Advertisement

Puttur Crime: ತಾಯಿ, ಮಗನನ್ನು ಕಟ್ಟಿ ಹಾಕಿ ದರೋಡೆ

12:21 AM Sep 08, 2023 | Team Udayavani |

ಬಡಗನ್ನೂರು/ಪುತ್ತೂರು: ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆಯ ಮನೆಯೊಂದಕ್ಕೆ ಬುಧವಾರ ತಡರಾತ್ರಿ ದರೋಡೆ ಕೋರರು ನುಗ್ಗಿ ಮನೆಮಂದಿ ಯನ್ನು ಕಟ್ಟಿ ಹಾಕಿ 15 ಪವನ್‌ ಚಿನ್ನಾಭರಣ ಹಾಗೂ 40 ಸಾವಿರ ರೂ. ನಗದು ದೋಚಿದ್ದಾರೆ.

Advertisement

ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯ ಗುರುಪ್ರಸಾದ್‌ ರೈ ಕುದ್ಪಾಡಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ಧಾರೆ.

ತಡರಾತ್ರಿ ನುಗ್ಗಿದ ತಂಡ
ತಡರಾತ್ರಿ ಸುಮಾರು 2 ಗಂಟೆ ಹೊತ್ತಿಗೆ 7ರಿಂದ 8 ಮಂದಿ ಇದ್ದ ದರೋಡೆಕೋರರ ಗುಂಪು ಮನೆಯ ಹಿಂಬಾಗಿಲಿನಿಂದ ಮನೆಯೊಳಗೆ ಪ್ರವೇಶಿಸಿ ಈ ಕೃತ್ಯ ಎಸಗಿದೆ. ಮನೆ ಯಜಮಾನ ಗುರುಪ್ರಸಾದ್‌ ರೈ ಕುದ್ಕಾಡಿ ಹಾಗೂ ತಾಯಿ ಕಸ್ತೂರಿ ರೈ ಅವರಿಗೆ ದರೋಡೆಕೋರರ ಗುಂಪು ಚಾಕು ತೋರಿಸಿ ಬೆದರಿಸಿದ ಅನಂತರ ಅವರಿಬ್ಬರ ಕೈ ಕಟ್ಟಿ ಹಾಕಿ ಕಪಾಟಿನಲ್ಲಿಟ್ಟಿದ್ದ ಚಿನ್ನದ ಆಭರಣ ಹಾಗೂ ನಗದು ದೋಚಿ ಪರಾರಿಯಾಗಿದೆ.

ಗುರುಪ್ರಸಾದ್‌ ಅವಿವಾಹಿತ ರಾಗಿದ್ದು, ಒಬ್ಬರೇ ಮನೆಯಲ್ಲಿ ವಾಸಿಸುತ್ತಿದರು. ಬುಧವಾರ ಬೆಳಗ್ಗೆ ಕಾಸರಗೋಡಿನ ನಾರಂಪಾಡಿಯಲ್ಲಿದ್ದ ತಾಯಿಯು ಮಗನ ಮನೆಗೆ ಬಂದಿದ್ದರು. ಪಕ್ಕದ ಸಂಬಂಧಿಕರ ಮನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಬಂದಿದ್ದರು ಎನ್ನಲಾಗಿದೆ. ಇಬ್ಬರೂ ರಾತ್ರಿ ಊಟ ಸೇವಿಸಿ ನಿದ್ರಿಸಿದ್ದರು.

ಮೊಬೈಲ್‌ ಅನ್ನು ಎಸೆದರು

Advertisement

ದರೋಡೆ ಕೋರರು ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು. ಕೃತ್ಯಕ್ಕೆ ಮೊದಲು ಗುರುಪ್ರಸಾದ್‌ ರೈ ಅವರ ಮೊಬೈಲ್‌ ಅನ್ನು ನೀರಿನಲ್ಲಿ ಹಾಕಿದ್ದಾರೆ. ಮನೆ ಒಳಗೆ ಸಂಪೂರ್ಣವಾಗಿ ಜಾಲಾಡಿದ್ದಾರೆ. ಮನೆಯ ಮುಂದಿದ್ದ ಬೈಕ್‌ ಕೀಯನ್ನು ತೆಗೆದು ಎಸೆದು ಬೈಕಿನ ಪೆಟ್ರೋಲ್‌ ವಯರನ್ನು ಕೂಡ ತುಂಡು ಮಾಡಿರುವುದು ಬೆಳಕಿಗೆ ಬಂದಿದೆ.

ಮಂಕಿಕ್ಯಾಪ್‌, ಗ್ಲೌಸ್‌ ಧರಿಸಿದ್ದರು
ದರೋಡೆಕೋರರಲ್ಲಿ ಕೆಲವರು ಮಂಕಿಕ್ಯಾಪ್‌ ಧರಿಸಿದ್ದರು. ಕೈಗೆ ಗ್ಲೌಸ್‌ ಹಾಕಿದ್ದರು. ಉಳಿದವರು ಮುಸುಕು ಹಾಕಿಕೊಂಡಿದ್ದರು. ತಾಯಿ, ಮಗನ ಕೈ ಕಟ್ಟಿ ಹಾಕಿ ಕತ್ತಿ ತೋರಿಸಿ ಬೆದರಿಸಿದ್ದರು. ಕೃತ್ಯ ಮುಗಿಯುವ ತನಕವೂ ತಲವಾರಿನಿಂದ ಬೆದರಿಸುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ.

ಗೋದ್ರೆಜ್‌ ಒಡೆಯಲು ಒಂದೂವರೆ ತಾಸು!
ಮನೆಯೊಳಗೆ ದರೋಡೆಕೋರರು ಕಪಾಟು ಸಹಿತ ಎಲ್ಲೆಡೆ ಜಾಲಾಡಿದ್ದಾರೆ. ಗೋದ್ರೆಜ್‌ ತೆರೆಯಲು ಹರಸಾಹಸ ಪಟ್ಟಿದ್ದಾರೆ. ಒಂದೂವರೆ ತಾಸಿಗೂ ಅಧಿಕ ಕಾಲ ಪ್ರಯತ್ನಿಸಿ ಬೀಗ ತೆಗೆಯುವಲ್ಲಿ ಸಫ‌ಲರಾಗಿದ್ದರು. ಬೆಳಗ್ಗಿನ ಜಾವ 4 ಗಂಟೆ ಹೊತ್ತಿಗೆ ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮಾಹಿತಿ ತಿಳಿದವರಿಂದಲೇ ಕೃತ್ಯ ನಡೆದಿರುವ ಶಂಕೆ?
ಕುದ್ಕಾಡಿ ತೋಟದ ಮೂಲೆಮನೆ ನಿರ್ಜನ ಪ್ರದೇಶವಾಗಿದ್ದು, ಸುತ್ತಲೂ ಗುಡ್ಡಗಳಿಂದ ಆವೃತ್ತವಾಗಿದೆ. ಸಮೀಪದಲ್ಲಿ ಮನೆಗಳಿಲ್ಲ. ಗುಡ್ಡದ ಮೇಲಿನಿಂದ ಈ ಮನೆಗೆ ಹೋಗಲು ಕೆಲವು ಸಮಯ ತಗಲುತ್ತದೆ. ಈ ಗುಡ್ಡ ಇಳಿದು ಬರುವ ವಾಹನವನ್ನು ತಿರುಗಿಸಬೇಕಾದರೆ ಗುರುಪ್ರಸಾದ್‌ ರೈ ಅವರ ಅಂಗಳಕ್ಕೇ ಹೋಗಬೇಕಾಗುತ್ತದೆ. ಹಾಗಾಗಿ ಈ ಮನೆಯ ಮಾಹಿತಿ ಪೂರ್ಣವಾಗಿ ತಿಳಿದ ವ್ಯಕ್ತಿಯೇ ಈ ಘಟನೆಯ ಹಿಂದೆ ಇರುವ ಅನುಮಾನ ವ್ಯಕ್ತವಾಗಿದೆ.

ಕೆಲಸ ಬಿಟ್ಟು ಹೋಗಿದ್ದ ಕೂಲಿಯಾಳು
ಈ ಮನೆಯಲ್ಲಿ ಓರ್ವ ಕೂಲಿ ಕೆಲಸ ಮಾಡುತ್ತಿದ್ದು, ಈತ ಕೇರಳದ ಕಾಸರಗೋಡು ಭಾಗದ ನಿವಾಸಿ ಎನ್ನುವ ಮಾಹಿತಿ ಇದೆ. ಮೂರು ದಿನಗಳ ಹಿಂದೆ ಈತ ಕೆಲಸ ಬಿಟ್ಟು ಊರಿಗೆ ಹೋಗಿದ್ದ ಎನ್ನಲಾಗಿದೆ. ದರೋಡೆಕೋರರ ಗುಂಪು ನೆರೆಯ ಕೇರಳ ಭಾಗದವರಾಗಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕೂಲಿ ಕೆಲಸಗಾರನ ಸುಳಿವು ಆಧರಿಸಿ ತನಿಖೆ ನಡೆಯುವ ಸಾಧ್ಯತೆ ಇದೆ.

ಐಜಿಪಿ, ಎಸ್ಪಿ ಭೇಟಿ
ಘಟನ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ| ಚಂದ್ರಗುಪ್ತ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಭೇಟಿ ನೀಡಿದ್ದಾರೆ. ಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್‌, ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್‌. ಘಟನ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ವಿಧಿವಿಜ್ಞಾನ ತಂಡ ಹಾಗೂ ಶ್ವಾನದಳ ಬಂದು ಪರಿಶೀಲನೆ ನಡೆಸಿದೆ.

ಒಂಟಿ ಮನೆಗಳೇ ಟಾರ್ಗೆಟ್‌
ಇದೇ ಪರಿಸರದಲ್ಲಿ ಆರೇಳು ವರ್ಷಗಳ ಹಿಂದೆ ಬಡಗನ್ನೂರು ಗ್ರಾಮದ ಅಂಬಟೆಮೂಲೆ ಪಾದೆಕರ್ಯದ ಒಂಟಿ ಮನೆಯೊಂದಕ್ಕೆ ವಾಹನದಲ್ಲಿ ಬಂದ ತಂಡವೊಂದು ಹಾಡಹಗಲೇ ಮನೆಯಲ್ಲಿದ್ದ ಮನೆ ಮಾಲಕನ ಪತ್ನಿ ಹಾಗೂ ಕೆಲಸದಾಕೆಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ನಗದು ಹಾಗೂ ಆಭರಣವನ್ನು ದೋಚಿದ ಘಟನೆ ನಡೆದಿತ್ತು. ದರೋಡೆಕೋರರು ಮನೆಯಲ್ಲಿದ್ದ 40 ಗ್ರಾಂ ಚಿನ್ನ, ಅರ್ಧ ಕಿಲೋ ಬೆಳ್ಳಿ, 50 ಸಾವಿರ ರೂ. ನಗದು ದೋಚಿದ್ದಾರೆ. ತಂಡದಲ್ಲಿ ಒಟ್ಟು 9ರಿಂದ 10 ಮಂದಿ ಇದ್ದರು. ಕಾರಿನಲ್ಲಿ ಮನೆಗೆ ಬಂದ ತಂಡ ಕೃತ್ಯವನ್ನು ಎಸಗಿ ಪರಾರಿಯಾಗಿದ್ದರು. ಆಗಲೂ ದರೋಡೆಕೋರರು ತುಳು ಭಾಷೆ ಮಾತನಾಡುತ್ತಿದ್ದರು. ವಿಷ್ಣು ಭಟ್‌ ಅವರದ್ದು ಪಾದೆಕರ್ಯದಲ್ಲಿ ಒಂಟಿ ಮನೆಯಾಗಿದ್ದು, ಕೂಗಳತೆಯ ದೂರದಲ್ಲಿ ಯಾವುದೇ ಮನೆಗಳಿಲ್ಲ.

ಕಕ್ಕೂರಿನ ಭಯಾನಕ ಘಟನೆ
ಹತ್ತಾರು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಬೆಟ್ಟಂಪಾಡಿ ಗ್ರಾಮದ ಕಕ್ಕೂರಿನಲ್ಲಿ ದರೋಡೆ ಕೃತ್ಯ ನಡೆದಿತ್ತು. ವೆಂಕಟ್ರಮಣ ಭಟ್‌ ಅವರ ಮನೆಯಲ್ಲಿ ದರೋಡೆ ಕೃತ್ಯ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಈ ಕೃತ್ಯದಲ್ಲಿ ಭಟ್‌ ಅವರ ಮನೆಯಲ್ಲಿದ್ದ ಮೂವರು ಮಕ್ಕಳು ಹಾಗೂ ಪತ್ನಿ ಸಂಧ್ಯಾಳನ್ನು ಕೊಲೆ ಮಾಡಲಾಗಿತ್ತು. ಮನೆ ಮಾಲಕ ವೆಂಕಟ್ರಮಣ ಭಟ್‌ ನಾಪತ್ತೆಯಾಗಿದ್ದು, ಈ ತನಕವೂ ಪತ್ತೆ ಆಗಿಲ್ಲ. ವೆಂಕಟ್ರಮಣ ಭಟ್‌ ಅವರ ಮನೆಯೂ ಒಂಟಿ ಮನೆಯಾಗಿತ್ತು.

ಹಗ್ಗ ಬಿಚ್ಚಿ ಕಾಲು ಮುಟ್ಟಿ ನಮಸ್ಕರಿಸಿದರು
ದರೋಡೆಕೋರರ ಗುಂಪು ಚಿನ್ನಾ ಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗುವ ಮುನ್ನ ಗುರುಪ್ರಸಾದ್‌ ಅವರ ಕೈಗಳಿಗೆ ಕಟ್ಟಿ ಹಾಕಿದ್ದ ಹಗ್ಗವನ್ನು ಬಿಚ್ಚಿದ್ದಾರೆ. ಹೋಗುವ ಮೊದಲು ತಾಯಿ ಕಸ್ತೂರಿ ಹಾಗೂ ಗುರುಪ್ರಸಾದ್‌ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಸುಮಾರು 6 ಗಂಟೆಯ ಹೊತ್ತಿಗೆ ಗುರುಪ್ರಸಾದ್‌ ಪೊಲೀ ಸರಿಗೆ ವಿಷಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next