Advertisement

ಜೇನು ಸಂತತಿ ಉಳಿಸುವುದು ರೈತರ ಹೊಣೆ

09:03 PM Sep 09, 2022 | Shwetha M |

ಮುದ್ದೇಬಿಹಾಳ: ನಾಡಿನಿಂದ ಜೇನು ಕಣ್ಮರೆಯಾದಲ್ಲಿ ಬಹುತೇಕ ಗಿಡ, ಬಳ್ಳಿಗಳಲ್ಲಿ ಹೂವು-ಕಾಯಿ ಕಟ್ಟುವ ಪ್ರಕ್ರಿಯೆ ಸ್ಥಗಿತವಾಗಿ ಕೃಷಿ ಉತ್ಪಾದನೆಯ ಕೊಂಡಿಯೇ ಕಳಚಿ ಬೀಳಲಿದೆ. ಇದನ್ನು ತಪ್ಪಿಸಲು ರಾಸಾಯನಿಕ ಕೃಷಿ ಪದ್ಧತಿ ಒತ್ತಡದಿಂದ ಅಳವಿನಂಚಿನಲ್ಲಿರುವ ಜೇನು ಸಂತತಿ ಉಳಿಸಿ-ಬೆಳೆಸುವುದು ಪ್ರತಿಯೊಬ್ಬ ರೈತರ ಜವಾಬ್ದಾರಿಯಾಗಿದೆ ಎಂದು ಕೃಷಿ ಚಿಂತಕ ಅರವಿಂದ ಕೊಪ್ಪ ಹೇಳಿದರು.

Advertisement

ಇಲ್ಲಿನ ಕೃಷಿ ಇಲಾಖೆ ಸಭಾಭವನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜೇನು ಕೃಷಿಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿರುವ ಸಂಪನ್ಮೂಲಗಳಿಗೆ ಹೋಲಿಸಿದ್ದಲ್ಲಿ ಪ್ರಸ್ತುತ ಜೇನು ಉತ್ಪಾದನೆ ತುಂಬ ಕಡಿಮೆ ಮತ್ತು ಬೇಡಿಕೆ ಜಾಸ್ತಿ ಇರುವುದನ್ನು ಅವಕಾಶವಾಗಿ ಪರಿವರ್ತಿಸಿಕೊಂಡಲ್ಲಿ ರೈತರು ಕೃಷಿಯೊಂದಿಗೆ ಜೇನು ಸಾಕಾಣಿಕೆಯನ್ನು ಸುಸ್ಥಿರ ಉದ್ಯೋಗವನ್ನಾಗಿಸಿಕೊಳ್ಳಬಹುದು ಎಂದರು.

ಮುಖ್ಯ ಅತಿಥಿಯಾಗಿ ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ ಮಾತನಾಡಿ, ಜೇನು ಸಾಕಾಣಿಕೆ ಮುಖ್ಯ ಉದ್ದೇಶ ಬೆಳೆಗಳಲ್ಲಿ ಪರಾಗ ಸ್ಪರ್ಶ ಹೆಚ್ಚಿಸುವುದು. ಜೇನು ಉತ್ಪಾದನೆ ಆಗಿರುವುದರಿಂದ ಜೇನು ಸಾಕಾಣಿಕೆಯಲ್ಲಿ ಆಸಕ್ತಿ ಇರುವ ರೈತರು ತೋಟಗಾರಿಕೆ ಇಲಾಖೆ ಸಹಾಯ ಪಡೆದು ಯಶಸ್ವಿಯಾಗಬೇಕು ಎಂದರು.

ಇಂಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಪ್ರೇಮಾ ಪಾಟೀಲ ಮಾತನಾಡಿ, ಜೇನು ಸಾಕಾಣಿಕೆ ಕೃಷಿ ಈ ಭಾಗದ ರೈತರಿಗೆ ಹೊಸ ಅನುಭವ ನೀಡಲಿದೆ. ಜೇನು ಕುಟುಂಬಗಳೊಡನೆ ಭಾವನಾತ್ಮಕ ಸಂಬಂಧ ಹೊಂದುವುದರಿಂದ ಸುಲಭವಾಗಿ ನಿರ್ವಹಿಸಲು ಸಾಧ್ಯವಿದೆ. ರೈತರು ಜೇನು ನೊಣಗಳ ಸ್ವಭಾವ ಮತ್ತು ವರ್ತನೆ ಗ್ರಹಿಸಿ ನಡೆದುಕೊಳ್ಳಬೇಕು ಎಂದರು.

Advertisement

ಸಂಪನ್ಮೂಲ ವ್ಯಕ್ತಿ ಗುರುರಾಜ ಉಪನ್ಯಾಸ ನೀಡಿ, ಜೇನು ಮತ್ತು ಜೇನು ಆಧರಿತ ಉತ್ಪನ್ನಗಳಲ್ಲಿ ವೈಧ್ಯಕೀಯ ಅಂಶಗಳಿರುವ ಕಾರಣ ಜೇನು ಸಾಕಾಣಿಕೆ ಹೆಚ್ಚು ಮಹತ್ವ ಪಡೆಯುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜೇನುಗಳಿಗೆ ತೋಟ ಪಟ್ಟಿಗಳಲ್ಲಿ ಪೂರಕ ವಾತಾವಾರಣ ಕಲ್ಪಿಸಿ ಸಾಕಾಣಿಕೆ ಆರಂಭಿಸಿದ್ದಲ್ಲಿ ಬಹುವಿಧ ಲಾಭ ಗಳಿಸಲು ಸಾಧ್ಯ ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಭಾಷ್‌ ಟಾಕಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೇನು ಕೃಷಿ ಮಹತ್ವ ಮತ್ತು ಜೇನುಗಾರಿಕೆ ಉತ್ತೇಜನಕ್ಕಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನದಡಿ ಪ್ರಗತಿಪರ ಜೇನು ಕೃಷಿಕರಿಗೆ ಜೇನು ಪೆಟ್ಟಿಗೆಗಳನ್ನು ಒದಗಿಸಿ ಈ ಭಾಗದಲ್ಲಿ ಜೇನು ಅಭಿವೃದ್ಧಿಗೆ ಪ್ರೋತ್ಸಾಹಿಸಲಾಗಿದೆ ಎಂದರು.

ಯಲ್ಲಾಪುರದ ಭಾಗ್ಯಶ್ರೀ ಜೇನು ಕೇಂದ್ರದ ತಿಮ್ಮಣ್ಣ ಭಟ್‌ ರೈತರಿಗೆ ಜೇನು ಸಾಕಾಣಿಕೆ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿ, ಜೇನು ನೊಣಗಳ ಬಗೆª, ಸಂತಾನೋತ್ಪತ್ತಿ, ಸಾಕಾಣಿಕೆ ಪದ್ಧತಿಗಳು, ಆಹಾರ ಕ್ರಮಗಳು, ಜೇನು ಉತ್ಪಾದನೆ, ಉಪ ಉತ್ಪನ್ನಗಳ ತಯಾರಿಕೆ, ಅಗತ್ಯ ಸಲಕರಣೆಗಳು, ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಅಗತ್ಯ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ಸಹಾಯಕ ತೋಟಗಾರಿಕೆ ಅಧಿಕಾರಿ ಶಫೀಕ ಬಾವೂರ ಸ್ವಾಗತಿಸಿ, ನಿರೂಪಿಸಿದರು. ವಿಠ್ಠಲ ಬನಸೋಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next