ನವದೆಹಲಿ: ಈ ಬಡ ಫಕೀರನ ಜೋಳಿಗೆಯನ್ನು ನೀವು ಪ್ರೀತಿಯ ಆಶೀರ್ವಾದಿಂದ ತುಂಬಿಸಿದ್ದೀರಿ. ನನಗೆ ದೇಶ ಮುನ್ನಡೆಸಲು ಪ್ರಚಂಡ ಬಹುಮತ ಕೊಟ್ಟಿದ್ದೀರಿ. ನಮ್ಮ ದೇಶವನ್ನು ಸಮೃದ್ದಗೊಳಿಸಲು ನಮ್ಮೆಲ್ಲರ ಶ್ರಮ ಅಗತ್ಯ. 5 ವರ್ಷದಲ್ಲಿ ದೇಶವನ್ನು ಹೊಸ ಹಾದಿಗೆ ಕೊಂಡೊಯ್ಯುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
2019ರ ಲೋಕಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾದ ಬಳಿಕ ಸಂಜೆ ದೆಹಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ನನ್ನ ಬಗ್ಗೆ ಗೊತ್ತಿಲ್ಲದಿದ್ದರೂ ನನಗೆ ಆಶೀರ್ವಾದ ಮಾಡಿದ್ದೀರಿ. ಈಗ 2019ರಲ್ಲಿ ನನ್ನ ಬಗ್ಗೆ ತಿಳಿದುಕೊಂಡು ಗೆಲ್ಲಿಸಿದ್ದೀರಿ. ಬಹುಮತದ ಮೂಲಕ ನನ್ನ ಮೇಲೆ ಹೊಸ ಜವಾಬ್ದಾರಿ ಹೊರಿಸಿದ್ದೀರಿ ಎಂದರು.
ಸುಮ್ಮನೆ ಕೆಲಸ ಮಾಡಲ್ಲ, ನಿಷ್ಠೆಯಿಂದ ಸೇವೆ ಮಾಡುತ್ತೇನೆ. ಈಗ ನಮ್ಮ ದೇಶವನ್ನು ಸರ್ವಮತದಿಂದ ಮುನ್ನಡೆಸಬೇಕಾಗಿದೆ. ನಮ್ಮ ವಿರೋಧಿಗಳಿದ್ದರೂ ಜೊತೆಗೆ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು. ಈ ಚುನಾವಣೆಯಲ್ಲಿಯೇ ಮೊದಲ ಬಾರಿಗೆ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಪ್ರಮುಖ ವಿಷಯವಾಗಿರಲಿಲ್ಲ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ಎರಡು ವಿಧದ ಜಾತಿಗಳಿವೆ. ಒಂದು ಬಡತನ, ಮತ್ತೊಂದು ಯಾವುದಾದರೂ ರೀತಿಯಿಂದಲಾದರೂ ಕೊಡುಗೆ ನೀಡುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬೇಕೆನ್ನುವ ಜನ ಎಂದು ಮೋದಿ ಪ್ರತಿಪಾದಿಸಿದರು.
ನಮ್ಮ ದೇಶದಲ್ಲಿ ನಮಗೆ ಸಂವಿಧಾನವೇ ಪರಮೋಚ್ಛ. 1984ರಲ್ಲಿ ಬಿಜೆಪಿ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ನಾವು ಈಗ ಎರಡನೇ ಬಾರಿ ಅಧಿಕಾರಕ್ಕೇರಿದ್ದೇವೆ. ಇದು ಮೋದಿಯ ವಿಜಯವಲ್ಲ, ಇದು ಭರವಸೆಯ ಮತ್ತು ಜನರ ಮಹಾತ್ವಾಕಾಂಕ್ಷೆಯ ಗೆಲುವಾಗಿದೆ ಎಂದು ಹೇಳಿದರು.