್‌ ಪರೀಕ್ಷೆ ನಡೆಸಿದೆ. ಇದು 6.3 ಪ್ರಮಾಣದ ಭೂಕಂಪಕ್ಕೆ ಸಮವಾಗಿರುವ ಬಾಂಬ್‌. ಈ ಬಳಿಕ ವಿಶ್ವಸಂಸ್ಥೆ ನಿಬಂಧಗಳನ್ನು ಹೇರಿದ್ದರೂ ರಷ್ಯಾ ಮತ್ತು ಚೀನದ ಬೆಂಬಲ ಹೊಂದಿರುವ ಉತ್ತರ ಕೊರಿಯಾ ಕ್ಯಾರೇ ಎನ್ನದೇ ತನ್ನ ಉದ್ಧಟತನವನ್ನು ಮುಂದುವರಿಸುತ್ತಿದೆ.

Advertisement

ಉತ್ತರ ಕೊರಿಯಾ ಮಾತ್ರವಲ್ಲದೆ ಇರಾನ್‌ ಮತ್ತು ಲಿಬಿಯಾಕ್ಕೂ ಪಾಕಿಸ್ಥಾನವೇ ಅಣು ತಂತ್ರಜ್ಞಾನವನ್ನು ನೀಡಿದೆ. ತನ್ನ ಅಣು ಬಾಂಬ್‌ ಜನಕ ಎಂದು ಪಾಕಿಸ್ಥಾನ ಹೇಳಿಕೊಳ್ಳುತ್ತಿರುವ ವಿಜ್ಞಾನಿ ಅಬ್ದುಲ್‌ ಖಾದಿರ್‌ ಖಾನ್‌ ಅವರೇ ಇರಾನ್‌ಗೆ ಕಳ್ಳತನದಿಂದ ಅಣು ತಂತ್ರಜ್ಞಾನ ವನ್ನು ಮಾರಿಕೊಂಡ ಆರೋಪಕ್ಕೊಳಗಾಗಿದ್ದರು. ಪಾಕಿಸ್ಥಾನದ ಅಣು ಕಾರ್ಯಕ್ರಮಗಳ ಬಗ್ಗೆ ವಿದೇಶಗಳಲ್ಲಿ ಬಡಾಯಿ ಕೊಚ್ಚಿಕೊಂಡ ಕಾರಣಕ್ಕೆ ಈ ವಿಜ್ಞಾನಿಯನ್ನು ಕೆಲ ಸಮಯ ಗೃಹಬಂಧನದಲ್ಲಿಡಲಾಗಿತ್ತು. ಉಗ್ರರ ತವರು ನೆಲವಾಗಿರುವ ಪಾಕಿಸ್ಥಾನದ ಬಳಿ ಅಣ್ವಸ್ತ್ರವಿರುವುದು ಕೂಡ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಗಂಡಾಂತರಕಾರಿ ವಿಚಾರ. ಉತ್ತರ ಕೊರಿಯಾ ಮತ್ತು ಪಾಕಿಸ್ಥಾನ ನಡುವಿನ ಸ್ನೇಹ ಸಂಬಂಧ ಚಿಗುರೊಡೆದದ್ದು ಪ್ರಧಾನಿ ಜುಲ್ಫಿಕರ್‌ ಅಲಿ ಭುಟ್ಟೊ ಕಾಲದಲ್ಲಿ. 1990ರಲ್ಲಿ ಭುಟ್ಟೊ ಮಗಳು ಬೆನಜೀರ್‌ ಭುಟ್ಟೊ ಉತ್ತರ ಕೊರಿಯಾಕ್ಕೆ ಐತಿಹಾಸಿಕ ಪ್ರವಾಸ ಕೈಗೊಂಡ ಬಳಿಕ ಅತ್ಯಂತ ಸೂಕ್ಷ್ಮ ಮತ್ತು ಗೌಪ್ಯವಾಗಿರಬೇಕಾಗಿದ್ದ ಅಣು ತಂತ್ರಜ್ಞಾನ ಹಸ್ತಾಂತರವಾಗಿದೆ ಎಂಬ ಅನುಮಾನವಿದೆ. ಅಬ್ದುಲ್‌ ಖಾದಿರ್‌ ಖಾನ್‌ ಅವರೇ ಹಲವು ಬಾರಿ ಉತ್ತರ ಕೊರಿಯಾಕ್ಕೆ ಅಣು ತಂತ್ರಜ್ಞಾನ ಹಸ್ತಾಂತರಿಸಲು ಪ್ರಧಾನಿ ಭುಟ್ಟೊ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದರು. 1993ರಲ್ಲಿ ಉತ್ತರ ಕೊರಿಯಾಕ್ಕೆ ಪಾಕಿಸ್ಥಾನದಿಂದ ಅಣು ತಂತ್ರಜ್ಞಾನ ರವಾನೆಯಾಗಿದ್ದು, ಇದಕ್ಕೆ ಬದಲಾಗಿ ಉತ್ತರ ಕೊರಿಯಾ ಪಾಕ್‌ಗೆ ಬ್ಯಾಲಿಸ್ಟಿಕ್‌ ಕ್ಷಿಪಣಿ ತಂತ್ರಜ್ಞಾನವನ್ನು ನೀಡಿದೆ. 

ಈ ಕ್ಷಿಪಣಿ ಹಾಗೂ ಅಣುಬಾಂಬ್‌ಗಳ ನೆರವಿನಿಂದಲೇ ಪಾಕಿಸ್ಥಾನ ಪದೇಪದೇ ಭಾರತಕ್ಕೆ ಅಣ್ವಸ್ತ್ರ ಪ್ರಯೋಗಿಸುವ ಬೆದರಿಕೆ ಹಾಕುತ್ತಿದೆ. ಭಾರತದಂತೆ ಅಣ್ವಸ್ತ್ರವನ್ನು ಮೊದಲು ಬಳಸದಿರುವ ಒಪ್ಪಂದಕ್ಕೆ ಪಾಕ್‌ ಬದ್ಧವಾಗಿಲ್ಲ. ಹೀಗಾಗಿ ಪಾಕ್‌ ಕೈಯಲ್ಲಿ ಅಪಾಯಕಾರಿ ಅಸ್ತ್ರಗಳಿರುವುದು ಭಾರತಕ್ಕೆ ಎಂದಿಗೂ ಅಪಾಯವೇ. ಇನ್ನೂ ಅಪಾಯಕಾರಿ ವಿಚಾರವೆಂದರೆ ಪಾಕಿಸ್ಥಾನದ ಅಣು ಬಾಂಬ್‌ಗಳು ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು. ಒಂದು ಅಂದಾಜಿನ ಪ್ರಕಾರ ಪಾಕ್‌ ಬಳಿ ಈಗ 110ರಿಂದ 130 ಅಣು ಬಾಂಬ್‌ಗಳಿಗೆ. ವರ್ಷಕ್ಕೆ 20 ಅಣು ಬಾಂಬ್‌ ತಯಾರಿಸುವ ಸಾಮರ್ಥ್ಯ ಆ ದೇಶಕ್ಕಿದೆ. ಇದೇ ವೇಗದಲ್ಲಿ ಅಣುಬಾಂಬ್‌ಗಳನ್ನು ತಯಾರಿಸುತ್ತಾ ಹೋದರೆ ಅಮೆರಿಕ ಮತ್ತು ಚೀನದ ಬಳಿಕ ಅತ್ಯಧಿಕ ಅಣುಬಾಂಬ್‌ ಹೊಂದಿರುವ ದೇಶವಾಗುತ್ತದೆ. ನೆರೆಯಲ್ಲಿರುವ ಶತ್ರು ರಾಷ್ಟ್ರದ ಬಳಿ ಇಷ್ಟು ಅಗಾಧ ಪ್ರಮಾಣದ ಅಣ್ವಸ್ತ್ರಗಳಿರುವಾಗ ನಾವು ನೆಮ್ಮದಿಯಿಂದಿರುವುದು ಅಸಾಧ್ಯ. ಅದರಲ್ಲೂ ಪಾಕಿಸ್ಥಾನಿ ಉಗ್ರರು ಈಗ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದು, ಇದರಲ್ಲಿ ಅವರು ಸಫ‌ಲರಾದರೆ ಅಧಿಕೃತವಾಗಿಯೇ ಉಗ್ರರ ಕೈಗೆ ಅಣ್ವಸ್ತ್ರ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಣು ತಂತ್ರಜ್ಞಾನ ಅನಧಿಕೃತ ಹಸ್ತಾಂತರ ವಿಚಾರದಲ್ಲಿ ಪಾಕಿಸ್ಥಾನವನ್ನು ಸಿಲುಕಿಸುವುದು ಬುದ್ಧಿವಂತ ನಡೆ ಮಾತ್ರವಲ್ಲದೆ ಅಗತ್ಯ ನಡೆಯೂ ಹೌದು. 

ಈ ಪ್ರಯತ್ನ ಸಫ‌ಲವಾಗಬೇಕಾದರೆ ಅಂತಾರಾಷ್ಟ್ರೀಯ ಸಮುದಾಯದ ಎದುರು ಉತ್ತರ ಕೊರಿಯಾಕ್ಕೆ ಅಣು ತಂತ್ರಜ್ಞಾನ ಮಾಡಿದವರ ವಿರುದ್ಧ ತನಿಖೆಯಾಗಬೇಕೆಂದು ಬಲವಾದ ಪಟ್ಟು ಹಿಡಿಯಬೇಕು.  ಈ ಪ್ರಯತ್ನದಲ್ಲಿ ಯಶಸ್ವಿಯಾದರೆ ಅದು ಜಾಗತಿಕವಾಗಿ ಪಾಕಿಸ್ಥಾನವನ್ನು ಒಂಟಿಯಾಗಿಸುವ ಪ್ರಯತ್ನದಲ್ಲಿ ಲಭಿಸುವ ಅತಿ ದೊಡ್ಡ ರಾಜತಾಂತ್ರಿಕ ಗೆಲುವು.

Advertisement

Udayavani is now on Telegram. Click here to join our channel and stay updated with the latest news.

Next