Advertisement

ಬದ್ಧತೆಯಿಂದ ಕಾಯಕ ನಿಭಾಯಿಸಿದರೆ ಅದೇ ಸ್ವರ್ಗ

10:38 AM Feb 25, 2018 | Team Udayavani |

ಕಲಬುರಗಿ: ಕಾಯಕದ ಪರಿಕಲ್ಪನೆಯು ವಚನಕಾರರು ಜಗತ್ತಿಗೆ ಕೊಟ್ಟಿರುವ ಅತ್ಯಂತ ಅನ್ವಯಿಕ ಸಿದ್ಧಾಂತವಾಗಿದೆ. ಸ್ವಾವಲಂಬಿಯಾಗಿ ತಾನು ಮಾಡುವ ಕಾಯಕದಲ್ಲಿ ಸಂಪೂರ್ಣವಾಗಿ ತನು-ಮನ ಪ್ರಾಣವನ್ನು ತೊಡಗಿಸಿಕೊಂಡು ಬದ್ಧತೆಯಿಂದ ನಿಭಾಯಿಸಿದರೆ ಅದಕ್ಕಿಂತ ಬೇರೆಲ್ಲಿಯೂ ಸ್ವರ್ಗ-ಕೈಲಾಸವಾಗಲಿ ಇರುವುದಿಲ್ಲ ಎಂದು ಸಾಹಿತಿ ಕಲ್ಯಾಣರಾವ ಪಾಟೀಲ ಹೇಳಿದರು.

Advertisement

ನಗರದ ಅಪ್ಪನ ಕೆರೆಯ ಬಳಿ ಇರುವ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ನಡೆದ ಕಲಬುರಗಿ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಕಾಯಕಕ್ಕೆ ಹೆಸರುವಾಸಿಯಾಗಿದೆ. ಅಲ್ಲದೇ ಬಹುಧರ್ಮಧೇನು ನಿವಹಕ್ಕಾಡುಂಬೊಲಂ ಆಗಿದೆ ಎಂದ ಹೇಳಿದರು.

ನಮ್ಮ ಸಾಂಸ್ಕೃತಿಕ ಸಾಮರಸ್ಯ ಶಕ್ತಿ ಕೇಂದ್ರಗಳಲ್ಲಿನ ವಿವಿಧ ಆಯಾಮಗಳ ಕುರಿತು ಸಂಶೋಧನೆ ಮಾಡುವುದು ಅತ್ಯಂತ ಅಗತ್ಯವಿದೆ. ಮಹಾದಾಸೋಹಿ ಶರಣಬಸವೇಶ್ವರರು, ಮಹಾಸೂಫಿ ಸಂತ ಖಾಜಾ ಬಂದೇ ನವಾಜ್‌ ಗೇಸುದರಾಜ್‌ ಅವರು ಸಾಂಸ್ಕೃತಿಕ ಕಣ್ಣುಗಳು ಎಂದರೆ ತಪ್ಪಾಗದು. ವಿಶ್ವಕ್ಕೆ ಮಾದರಿಯಾಗಿರುವ ಬುದ್ಧ ವಿಹಾರ ಈ ನೆಲದ ಹೃದಯವಾಗಿದೆ. ಇಲ್ಲಿನ ಜೈನರ ಬಸದಿಗಳು, ಸಿಖರ್‌ ಗುರುದ್ವಾರ, ಕ್ರಿಸ್ತರ ಪ್ರಾರ್ಥನಾ ಮಂದಿರಗಳು ನಮ್ಮವರ ಬಾಳಿಗೆ ದಿಕ್ಸೂಚಿಯಾಗಿವೆ ಎಂದು ಅವರು ಬಣ್ಣಿಸಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ| ಡಿ.ಬಿ. ನಾಯಕ ಸಮ್ಮೇಳನ ಉದ್ಘಾಟಿಸಿದರು. ಹಿರಿಯ ಸಾಹಿತಿ ಡಾ| ಎಂ.ಜಿ. ಬಿರಾದಾರ ಸ್ಮರಣ ಸಂಚಿಕೆ ಮತ್ತು ಕಾಯಕ ಮಾರ್ಗಕೃತಿಗಳನ್ನು, ಮಕ್ಕಳ ಕವಿ ಎ.ಕೆ. ರಾಮೇಶ್ವರ ಅವರು ಬಸವಣ್ಣನವರ ವಚನಗಳಿಗೆ ವ್ಯಾಖ್ಯಾನ, ರಾಜ್ಯ ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ ಅವರು ಶರಣರ ಸ್ಮರಣೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಹೈದ್ರಾಬಾದ್‌ ಕರ್ನಾಟಕ ಹವ್ಯಾಸಿ ರಂಗ ಭೂಮಿ ನಾಟಕ, ಹಿರಿಯ ಸಾಹಿತಿ ಡಾ| ಸ್ವಾಮಿರಾವ ಕುಲಕರ್ಣಿ ಅವರು ಜ್ಞಾನ ಸಿಂಚನ ಕೃತಿ ಬಿಡುಗಡೆ ಮಾಡಿದರು. 

ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸಿದ್ದರು. ಮೊದಲು ಭುವನೇಶ್ವರಿ ದೇವಿ ಪೂಜೆಯೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಎಸ್‌. ಮಾಲಿಪಾಟೀಲ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ| ಶ್ರೀನಿವಾಸ ಸಿರನೂರಕರ್‌, ಪರಿಷತ್‌ ಪದಾ ಧಿಕಾರಿಗಳಾದ ಡಾ| ಎಸ್‌.ಎ. ವಡ್ಡನಕೇರಿ, ಡಾ| ಸಂಗಮೇಶ ಹಿರೇಮಠ, ವೆಂಕಟೇಸ ನೀರಡಗಿ, ಲಿಂಗರಾಜ ಸಿರಗಾಪುರ, ಡಾ| ಚಿ.ಸಿ. ನಿಂಗಣ್ಣ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next