Advertisement

ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆ ಸಾಧ್ಯವೇ

09:29 AM Jun 30, 2019 | Suhan S |

ಧಾರವಾಡ: ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಇಂಗ್ಲಿಷ್‌ ಕಲಿಕೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ ಎಂಬುದನ್ನು ಸರ್ಕಾರ ಪರಾಮರ್ಶಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ|ಬರಗೂರು ರಾಮಚಂದ್ರಪ್ಪ ಹೇಳಿದರು.

Advertisement

ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್‌ ಹಾಗೂ ಜಿಲ್ಲಾ ಕನ್ನಡ ಭಾಷಾ ಬೋಧಕರ ಪರಿವಾರ ವತಿಯಿಂದ ಇಲ್ಲಿನ ಜೆಎಸ್‌ಎಸ್‌ ಕಾಲೇಜು ಆವರಣದ ಸನ್ನಿಧಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕನ್ನಡ ಭಾಷಾ ಬೋಧಕರ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಡೀ ಶಿಕ್ಷಣ ಕ್ಷೇತ್ರ ಇಂದು ಗೊಂದಲದ ಗೂಡಾಗಿದೆ. ಶೈಕ್ಷಣಿಕ ಸ್ವಾಯತ್ತತೆ ಹಾಗೂ ಸಮಾನತೆ ಹಾಳಾಗುತ್ತಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ ಎಂಬ ತರ್ಕಕ್ಕೆ ಬಿದ್ದು ಸರ್ಕಾರ ಇಂದು 47,928 ಸರ್ಕಾರಿ ಶಾಲೆಗಳಲ್ಲಿ ಒಂದು ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿದ್ದೀರಿ. ಹಾಗಾದರೆ ಇನ್ನುಳಿದ 46,928 ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ ಎಂಬುದನ್ನು ಸರ್ಕಾರ ಪರಾಮರ್ಶಿಸಿಕೊಳ್ಳಬೇಕು. ಅಂಗನವಾಡಿಯಿಂದಲೇ ಶಿಕ್ಷಣದಲ್ಲಿ ಅಸಮಾನತೆ ತಂದು ಹಸುಗೂಸುಗಳಲ್ಲಿ ಅಸಮಾನತೆ ಬೀಜ ಬಿತ್ತಲಾಗುತ್ತಿದೆ. ಇದು ಅಮಾನವೀಯತೆ ಎಂದರು.

ಜಾಗತಿಕರಣ ವೇಳೆ ಈ ದೇಶದ ಪ್ರಾದೇಶಿಕ ಭಾಷೆಗಳಿಗೆ ಹೊಡೆತ ಬಿದ್ದಿದೆ. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ. 1973ರಿಂದ ಕನ್ನಡ ಭಾಷೆ ಅಧಃಪತನದ ಹಾದಿಯಲ್ಲಿದೆ ಎಂದು ತಾವು ಕೇಳುತ್ತ ಬಂದಿದ್ದೇನೆ. ಅಂದಿನಿಂದಲೂ ಜನ ಕನ್ನಡವನ್ನು ಉಸಿರಾಡುತ್ತ ಬಂದಿದ್ದಾರೆ. ಹಾಗಂತ ನಾವೆಲ್ಲರೂ ಮೈಮರೆಯುವಂತಿಲ್ಲ. ಈಗಾಗಲೇ ಜಗತ್ತಿನಲ್ಲಿ 30 ಸಾವಿರ ಭಾಷೆಗಳು ನಾಶವಾಗಿವೆ ಎಂದರು.

ಪ್ರಸ್ತುತ ಜಗತ್ತಿನಲ್ಲಿ 6703 ಭಾಷೆಗಳು ಇವೆ. 6703 ಭಾಷೆಗಳಲ್ಲಿ 10 ಭಾಷೆಗಳನ್ನು ಜಗತ್ತಿನಲ್ಲಿ ಮಾತನಾಡುತ್ತಾರೆ. ಅದರಲ್ಲಿ ಕನ್ನಡ ಭಾಷೆ ಪ್ರಚಲಿತವಾಗಿದೆ. ಜಗತ್ತಿನಲ್ಲಿ ನಾಶ ಹೊಂದುತ್ತಿರುವ 20 ಭಾಷೆಗಳಲ್ಲಿ ಕನ್ನಡವೂ ಸೇರಿದೆ. ಕನ್ನಡ ಬದುಕಿನ ಭಾಷೆಯಾದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ. ದೇಶದಲ್ಲಿ ಶೇ 22.5 ಉನ್ನತ ಶಿಕ್ಷಣ ಇದೆ. ಉನ್ನತ ಶಿಕ್ಷಣದಲ್ಲಿ ಬಹುರೂಪ ಬರಬೇಕು. ಅದರಂತೆ ಪ್ರಾಥಮಿಕ ಶಿಕ್ಷಣದಲ್ಲಿ ಏಕರೂಪತೆ ಬರಬೇಕು. ಶೈಕ್ಷಣಿಕ ಸ್ವಾಯತ್ತತೆ ಹಾಗೂ ಸಮಾನತೆಗಾಗಿ ಒಂದು ಚಳವಳಿ ಕಟ್ಟಬೇಕು. ಅದನ್ನು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ನಿರ್ಮಾಣ ಮಾಡಬೇಕು ಎಂದು ಹೇಳಿದರು.

Advertisement

ಡಾ|ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ ಅಧ್ಯಕ್ಷ ಡಾ|ಡಿ.ಎಂ. ಹಿರೇಮಠ, ಎಸ್‌. ಜಯಕುಮಾರ, ಸಾಹಿತಿ ಡಾ|ಸುಬ್ರಾವ್‌ ಎಂಟೆತ್ತಿನವರ, ಡಿಡಿಪಿಐಗಳಾದ ವಿದ್ಯಾ ನಾಡಿಗೇರ, ಗಜಾನನ ಮನ್ನಿಕೇರಿ, ಡಯಟ್ ಪ್ರಾಚಾರ್ಯ ಅಬುದುಲ್ ವಾಜೀದ್‌ ಖಾಜಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next