Advertisement

ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ: ಶಾಸಕ ಡಿ. ವೇದವ್ಯಾಸ ಕಾಮತ್‌

07:56 AM Apr 25, 2020 | mahesh |

ಮಂಗಳೂರು: ಶವ ಸಂಸ್ಕಾರ ವಿಚಾರದಲ್ಲಿ ಗುರುವಾರ ರಾತ್ರಿ ನಡೆದ ಘಟನೆ ನಾಗರಿಕರಲ್ಲಿ ಕೊರೊನಾ ಬಗ್ಗೆ ಇರುವ ತಪ್ಪು ತಿಳುವಳಿಕೆಯಿಂದ ನಡೆದಿದೆಯೇ ವಿನಾ ಉದ್ದೇಶಪೂರ್ವಕ ಅಲ್ಲ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ ಕೊರೊನಾ ಮಹಮಾರಿ ಮೊದಲ ಬಲಿ ಪಡೆದಾಗ ಇಂತಹದ್ದೇ ಘಟನೆ ಬೋಳೂರು ಪರಿಸರದಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕನಾಗಿ ನಾನು ಮತ್ತು ಸ್ಥಳೀಯ ಪಾಲಿಕೆ ಸದಸ್ಯ ಜಗದೀಶ ಶೆಟ್ಟಿ ಅವರು ಅಲ್ಲಿನ ನಾಗರಿಕರಲ್ಲಿ ಇರುವ ತಪ್ಪು ಗ್ರಹಿಕೆ ದೂರ ಮಾಡಿದ್ದೆವು. ಸೋಂಕು ಪೀಡಿತ ವ್ಯಕ್ತಿಯ ಮೃತದೇಹವನ್ನು ಸುಡುವುದರಿಂದ ಯಾವುದೇ ತೊಂದರೆ ಇಲ್ಲ, ದಹನದಿಂದ ಈ ವೈರಸ್‌ ಹರಡುವುದಿಲ್ಲ ಎಂದು ವೈಜ್ಞಾನಿಕ ಪ್ರಕಾರ ದೃಢಪಟ್ಟ ಮಾಹಿತಿ ನೀಡಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೆವು ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬರೂ ವಾಸ್ತವ ಅರಿತುಕೊಂಡು ಹೃದಯವಂತಿಕೆ, ಮಾನವೀಯತೆ, ಮನುಷ್ಯತ್ವ ತೋರುವ ಮೂಲಕ ಮೃತ ವ್ಯಕ್ತಿಯ ಮನೆಯವರಿಗೆ ಆಗುವ ದುಃಖವನ್ನು ಅರಿಯ
ಬೇಕಾಗಿದೆ. ಮುಂದಿನ ದಿನಗಳಲ್ಲಿ ಎವೆಲ್ಲರೂ ತಪ್ಪು ಮಾಹಿತಿಯಿಂದ ದೂರವಿದ್ದು ಜಿಲ್ಲಾಡಳಿತ ದೊಂದಿಗೆ ಸಂಪೂರ್ಣ ಕೈ ಜೋಡಿಸಬೇಕು. ತಪ್ಪು ಮಾಹಿತಿ ಬಂದರೂ ವಿಚಲಿತರಾಗದೆ ಸಂಯಮ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಶ್ಮಶಾನದ ಪರಿಸರವನ್ನು ಸಂಪೂರ್ಣ ಸ್ಯಾನಿಟೈಜ್‌ ಮಾಡುವ ಮೂಲಕ ಜಿಲ್ಲಾಡಳಿತ ಮುಂಜಾಗ್ರತೆ ವಹಿಸುತ್ತದೆ. ಜವಾಬ್ದಾರಿಯುತ ಶಾಸಕನಾಗಿ ನಾನು ನಮ್ಮ ಜನರಿಗೆ ಅನ್ಯಾಯ ಮಾಡುವುದಿಲ್ಲ. ತಪ್ಪು ಮಾಹಿತಿ ಕೊಡುವುದಿಲ್ಲ. ಹಾಗಾಗಿ ತಾವೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

“ನನ್ನ ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಎಲ್ಲ ರೀತಿಯಿಂದಲೂ ನನಗೆ ಕಾಳಜಿ ಇದೆ. ಹೀಗಿರುವಾಗ, ಕ್ಷೇತ್ರದ ಜನರು ಯಾವುದೇ ಸಂದರ್ಭಗಳಲ್ಲಿಯೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜನರ ಸುರಕ್ಷತೆ ನಮ್ಮೆಲ್ಲರ ಮೊದಲ ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ’ ಎಂದು ಶಾಸಕರು ಭರವಸೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next