ವಿಜಯಪುರ : ಬೆಂಗಳೂರಿನಲ್ಲಿ ನಡೆದ ಶಾಸಕರ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ,ಗೃಹ ಸಚಿವ ಪರಮೇಶ್ವರ ಅವರಿಗೆ ಪತ್ರ ಬರೆದಿರುವುದು ಸಹಜ ಪ್ರಕ್ರಿಯೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂವಿಧಾನಾತ್ಮಕವಾಗಿ ಯಾವುದೇ ಜಾತಿ, ಧರ್ಮದವನೇ ಇದ್ದರೂ ಅಪರಾಧಿ ಇದ್ದರೂ ಶಿಕ್ಷೆ ಆಗಬೇಕು ಹಾಗೂ ನಿರಪರಾಧಿ ಶಿಕ್ಷೆ ನೀಡಬಾರದು ಎನ್ನುತ್ತದೆ. ಹೀಗಾಗಿ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಶಾಶಕರು ತಮಗೆ ಬರೆದ ಪತ್ರದ ಕುರಿತು ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಗೃಹ ಸಚಿವರು ಸೂಚಿಸಿದ್ದಾರೆ ಎಂದರು.
ಸದರಿ ಪ್ರಕರಣದಲ್ಲಿ ಎನ್‍ಐಎ ತನಿಖೆ ನಡೆಯುತ್ತಿದ್ದು, ಗೃಹ ಸಚಿವ ಪರಮೇಶ್ವರ ಅವರು ಬರೆದಿರುವ ಪತ್ರದಿಂದ ತನಿಖೆಗೆ ಯವುದೇ ಸಮಸ್ಯೆ ಆಗದು ಹಾಗೂ ಕೇಂದ್ರದ ಜೊತೆ ಯಾವುದೇ ಸಂಘರ್ಷವೂ ಆಗದು. ಗೃಹ ಸಚಿವರು ಶಾಸಕರು ಬರೆದ ಪತ್ರದ ಕುರಿತು ಪರಿಶೀಲಿಸುವಂತೆ ಪತ್ರ ಬರೆದರ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಪೊಲೀಸರ ಬಗ್ಗೆ ಮಾತನಾಡುವ ಪೊಲೀಸರ ನೈತಿಕ ಸ್ಥೈರ್ಯದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರು ಪೊಲೀಸರನ್ನು ನಾಯಿಗೆ ಹೋಲಿಸಿದ್ದನ್ನು ಮರೆತಿದ್ದಾರೆ. ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವಲ್ಲಿ ನಮ್ಮ ಸರ್ಕಾರ, ಮುಖ್ಯಮಂತ್ರಿಗಳು, ಸಚಿವರು ಸಮರ್ಥರಿದ್ದಾರೆ ಎಂದರು.
ಇಷ್ಟಕ್ಕೂ ಯತ್ನಾಳ ಅವರು ಹೇಳಿದಂತೆ ಸರ್ಕಾರ ನಡೆಯಲ್ಲ, ನಡೆಸಲೂ ಆಗಲ್ಲ. ಯಾವುದೇ ಜಾತಿ ಧರ್ಮದವರಿದ್ದರೂ ತಪ್ಪು ಮಾಡಿದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಹೀಗಾಗಿ ಗೃಹ ಸಚಿವರು ಬರೆದಿರುವ ಪತ್ರದಿಂದ ಪೆÇಲೀಸರ ನೈತಿಕತೆ ಕಡಿಮೆ ಆಗದು ಎಂದರು.
ಹರಿಪ್ರಸಾದ ಹೇಳಿಕೆ : ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ ಹೇಳಿಕೆ ಸೇರಿದಂತೆ ಪಕ್ಷದಲ್ಲಿನ ಯಾರೇ ನೀಡುವ ಹೇಳಿಕೆ ಬಗ್ಗೆ ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಾರೆ ಎಂದ ಸಚಿವ ಎಂ.ಬಿ.ಪಾಟೀಲ, ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವಷ್ಟು ನಾನು ದೊಡ್ಡವನಲ್ಲ. ಹೀಗಾಗಿ ಅವರ ಹೇಳಿಯನ್ನು ನಿರ್ಲಕ್ಷಿಸುತ್ತೇನೆ ಎಂದರು.