Advertisement

ನಿರ್ವಹಣೆ ಇಲ್ಲದೆ ದುಃಸ್ಥಿತಿಯಲ್ಲಿದೆ ಏಕೈಕ ಸಭಾಭವನ

12:00 AM Jul 04, 2019 | Team Udayavani |

ಬೆಳ್ಳಾರೆ: ಸಾರ್ವಜನಿಕ ಸಭೆ ಸಮಾರಂಭ, ಬಡ ಕುಟುಂಬದ ಮದುವೆ, ಶುಭ ಕಾರ್ಯಕ್ರಮಗಳಿಗೆ ಬೆಳ್ಳಾರೆಯಲ್ಲಿ ಸಮುದಾಯ ಭವನೇ ಇಲ್ಲ. ಈಗ ಇರುವ ಬೆಳ್ಳಾರೆಯ ಅಂಬೇಡ್ಕರ್‌ ಭವನ ಕಟ್ಟಡ ಶಿಥಿಲವಾಗಿ ಬೀಳುವ ಸ್ಥಿತಿಯಲ್ಲಿದೆ. ಹಲವು ವರ್ಷಗಳಿಂದ ಕಾಯಕಲ್ಪಕ್ಕಾಗಿ ಕಾಯುತ್ತಿರುವ ಅಂಬೇಡ್ಕರ್‌ ಭವನಕ್ಕೆ ದುರಸ್ತಿ ಭಾಗ್ಯ ಮಾತ್ರ ಕೂಡಿ ಬಂದಿಲ್ಲ. ಭವನದ ಮೇಲ್ಛಾವಣಿಯು ಕುಸಿದು ನಿಂತಿದ್ದು, ಮಳೆಗಾಲದಲ್ಲಿ ಭವನದೊಳಗೆ ಸೋರುತ್ತದೆ. ರೀಪು, ಪಕ್ಕಾಸು, ಕಿಟಕಿಯ ಬಾಗಿಲುಗಳು ಗೆದ್ದಲು ಹಿಡಿದು ಮುರಿದು ಹೋಗಿದೆ.

Advertisement

ಸಮುದಾಯ ಭವನವೇ ಇಲ್ಲ
ತಾಲೂಕಿನ ಎರಡನೇ ಅತೀ ದೊಡ್ಡ ಪಟ್ಟಣವಾದರೂ ಬೆಳ್ಳಾರೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಮುದಾಯ ಭವನವೇ ಇಲ್ಲ. ಹಲವು ವರ್ಷಗಳ ಹಿಂದೆ ಬೆಳ್ಳಾರೆ ಸುಳ್ಯ ರಸ್ತೆಯ ಪೊಲೀಸ್‌ ಠಾಣೆಯ ಬಳಿ ನಿರ್ಮಾಣವಾದ ಅಂಬೇಡ್ಕರ್‌ ಭವನ ಸಾರ್ವನಿಕ ಸಭೆ-ಸಮಾರಂಭಗಳಿಗೆ ಅನುಕೂಲಕರವಾಗಿತ್ತು.

ಆದರೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕಾರ್ಯಕ್ರಮ ನಡೆಸಲು ಬೇಕಾದ ಮೂಲ ಸೌಲಭ್ಯಗಳು ಇಲ್ಲಿ ಇಲ್ಲ. ಮೇಲ್ಛಾವಣಿಯ ನಿರ್ವಹಣೆಯೊಂದನ್ನು ಆಗಾಗ ನಡೆಸಲಾಗುತ್ತಿದ್ದಾರೂ ಈಗ ಅದೂ ನಿರ್ವಹಣೆ ಇಲ್ಲದೆ ಬೀಳುವ ಸ್ಥಿತಿಯಲ್ಲಿದೆ.

ಗ್ರಾಮ ಪಂಚಾಯತ್‌ ನಿರ್ವಹಣೆ

ಅಂಬೇಡ್ಕರ್‌ ಭವನವನ್ನು ಬೆಳ್ಳಾರೆ ಗ್ರಾಮ ಪಂಚಾಯತ್‌ ನಿರ್ವಹಣೆ ಮಾಡುತ್ತಿದ್ದು, ಹಲವು ಸಾರ್ವಜನಿಕ ಕಾರ್ಯಕ್ರಮಗಳು ಇಲ್ಲೇ ನಡೆಯುತ್ತಿತ್ತು. ರಾಜೀವ ಗಾಂಧಿ ಸೇವಾ ಕೇಂದ್ರವಾದ ಬಳಿಕ ಸಂಘ ಸಂಸ್ಥೆಗಳಿಗೆ ಹಾಗೂ ಇಲಾಖಾ ಕಾರ್ಯಕ್ರಮಗಳಿಗೆ ಸೇವಾ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಅಂಬೇಡ್ಕರ್‌ ಭವನದಷ್ಟು ಸ್ಥಳವಕಾಶ ವಾಗಲೀ, ಶೌಚಾಲಯವಾಗಲಿ ಇಲ್ಲ. ಸಾರ್ವಜನಿಕರು ಸಂಘ ಸಂಸ್ಥೆಯವರು ಈ ಕಾರಣಕ್ಕೆ ಖಾಸಗಿ ಹಾಲ್ಗಳಲ್ಲಿ ಕಾರ್ಯಕ್ರಮ ನಡೆಸುವ ಅನಿವಾರ್ಯತೆ ಎದುರಾಗಿದೆ.

Advertisement

10 ಲಕ್ಷ ರೂ. ಹಿಂದಕ್ಕೆ

ಅಂಬೇಡ್ಕರ್‌ ಭವನದ ದುರಸ್ತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಈ ಹಿಂದೆ 10 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆಗ ಕೆಲವರು ದುರಸ್ತಿಗೆ ವಿರೋಧಿಸಿ ನೂತನ ಅಂಬೇಡ್ಕರ್‌ ಭವನಕ್ಕೆ ಒತ್ತಾಯಿಸಿದರು. ಇದರಿಂದ ದುರಸ್ತಿ ಕಾರ್ಯವೂ ಸ್ಥಗಿತ ವಾಗಿತ್ತು. ನೂತನ ಅಂಬೇಡ್ಕರ್‌ ಭವನಕ್ಕೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ಬರೆಯ ಲಾಗಿತ್ತಾದರೂ ಅದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ.

ಅಂಬೇಡ್ಕರ್‌ ತಣ್ತೀರಕ್ಷಣಾ ವೇದಿಕೆ ಮನವಿ

ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹಾಗೂ ಬಡ ಕುಟುಂಬದ ಮದುವೆ ಕಾರ್ಯಕ್ರಮಗಳಿಗೆ ಅನುಕೂಲಕವಾಗಿರುವ ಅಂಬೇಡ್ಕರ್‌ ಭವನವನ್ನು ದುರಸ್ತಿಗೊಳಿಸಬೇಕೆಂದು ಅಂಬೇಡ್ಕರ್‌ ತಣ್ತೀ ರಕ್ಷಣಾ ವೇದಿಕೆಯವರು ತಹಶೀಲ್ದಾರ್‌ ಕುಂಞಿ ಅಹಮ್ಮದ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ತಹಶೀಲ್ದಾರರು ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಶೀಘ್ರ ದುರಸ್ತಿಗೊಳಿಸಿ

ಅಂಬೇಡ್ಕರ್‌ ಭವನ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದರೂ, ದುರಸ್ತಿ ಕಾರ್ಯವನ್ನು ನಡೆಸಿಲ್ಲ. ಬೆಳ್ಳಾರೆಯಲ್ಲಿ ಬಡ ಕುಟುಂಬಗಳಿಗೆ ಶುಭ ಸಮಾರಂಭ ನಡೆಸಲು ಸೂಕ್ತವಾದ ಸಮುದಾಯ ಭವನವೇ ಇಲ್ಲದಿರುವುದು ವಿಪರ್ಯಾಸ. ಅಂಬೇಡ್ಕರ್‌ ಭವನ ಸಂಘಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕರವಾಗಿತ್ತು. ಶೀಘ್ರ ದುರಸ್ತಿ ಕಾರ್ಯ ನಡೆಸಿದಲ್ಲಿ ಭವನ ಉಳಿಯಬಹುದು.
– ಸುಂದರ ಪಾಟಾಜೆ,ಅಧ್ಯಕ್ಷರು ಅಂಬೇಡ್ಕರ್‌ ತಣ್ತೀ ರಕ್ಷಣಾ ವೇದಿಕೆ, ಸುಳ್ಯ ತಾ|

ನೂತನ ಭವನಕ್ಕೆ ಪ್ರಯತ್ನ
ದುರಸ್ತಿಯ ಬದಲು ನೂತನ ಅಂಬೇಡ್ಕರ್‌ ಭವನ ನಿರ್ಮಾಣವಾದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸದ್ಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಸಭೆ ನಡೆಸಲು ಅವಕಾಶ ನೀಡುತ್ತಿದ್ದೇವೆ. ಪಂಚಾಯತ್‌ ಸ್ವಂತ ನಿಧಿ ಬಳಸಿ ಭವನದ ಕಾರ್ಯ ಆರಂಭಿಸಬಹುದು. ಬಳಿಕ ದೇಣಿಗೆ ರೂಪದಲ್ಲಿ ಪಡೆದು ಭವನ ನಿರ್ಮಿಸಬಹುದು. ಈ ಬಗ್ಗೆ ಪ್ರಯತ್ನಿಸಲಾಗುವುದು.
– ಧನಂಜಯ ಕೆ.ಆರ್‌. ಗ್ರಾ.ಪಂ. ಪಿಡಿಒ
ಗ್ರಾಮಸಭೆ ನಡೆಸಲೂ ಜಾಗವಿಲ್ಲ!

ಬೆಳ್ಳಾರೆ ಗ್ರಾ.ಪಂ.ನ ಗ್ರಾಮಸಭೆಗೆ 200-300 ಜನ ಸೇರಿದರೆ ಸಭೆ ನಡೆಸಲು ಸರಕಾರಿ ಶಾಲೆಯನ್ನೇ ಅವಲಂಬಿಸಬೇಕಿದೆ. ಹಿಂದೆ ಅಂಬೇಡ್ಕರ್‌ ಭವನದಲ್ಲಿ 150-200 ಜನರನ್ನು ಸೇರಿಸಿ ಗ್ರಾಮಸಭೆ ನಡೆಸಲಾಗುತ್ತಿತ್ತು. ಸದ್ಯ ಪಂಚಾಯತ್‌ ಸಭೆಗಳು, ಇಲಾಖಾ ಸಭೆಗಳು ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯುತ್ತಿದೆ. ಇಲ್ಲಿಯೂ 100ಕ್ಕೂ ಅಧಿಕ ಜನ ಕುಳಿತುಕೊಳ್ಳುವುದು ಅಸಾಧ್ಯ. ಅಂಬೇಡ್ಕರ್‌ ಭವನವನ್ನು ದುರಸ್ತಿಪಡಿಸಿದಲ್ಲಿ ಹಲವು ಕಾರ್ಯಕ್ರಮಗಳಿಗೆ ಪ್ರಾಯೋಜನವಾಗುತ್ತದೆ ಎನ್ನುತ್ತಾರೆ ಇಲ್ಲಿನ ಸಂಘಸಂಸ್ಥೆಯವರು.

ಉಮೇಶ್‌ ಮಣಿಕ್ಕಾರ
Advertisement

Udayavani is now on Telegram. Click here to join our channel and stay updated with the latest news.

Next