ಬೆಂಗಳೂರು: ನಾನು ಕೊಟ್ಟ ವರದಿ ನೈಜವಾಗಿದೆ. ವೈಜ್ಞಾನಿಕವಾಗಿದೆ. ಆದರೆ ವರದಿ ನೋಡದೆ ಅವೈಜ್ಞಾನಿಕವಾಗಿದೆ ಎನ್ನುವುದು ಸರಿಯಲ್ಲ ಎಂದು ಜಾತಿಗಣತಿ ವರದಿ ಸಿದ್ದ ಮಾಡಿದ ಕಾಂತರಾಜು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಜಾತಿ, ಲಿಂಗ, ಧರ್ಮ, ಅಸ್ತಿ-ಪಾಸ್ತಿ ಎಲ್ಲವೂ ಸೇರಿ ಗಣತಿ ವೇಳೆ 55 ಪ್ರಶ್ನೆ ಕೇಳಿದ್ದೇವೆ. 40 ದಿನ ಸಮೀಕ್ಷೆಯಾದ ಮೇಲೆ ಕೂಲಂಕಷವಾಗಿ ಅಂಕಿಅಂಶಗಳ ಸಮೇತ ವರದಿ ಸಿದ್ದ ಮಾಡಲಾಗಿದ ಎಂದರು.
ವರದಿ ಈಗ ಸರ್ಕಾರದ ಆಸ್ತಿ. ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ. ಒಕ್ಕಲಿಗರು, ಲಿಂಗಾಯತರು ವಿರೋಧ ಮಾಡಬಹುದು. ಆದರೆ ವರದಿ ಮೊದಲು ನೋಡಲಿ, ಅಮೇಲೆ ಅದು ಸರಿಯಿಲ್ಲ ಎಂದರೆ ವಿರೋಧ ಮಾಡಲಿ. ವರದಿ ನೋಡಿ ಅದರಲ್ಲಿ ತಪ್ಪಿದ್ದರೆ ನಾನು ಒಪ್ಪಿಕೊಳ್ಳುತ್ತೇನೆ. ಆಯೋಗದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಎಂದರು.
ಕಾರ್ಯದರ್ಶಿ ಸಹಿ ಇಲ್ಲ ಎನ್ನುವುದು ಸರಿಯಲ್ಲ. ವರದಿಯಲ್ಲಿ ತುಂಬಾ ವಾಲ್ಯೂಮ್ ಗಳು ಇವೆ. ಆದರೆ ಒಂದು ವಾಲ್ಯೂಮ್ ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೆ ಎಂದರು.
ಮೂಲ ಪ್ರತಿ ಕಾಣೆಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. 2019 ನಾನು ವರದಿ ಕೊಟ್ಟಿದ್ದೆ. ನಾನು ಇದ್ದಾಗ ಮೂಲ ಪ್ರತಿ ಇತ್ತು. ಈಗ ಇಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಈಗ ನಾನು ಹೊರಗೆ ಇದ್ದು ಮಾತನಾಡುವುದು ಸರಿಯಲ್ಲ. ಇದು ಜಾತಿಗಣತಿ ಅಲ್ಲ. ಇದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಎಂದು ಕಾಂತರಾಜು ಹೇಳಿದ್ದಾರೆ.
21 ಸಚಿವರು ವರದಿ ರಿಜೆಕ್ಟ್ ಮಾಡಬೇಕು ಎಂಬ ಪತ್ರ ಸಹಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ವರದಿ ಕೊಟ್ಟಿದ್ದೇನೆ. ಯಾರು ಬೇಕಾದರೂ ಅಭಿಪ್ರಾಯ ಹೇಳಬಹುದು. ರಿಜೆಕ್ಟ್ ಮಾಡಿ ಎಂದು ಹೇಳಬಹುದು. ಆದರೆ ಮೊದಲು ವರದಿ ನೋಡಲಿ ಅಮೇಲೆ ಯಾರು ಏನು ಬೇಕಾದರೂ ಹೇಳಲಿ. ವರದಿ ನೋಡದೆ ಸರಿಯಿಲ್ಲ ಎನ್ನುವುದು ಸರಿಯಲ್ಲ ಎಂದರು.