Advertisement

ಶರಾವತಿ ಉಳಿಸೋದು ನಮ್ಮ ಹಕ್ಕು

10:56 AM Jul 09, 2019 | Suhan S |

ಸೊರಬ: ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ವಿರೋಧಿಸಿ ತಾಲೂಕಿನ ವಿವಿಧ ಜನಪರ ಸಂಘಟನೆಗಳ ಹಾಗೂ ವಿವಿಧ ಸಂಸ್ಥಾನ ಮಠಗಳ ಮಠಾಧೀಶರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ಶರಾವತಿ ನೀರು ಆಂದೋಲನಾ ತಾಲೂಕು ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ, ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ಅಕ್ಕನ ಬಳಗ, ಅಜೇಯ, ಕನ್ನಡ ಸಾಹಿತ್ಯ ಪರಿಷತ್‌, ಜೆಸಿಐ ಸೇರಿದಂತೆ ಹತ್ತಾರು ವಿವಿಧ ಸಂಘಟನೆಗಳು, ವಿವಿಧ ಮಹಿಳಾ ಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಯೋಜನೆ ವಿರೋಧಿಸಿ ಪ್ರತಿಭಟನೆಗೆ ಸಾಥ್‌ ನೀಡಿದರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ತೆರಳಿದ ಪ್ರತಿಭಟನಾಕಾರರು ಪಪಂ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಯೋಜನೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಾನಕೇರಿ ಹಾಗೂ ಜಡೆ ಹಿರೇ ಮಠದ ಘನ ಬಸವ ಅಮರೇಶ್ವರ ಸ್ವಾಮೀಜಿ ಮಾತನಾಡಿ, ಸರ್ಕಾರ ಶರಾವತಿ ಹೆಸರಿನಲ್ಲಿ ಮಲೆನಾಡ ಜನರನ್ನು ಶರಶಯ್ಯೆಯಲ್ಲಿ ಮಲಗಿಸಿ ಹೊರ ರಾಜ್ಯದ ಜನರು ವಾಸಿಸಿರುವ ಬೆಂಗಳೂರಿನ ಜನರಿಗೆ ನೀರು ಕೊಡಲು ಮುಂದಾಗಿರುವುದು ಮೂರ್ಖತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಮಾತನಾಡಿ, ಶರಾವತಿ ಜಿಲ್ಲೆಯ ಜೀವನಾಡಿ, ಇಲ್ಲಿಯ ಜನರಿಗೆ ನೀರು ಉಪಯೋಗಬೇಕು. ಪ್ರಾಕೃತಿಕ ಸಂಪತ್ತು ಹೊಂದಿರುವ ಶರಾವತಿ ಮಡಿಲಿಗೆ ಕನ್ನ ಹಾಕಲು ಬಿಡುವುದಿಲ್ಲ. ಜಿಲ್ಲೆಯ ಜನರು ಸದಾ ಹೋರಾಟಕ್ಕೆ ಮುಂದಾಗುವಂತೆ ಮನವಿ ಮಾಡಿದರು.

Advertisement

ಹಿರೇಮಾಗಡಿ ಮುರುಘಾ ಮಠದ ಶಿವಮೂರ್ತಿ ಮುರುಘಾರಾಜೇಂದ್ರ ಸ್ವಾಮಿ, ಮೂಡಿಯ ಶಿವಲಿಂಗೇಶ್ವರ ಮಠದ ಸದಾಶಿವ ಮಹಾಸ್ವಾಮಿ, ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ, ಶರಾವತಿ ನೀರು ಆಂದೋಲನಾ ತಾಲೂಕು ಸಮಿತಿ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್‌.ಕೆ. ಮಂಜುನಾಥಗೌಡ, ಪ್ರಶಾಂತ ದೊಡ್ಡಮನೆ, ಅನ್ಸರ್‌, ಜಗದೀಶ್‌ ಕಕ್ಕರಸಿ, ಪ್ರವೀಣ್‌ ಹಿರೇಇಡಗೋಡು, ಪ್ರತಿಮಾ, ಡಾ.ಜ್ಞಾನೇಶ್‌, ಮಹೇಶ್ವರ ಹೆಗಡೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next