Advertisement

ಧ್ಯಾನಕ್ಕೆ ಭೂಮಿ ಇದು…

12:40 PM Nov 03, 2019 | Lakshmi GovindaRaju |

ದಟ್ಟ ಕಾಡಿನ ನಡುವೆ ಪುಟ್ಟ ಊರು. ಸದಾ ಹಕ್ಕಿಗಳ ಗಿಲಕಿ. ಆ ಚಿಲಿಪಿಲಿಯನ್ನು ತಣ್ಣಗೆ ಆಲಿಸುವಾಗ, ಅಲ್ಲೇ ಸನಿಹದಿಂದ ಸಂಗೀತದ ಸಪ್ತಸ್ವರಗಳ ಠೇಂಕಾರ ಕೇಳುತ್ತಿತ್ತು. ಕೆನಡಾದ ಪ್ರಜೆ ಮ್ಯಾಥ್ಯೂ ಕಟ್ಟಿದ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ಕುಳಿತ “ಗೌಳಿ’ ಮಕ್ಕಳು, ಗಂಧರ್ವ ಲೋಕ ಕಟ್ಟುವ ಸುಂದರ ಸಾಹಸದಲ್ಲಿದ್ದರು.

Advertisement

ಹಿಂದೂಸ್ತಾನಿ ಸಂಗೀತದ ರಾಜಧಾನಿ ಅಂತಲೇ ಕರೆಯಲ್ಪಡುವ ಧಾರವಾಡಕ್ಕೆ, ಸಂಗೀತ ಕಲಿಯಲೆಂದೇ ಎಲ್ಲೆಲ್ಲಿಂದಲೋ ಜನ ಬರುತ್ತಾರೆ. ಹಾಗೆ ಸಂಗೀತದ ಸೆಳೆತಕ್ಕೆ ಸಿಲುಕಿದವರಲ್ಲಿ ಮ್ಯಾಥ್ಯೂ ಕೂಡ ಒಬ್ಬರು. ಪಂ. ಮಲ್ಲಿಕಾರ್ಜುನ ಮನ್ಸೂರರ ಸಂಗೀತಕ್ಕೆ ಬೆರಗಾದ ಕೆನಡಾ ಪ್ರಜೆ ಮ್ಯಾಥ್ಯೂ, 15 ವರ್ಷಗಳ ಹಿಂದೆಯೇ ಧಾರವಾಡಕ್ಕೆ ಬಂದಿಳಿದರು.

ಮ್ಯಾಥ್ಯೂ ಹುಟ್ಟಿದ್ದು, ಬೆಳೆದಿದ್ದು ಡೆನ್ಮಾರ್ಕ್‌ನ ಕ್ಯುಬಿಕ್‌ ನಗರದಲ್ಲಿ. ವಿದೇಶ ಸಂಚಾರಗೈಯುತ್ತ ಈತ ಭಾರತಕ್ಕೆ ಬಂದ. ಇಲ್ಲಿನ ಸಂಸ್ಕೃತಿ ಮತ್ತು ಕಲೆಗೆ ಮರುಳಾದ. ಹಿಂದೂಸ್ತಾನಿ ಸಂಗೀತಕ್ಕೆ ಮನಸ್ಸನ್ನು ಕೊಟ್ಟು ಇಲ್ಲಿಯೇ ಉಳಿದು, ಸಂಗೀತಾಭ್ಯಾಸ ಆರಂಭಿಸಿದ. ಗುರುಕುಲ ಮಾದರಿಯಲ್ಲಿ ಸಂಗೀತ ಕಲಿಸಲು ಪಣ ತೊಟ್ಟು, ಧಾರವಾಡದಿಂದ 17 ಕಿ.ಮೀ. ದೂರದ ಕಲಕೇರಿಯನ್ನು, ಸ್ವರ ತಪಸ್ಸಿಗೆ ಆರಿಸಿಕೊಂಡ.

ಭಾಷೆ ಸವಾಲು…: ಮಕ್ಕಳಿಗೆ ಸಂಗೀತ ಕಲಿಸಬೇಕಾದರೆ ಮೊದಲು ತಾನು ಕನ್ನಡ ಕಲಿಯಬೇಕೆಂಬುದು ಮ್ಯಾಥ್ಯೂಗೆ ಚೆನ್ನಾಗಿ ಗೊತ್ತಿತ್ತು. ಕರುನಾಡಿಗೆ ಬರುತ್ತಿದ್ದಂತೆಯೇ ಧಾರವಾಡದ ಕನ್ನಡವನ್ನು ನಿಧಾನಕ್ಕೆ ಕಲಿತು, ಸ್ಥಳೀಯ ಹಳ್ಳಿಗರ ಮನಸ್ಸು ಗೆದ್ದ. ಕಲಕೇರಿಯ ಸುತ್ತಮುತ್ತ ಹೆಚ್ಚು ಇರುವುದೇ, ಬುಡಕಟ್ಟು ಗೌಳಿ ಜನಾಂಗದವರು. ಮ್ಯಾಥ್ಯೂ, ತನ್ನ ಪತ್ನಿ ಹಾಗೂ ಮಕ್ಕಳ ಜೊತೆಗೆಯೇ ಕಲಕೇರಿಯ ದಟ್ಟಡವಿಯಲ್ಲಿ ವಾಸ್ತವ್ಯ ಹೂಡಿ, ಅವರಿಗೂ ಕನ್ನಡ ಭಾಷೆ ಕಲಿಸಿದ.

ಶರಣರ ವಚನಕ್ಕೆ ತಲೆದೂಗಿ… ಮ್ಯಾಥ್ಯೂ ಸಂಗೀತದಲ್ಲಿ ಹೊರ ಹೊಮ್ಮಿಸಿದ್ದು, ಶರಣರ ವಚನಗಳನ್ನು. ಅದರಲ್ಲೂ ಬಸವಣ್ಣನವರ “ಎನ್ನ ಕಾಯವಾ ದಂಡಿಗೆಯ ಮಾಡಯ್ಯ’ ಎನ್ನುವ ವಚನ ಸಂಗೀತ ಶಾಲೆಯ ಎಷ್ಟೋ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಗೀತೆಯೇ ಆಗಿದೆ. ಮ್ಯಾಥ್ಯೂ ಕಟ್ಟಿದ ಈ ಸಂಗೀತ ಶಾಲೆ ಒಂದು ಸಮುದಾಯಕ್ಕಷ್ಟೇ ಸೀಮಿತವಾಗಿತ್ತು. ಆದರೆ, ಈಗ ಇಲ್ಲಿ ಹಳ್ಳಿಯ ಮಕ್ಕಳು ಜಾತಿ-ಬೇಧ ಮರೆತು ಕಲಿಯುತ್ತಿದ್ದಾರೆ.

Advertisement

ಈ ಸಂಗೀತ ಸಮಾನತೆ ತರಲು ಯತ್ನಸಿದ ಮ್ಯಾಥ್ಯೂ, ಇಲ್ಲಿನ ಜನರ ಪಾಲಿಗೆ ಅಪ್ಪಟ ಕನ್ನಡಿಗ. ಕೆಲಸ ನಿಮಿತ್ತ ಕೆನಡಾಕ್ಕೆ ಮರಳಿದ್ದರೂ, ಸಂಗೀತ ಶಾಲೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದ್ದಾರೆ. ಈ ಸಂಗೀತ ಶಾಲೆಗೆ, ಆಗಾಗ್ಗೆ ವಿದೇಶಿಗರೂ ಬರುತ್ತಾರೆ. ಹಾಗೆ ಬಂದವರೆಲ್ಲ ಕಡ್ಡಾಯವಾಗಿ, ಆಸಕ್ತಿಯಿಂದ ಕನ್ನಡ ಭಾಷೆ ಕಲಿಯುತ್ತಾರೆ. ಮ್ಯಾಥ್ಯೂ ಆಸೆ ಕೂಡ ಅದೇ ಆಗಿತ್ತು. “ಸ್ಥಳೀಯ ಭಾಷೆ ಎಲ್ಲರಿಗೂ ಕಡ್ಡಾಯವಾಗಬೇಕು ಎಂದು ಸಾರಿದ ಮ್ಯಾಥ್ಯೂ ಕೆನಡಿಗನೇ ಆದರೂ, ನಮ್ಮೊಳಗಿನ ಆದರ್ಶ ಕನ್ನಡತನವನ್ನು ಎಚ್ಚರಿಸುವ ಕೆಲಸ ಮಾಡಿದ’ ಎನ್ನುತ್ತಾರೆ, ಈ ಭಾಗದ ಜನರು.

ಸಂಗೀತದಿಂದ ಕನ್ನಡಿಗನಾದ…: ಸಂಗೀತ ಸಾಮ್ರಾಟ್‌ ಪಂ. ಮಲ್ಲಿಕಾರ್ಜುನ್‌, ಭಾರತವೂ ಸೇರಿದಂತೆ ಜಗದೆಲ್ಲೆಡೆ ಸಂಗೀತದ ಅಲೆ ಎಬ್ಬಿಸಿದವರು. ಮನ್ಸೂರರ ಊರಿನ ಪಕ್ಕದಲ್ಲೇ ಇದೀಗ ವಿದೇಶಿಗ ಮ್ಯಾಥ್ಯೂನ ಸಂಗೀತ ಸ್ವರಗಳು, ಮಧುರವಾಗಿ ಕನ್ನಡದ ವಚನ,ದಾಸರಪದಗಳನ್ನ ತೇಲಿಸುತ್ತಿವೆ. ಸಂಗೀತವೇ ಅವನನ್ನು ಕನ್ನಡಿಗನನ್ನಾಗಿಸಿದ್ದು, ವಿಸ್ಮಯವೂ ಹೌದು.

* ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next