ಬೆಂಗಳೂರು: ಕಾವೇರಿ ನೀರಿನ ಮೇಲೆ ಅವಲಂಬಿತರಾಗಿರುವ ರೈತರು ಹಾಗೂ ಕುಡಿಯುವ ನೀರಿಗಾಗಿ ಅವಲಂಬಿತರಾಗಿರುವ ಜನ-ಜಾನುವಾರುಗಳ ಹಿತಾಸಕ್ತಿಯನ್ನು ಬಲಿಗೊಟ್ಟು ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಅನುಷ್ಠಾನ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ಧ ರಿಸಿರುವಂತೆ 15 ದಿನಗಳ ಕಾಲ ಕೆಆರ್‌ಎಸ್ ಮತ್ತು ಕಬಿನಿಯಿಂದ 5 ಸಾವಿರ ಕ್ಯುಸೆಕ್ ನೀರನ್ನು ಬಿಳಿಗುಂಡ್ಲುವಿಗೆ ಹರಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ, ಕರ್ನಾಟಕದ ಮನವಿಯನ್ನು ಪರಿಗಣಿಸಿ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿದ್ದಾರೆ. ಬರಪೀಡಿತವಾಗಿರುವ ರಾಜ್ಯದ ಜನತೆ ಹಾಗೂ ಜಾನುವಾರುಗಳ ಹಿತಾಸಕ್ತಿಯನ್ನು ಕಾಪಾಡಲು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸಮಿತಿಯ ಹಿಂದಿನ ನಿರ್ದೇಶನ ಗಳನ್ನು ಪಾಲಿಸಿದ್ದು, ಕಾವೇರಿ ಜಲಾನಯನ ಪ್ರದೇಶ ದಲ್ಲಿರುವ ಬಹುತೇಕ ತಾಲೂಕುಗಳು ಮುಂಗಾರು ವೈಫಲ್ಯದಿಂದ ತೀವ್ರ ಬರಕ್ಕೆ ತುತ್ತಾಗಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನೀರಿನ ಬಳಕೆ ಹೆಚ್ಚಿಸಿಕೊಂಡ ತ. ನಾಡು
ಜೂನ್‌ನಿಂದ ಸೆಪ್ಟಂಬರ್ ಮಧ್ಯದವರೆಗೆ 92 ದಿನ ಗಳ ಕಾಲ 100 ಟಿಎಂಸಿ ನೀರನ್ನು ತಮಿಳುನಾಡು ಬಳಸಿ ಕೊಂಡಿದ್ದು, ಇದು ಹಿಂದೆ 1987-88, 2002-03, 2012-13, 2016-17 ಹಾಗೂ 2017-18ರ ಬರಪರಿಸ್ಥಿತಿಯಲ್ಲಿ ಬಳಕೆಯಾದ ನೀರಿಗಿಂತಲೂ ಹೆಚ್ಚಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ಸಂಕಷ್ಟದ ಸ್ಥಿತಿಯಿದ್ದರೂ ತಮಿಳುನಾಡು ಭತ್ತವನ್ನು ವ್ಯಾಪಕ ವಾಗಿ ಬೆಳೆಯುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ನಮ್ಮ ಆವಶ್ಯಕತೆಗೆ ತಕ್ಕಷ್ಟು ನೀರಿಲ್ಲ
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಸೆ. 24ರ ವರೆಗೆ ಮಳೆಯಾಗುವ ಲಕ್ಷಣಗಳಿಲ್ಲ. ಕರ್ನಾಟಕದ ಬೆಳೆಗಳ ರಕ್ಷಣೆಗೆ 70 ಟಿಎಂಸಿ, ಕುಡಿಯುವ ನೀರಿಗೆ 33 ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ. ನಮ್ಮ ಸಂಗ್ರಹ 53 ಟಿಎಂಸಿ ಮಾತ್ರವಿದ್ದು, ನಮ್ಮ ಆವಶ್ಯಕತೆ ಪೂರೈಸಲು ಇದು ಸಾಲದು ಎಂದು ಪತ್ರದಲ್ಲಿ ವಿವರಿಸಲಾಗಿದೆ.