Advertisement

ವೃದ್ಧಾಶ್ರಮ ಸಂಸ್ಕೃತಿ ಹೆಚ್ಚುತ್ತಿರುವುದು ವಿಷಾದನೀಯ

12:21 PM Mar 29, 2019 | Team Udayavani |

ದಾವಣಗೆರೆ: ಅನೇಕ ಕಷ್ಟ ಕಾರ್ಪಣ್ಯಗಳ ನಡುವೆ ಬೆಳೆಸಿದ ಮಕ್ಕಳು ತಂದೆ-ತಾಯಿಯನ್ನ ವೃದ್ಧಾಶ್ರಮದ ಪಾಲು ಮಾಡುತ್ತಿರುವುದು ವಿಷಾದನೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ ಹೇಳಿದ್ದಾರೆ.

Advertisement

ಗುರುವಾರ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಆರ್‌ಎಂ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಸಹಯೋಗದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಜನ ಮಕ್ಕಳು ತಮ್ಮ ತಂದೆ-ತಾಯಿ ವೃದ್ಧಾಶ್ರಮದಲ್ಲಿ ನೀರಸ ಜೀವನ ನಡೆಸುವಂತೆ ಮಾಡುತ್ತಿದ್ದಾರೆ ಎಂದರು.

ಇಂದು ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನಲ್ಲಿ ಆಧುನಿಕ ಜೀವನವನ್ನು ನಡೆಸುತ್ತಿರುವ ಸಂದರ್ಭದಲ್ಲಿ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಅತ್ಯಂತ ಕಷ್ಟಪಟ್ಟು ಉತ್ತಮ ವಿದ್ಯಾಭ್ಯಾಸ ಕೊಡಿಸಿ ನೌಕರಿ ಹೊಂದುವಂತೆ ಮಾಡುತ್ತಾರೆ.

ಲಕ್ಷಗಟ್ಟಲೆ ಸಂಬಳ ಪಡೆಯುವಂತಹ ಆಶಯದೊಂದಿಗೆ ಜೀವನ ನಡೆಸುತ್ತಿರುವ ಅನೇಕರು ತಮ್ಮ ತಂದೆ-ತಾಯಿ ಸಾಕದೆ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.

ಆಧುನಿಕ ಭರಾಟೆಯಲ್ಲಿ ಮೌಲ್ಯಗಳು ಕುಸಿತವಾಗುತ್ತಿರುವ ಸಂದರ್ಭದಲ್ಲಿ ಜೀವನ ಮೌಲ್ಯವನ್ನು ಬಿತ್ತುವಂತಹ ಹಾಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ನೈತಿಕ ಮೌಲ್ಯವನ್ನು ಬೆಳೆಸಿ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧರಾಗುವಂತೆ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳ ಮೂಲಕ ಅಣಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

Advertisement

ಕರ್ನಾಟಕದ ಅರಸು ಮನೆತನಗಳ ಕೊಡುಗೆ… ವಿಷಯ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಸ್‌.ಟಿ.ಶಾಂತಗಂಗಾಧರ್‌, ಕರ್ನಾಟಕದಲ್ಲಿ ನೂರಕ್ಕು ಹೆಚ್ಚು ಅರಸು ಮನೆತನಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ. ಅಂತಹ ಪ್ರಮುಖ ಅರಸು ಮನೆತನಗಳಲ್ಲಿ 22ಕ್ಕೂ ಹೆಚ್ಚು ಅರಸು ಮನೆತನಗಳು ಆಡಳಿತಾತ್ಮಕ, ಸಾಂಸ್ಕೃತಿಕ, ಸಾಹಿತ್ಯಿಕ, ವಾಸ್ತುಶಿಲ್ಪ ಹಾಗೂ ಕನ್ನಡ ನಾಡುನುಡಿಗೆ ಮಹತ್ವ ಪೂರ್ಣ ಕೊಡುಗೆ ನೀಡಿವೆ ಎಂದು ಸ್ಮರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ದಾವಣಗೆರೆ ತಾಲೂಕಿನಲ್ಲಿ ಚಾಲ್ತಿ ವರ್ಷದಲ್ಲಿ 77 ದತ್ತಿ ಉಪನ್ಯಾಸ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ| ಡಿ.ಎಚ್‌. ಪ್ಯಾಟಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಸುಜ್ಞಾನಿಗಳನ್ನಾಗಿಸುವಲ್ಲಿ, ಸನ್ಮಾರ್ಗದ
ಕಡೆಗೆ ಕರೆದುಕೊಂಡು ಹೋಗುವಲ್ಲಿ, ಸ್ವಲ್ಪ ಮಟ್ಟಿಗಾದರೂ ಸಾಹಿತ್ಯ ಅಭಿರುಚಿ ಬೆಳೆಸುವಲ್ಲಿ ಕಾರಣೀಭೂತವಾಗುತ್ತವೆ ಎಂದರು.

ವಿಠ್ಠಲಪುರದ ರುದ್ರಪ್ಪ, ಕನ್ನಡ ವಿಭಾಗದ ಪ್ರೊ| ಡಿ. ಆಂಜಿನಪ್ಪ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ ಶೆಣೈ, ಎಸ್‌.ಎಂ. ಮಲ್ಲಮ್ಮ, ಬಿ.ಎಂ. ಮುರುಗಯ್ಯ, ಎಂ. ಷಡಕ್ಷರಪ್ಪ ಬೇತೂರು, ಬಿ.ಎಸ್‌. ಜಗದೀಶ್‌ ಇತರರು ಇದ್ದರು.

ಅಪ್ಸಾನಾಬಾನು ಪ್ರಾರ್ಥಿಸಿದರು. ಪ್ರೊ| ಡಿ.ಎನ್‌. ಮೌನೇಶ್ವರ ಸ್ವಾಗತಿಸಿದರು. ಕಾಡಜ್ಜಿ ಶಿವಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next