Advertisement

ಭ್ರಷ್ಟಾಚಾರ ನಿಲ್ಲಿಸಲು ಹೊರಟರೆ ಅಧಿಕಾರ ಇರೋಲ್ಲ

11:45 AM Jun 12, 2018 | Team Udayavani |

ಬೆಂಗಳೂರು: “ಆಡಳಿತ ವ್ಯವಸ್ಥೆಯಲ್ಲಿ ಹೆಮ್ಮರವಾಗಿ ಬೆಳೆದಿರುವ ಭ್ರಷ್ಟಾಚಾರವನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಆಗುವುದಿಲ್ಲ. ಒಂದೊಮ್ಮೆ ಭ್ರಷ್ಟಾಚಾರ ಸಂಪೂರ್ಣವಾಗಿ ನಿಲ್ಲಿಸಲು ಮುಂದಾದರೆ ನನ್ನನ್ನು ಎರಡು ನಿಮಿಷ ಅಧಿಕಾರದಲ್ಲಿ ಇರಲು ಬಿಡುವುದಿಲ್ಲ’ ಹೀಗೆ ಹೇಳಿದವರು ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ.

Advertisement

ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಸೋಮವಾರ ಗಾಂಧಿ ಭವನಕ್ಕೆ ಭೇಟಿ ಕೊಟ್ಟ ವೇಳೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಮತ್ತಿತರ‌ರ ಸಮ್ಮುಖದಲ್ಲಿ, ಎಚ್‌ಡಿಕೆ ತಮ್ಮ ಅಸಹಾಯಕತೆ ತೋಡಿಕೊಂಡರು.

“ಇತ್ತೀಚೆಗೆ ನಾನು ಶೃಂಗೇರಿ ಮಠಕ್ಕೆ ಭೇಟಿ ಕೊಟ್ಟಾಗ “ನೀವು ಮಠಕ್ಕೆ ಏನೂ ಮಾಡುವುದು ಬೇಡ, ಆದರೆ ಭ್ರಷ್ಟಾಚಾರ ನಿಲ್ಲಿಸಿ’ ಎಂದು ಸ್ವಾಮೀಜಿ ಹೇಳಿದ್ದರು. ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನ ಮಾಡುತ್ತೇನೆಂದು ಗುರುಗಳಿಗೆ ಹೇಳಿದ್ದೆ. ಭ್ರಷ್ಟಾಚಾರ ಬೆಳೆದಿರುವ ಪರಿ ಕಂಡರೆ ಗಾಬರಿಯಾಗುತ್ತದೆ. ಅದನ್ನು ಎಲ್ಲಿಂದ ಸರಿಪಡಿಸಬೇಕು ಎಂದು ಯೋಚನೆ ಮಾಡಿದರೆ ದಿಕ್ಕೇ ತೋಚುವುದಿಲ್ಲ,’ ಎಂದರು.

“ಭ್ರಷ್ಟಾಚಾರಕ್ಕೆ ವರ್ಗಾವಣೆ ಮೂಲ ಬೇರು. ವಿಧಾನಸೌಧದಲ್ಲಿ ವರ್ಗಾವಣೆ ಧಂದೆಗೆ ಮಧ್ಯವರ್ತಿಗಳಿದ್ದಾರೆ. ಈ ಜಾಲ ಬಹಳ ವ್ಯವಸ್ಥಿತ ಮತ್ತು ಅಷ್ಟೇ ಗಟ್ಟಿಯಾಗಿದೆ. ಅಧಿಕಾರಿಗಳ ಹಣದ ದಾಹಕ್ಕೆ ಕೊನೆ ಇಲ್ಲದಂತಾಗಿದೆ. ಒಂದು ವರ್ಗಾವಣೆ ಮಾಡಲು 5ರಿಂದ 10 ಲಕ್ಷ ಹಣ ಪಡೆಯುತ್ತಾರೆ.

ಇದನ್ನೆಲ್ಲ ಗಮನಿಸಿದರೆ ಭಯ ಶುರುವಾಗುತ್ತದೆ. ಆದಾಗ್ಯೂ ಭ್ರಷ್ಟಾಚಾರ ಕಡಿವಾಣಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ. ನನ್ನ ಮಟ್ಟದಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.

Advertisement

ಈಗಿನ ಸಮ್ಮಿಶ್ರ ಸರ್ಕಾರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಅದನ್ನು ಕಾರ್ಯಗತಗೊಳಿಸುವುದು ನನ್ನ ಪಾಲಿಗೆ ಸವಾಲಿನ ಕೆಲಸ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ, ಹಿರಿಯ ಪತ್ರಕರ್ತ ಪಿ. ರಾಮಯ್ಯ, ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೇರಿ ಮತ್ತಿತರರು ಇದ್ದರು.

ಸಚಿವ ಸ್ಥಾನ ಸಿಗಲಿಲ್ಲ ಎಂದು ಗುಂಪುಗಾರಿಕೆ ಮಾಡುವುದು, ಪಕ್ಷ ಬಿಟ್ಟು ಹೋಗುತ್ತೇನೆ ಎನ್ನುವ ವರ್ತನೆ ಶಾಸಕರಿಗೆ ಗೌರವ ತರುವುದಿಲ್ಲ. ಆಯ್ಕೆ ಮಾಡಿದ ಜನರನ್ನು ಅವಮಾನಿಸಿದಂತಾಗುತ್ತದೆ. ಶಾಸನ ಸಭೆಗಳನ್ನು ಉತ್ತಮ ರೀತಿಯಲ್ಲಿ ನಡೆಸುವಂತಾಗಬೇಕು.
-ಎಚ್‌.ಎಸ್‌. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

ಹಣ ಮಾಡುವುದು ದಂಧೆಯಾಗಿದೆ. ಕೋಟಿಗಟ್ಟಲೆ ಹಣ ಮಾಡಿದರೂ ಸುಖ ಸಿಗುವುದಿಲ್ಲ. ಯಾವ ಅಂಗಡಿಯಲ್ಲೂ ಸುಖವನ್ನು ಮಾರುವುದಿಲ್ಲ. ದೇಶಕ್ಕಾಗಿ ಏನು ಮಾಡುತ್ತೇವೆ ಎಂಬುದು ಮುಖ್ಯ. ಖಾದಿ ಬಗ್ಗೆ ಅನುಕಂಪವಿದ್ದರೆ ಸಾಲದು ಅದು ಬದುಕುವಂತೆ ಮಾಡಬೇಕು.
-ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ

Advertisement

Udayavani is now on Telegram. Click here to join our channel and stay updated with the latest news.

Next