Advertisement

ಮಾವು ವಹಿವಾಟಿಗಿಲ್ಲ ನಿಪ ಆತಂಕ

02:32 PM May 29, 2018 | Team Udayavani |

ಬೆಂಗಳೂರು: ಕೇರಳವನ್ನು ಕಾಡುತ್ತಿರುವ ನಿಪ ವೈರಸ್‌, ರಾಜ್ಯದಲ್ಲಿ ಮಾವಿನ ಹಣ್ಣುಗಳ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ದೂರಾಗಿದೆ. ಬದಲಿಗೆ, ನಗರದಲ್ಲಿ ಈ ಬಾರಿ ಮಾವಿನ ಹಣ್ಣುಗಳ ವಹಿವಾಟು ಹಿಂದೆಂದಿಗಿಂತಲೂ ಉತ್ತಮವಾಗಿದೆ. ನಗರದಲ್ಲಿ ಮಾವು ಮೇಳ ಆರಂಭವಾದ ದಿನವೇ ಕೇರಳದಲ್ಲಿ ನಿಪ ವೈರಸ್‌ ವ್ಯಾಪಿಸಿ ಸುದ್ದಿಯಾಗಿತ್ತು.

Advertisement

ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಕರಾವಳಿ ಭಾಗದಲ್ಲೂ ವೈರಸ್‌ ಹರಡುವ ಭೀತಿಯಿತ್ತು. ಹೀಗಾಗಿ ಮಾವು ಮಾರಾಟದ ಮೇಲೆ ಇದು ಪ್ರಭಾವ ಬೀರಬಹುದು ಎಂಬ ಸಣ್ಣ ಆತಂಕ ಹಾಪ್‌ಕಾಮ್ಸ್‌, ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ನಿಗಮವನ್ನು ಕಾಡುತ್ತಿತ್ತು. ಆದರೆ, ಪ್ರಸ್ತುತ ಮಾವಿನ ವ್ಯಾಪಾರ ನೋಡಿದರೆ, ನಿಪ ಆತಂಕ ದೂರಾಗಿರುವುದು ಸ್ಪಷ್ಟವಾಗಿದೆ.

ಹಾಪ್‌ಕಾಮ್ಸ್‌ನಲ್ಲಿ ಮಾವು ಮೇಳ ಆರಂಭವಾಗಿ ವಾರ ಕಳೆದಿದ್ದು, ಎಲ್ಲ ಮಳಿಗೆಗಳಲ್ಲೂ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಜತೆಗೆ ಗ್ರಾಹಕರ ಬೇಡಿಕೆಯಂತೆ ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದ ಇನ್ಫೋಸಿಸ್‌, ಎಲ್‌ಸೀಟಾ ಮತ್ತು ಬಿಇಎಲ್‌ನಲ್ಲಿ ಸೋಮವಾರದಿಂದ ಹಾಪ್‌ಕಾಮ್ಸ್‌ ಮಳಿಗೆ ಆರಂಭವಾಗಿದೆ.

ಕಳೆದ ಬಾರಿ ಮಾವು ಬೆಳೆ ಬೇಗ ಕೈಸೇರಿತ್ತು. ಹೀಗಾಗಿ ವ್ಯಾಪಾರ ಕೂಡ ನಿರೀಕ್ಷೆಯಂತೆ ಉತ್ತಮವಾಗಿತ್ತು. ಆದರೆ ಈ ಬಾರಿ ಮಾವಿನ ಫ‌ಸಲು ಬರುವುದು ತಡವಾಗಿದೆ. ಕಾರಣ, ಮಾವು ಮೇಳವೂ ತಡವಾಗಿ ಶುರುವಾಗಿದೆ. ಈ ನಡುವೆ ನಿಪ ಭೀತಿ ಕೂಡ ಕಾಣಿಸಿಕೊಂಡಿದ್ದರಿಂದ ವಹಿವಾಟಿನ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗುವ ಆತಂಕವಿತ್ತು.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವು ಮಾರಾಟದಲ್ಲಿ ಶೇ.10ರ ಪ್ರಗತಿ ಕಂಡುಬಂದಿದೆ. ಒಂದು ತಿಂಗಳ ಕಾಲ ಮೇಳ ನಡೆಯಲಿರುವ ಕಾರಣ, ವಹಿವಾಟು ಮತ್ತಷ್ಟು ಉತ್ತಮವಾಗುವ ಲಕ್ಷಣಗಳಿವೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.

Advertisement

ಮೇಳ ಆರಂಭವಾದ ಒಂದೇ ವಾರದಲ್ಲಿ 73 ಟನ್‌ ಮಾವಿನ ಹಣ್ಣು ಮಾರಾಟ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ವಹಿವಾಟು 100 ಟನ್‌ ಮುಟ್ಟಲಿದೆ. ಕಳೆದ ಬಾರಿ ಇದೇ ವೇಳೆಗೆ 50 ಟನ್‌ ವ್ಯಾಪಾರ ನಡೆದಿತ್ತು. ಈ ಬಾರಿ ವಹಿವಾಟು ಪ್ರಮಾಣ ಉತ್ತಮವಾಗಿದೆ ಎಂದು ಹಾಪ್‌ಕಾಮ್ಸ್‌ನ ಅಧ್ಯಕ್ಷ ಚಂದ್ರೇಗೌಡ ಹೇಳಿದ್ದಾರೆ.

ಈ ಬಾರಿ ಹಣ್ಣಿನ ಗುಣಮಟ್ಟದ ಬಗ್ಗೆಯೂ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾದಾಮಿ, ಮಲ್ಲಿಕಾ, ಮಲಗೋವಾ ಮಾವು ಗ್ರಾಹಕರ ಆದ್ಯತೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ಇತರೆ ತಳಿಗಳಿಗೂ ಬೇಡಿಕೆ ಇದೆ. ವಿಶೇಷವೆಂದರೆ ಸಂಸ್ಕರಣೆ ಮಾಡಿದ ಹಣ್ಣುಗಳನ್ನೇ ಹಾಪ್‌ಕಾಮ್ಸ್‌ ಮಾರಾಟ ಮಾಡುವುದರಿಂದ ಗ್ರಾಹಕರು ನಿಪ ಭೀತಿಯಿಲ್ಲದೆ ಹಣ್ಣು ಖರೀದಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 320 ಹಾಪ್‌ಕಾಮ್ಸ್‌ ಮಳಿಗೆಗಳಿದ್ದು, ಪ್ರತಿ ದಿನ 12ರಿಂದ 13 ಟನ್‌ವರೆಗೆ ಮಾವಿನ ಹಣ್ಣಿನ ಮಾರಾಟ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಿಪ ಭಯ ಬಿಡಿ; ಹಣ್ಣು ತಿಂದು ನೋಡಿ: ಹಾಪ್‌ಕಾಮ್ಸ್‌ ನೇರವಾಗಿ ರೈತರಿಂದ ಮಾವು ಖರೀದಿಸುತ್ತದೆ. ಅಲ್ಲದೆ, ರಾಸಾಯಿನಿಕ ಮುಕ್ತ ಮಾವಿಗೆ ಆದ್ಯತೆ ನೀಡುತ್ತದೆ. ಇದರೊಂದಿಗೆ ಸಂಸ್ಕರಣೆ ಮಾಡಿದ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಮಾತ್ರ ಗ್ರಾಹಕರಿಗೆ ನೀಡುತ್ತಿದ್ದೇವೆ.

ಹೀಗಾಗಿ ಗ್ರಾಹಕರು ಹಾಪ್‌ಕಾಮ್ಸ್‌ ಮೇಲೆ ನಂಬಿಕೆ ಮೇಲೆ ಇಟು, ನಿಪ ಭಯ ಬಿಟ್ಟು ಮಾವಿನ ಖರೀದಿಯಲ್ಲಿ ತೊಡಗಿರುವುದು ಖುಷಿ ಕೊಟ್ಟಿದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್‌ ಹೇಳಿದ್ದಾರೆ.

ಬಾವಲಿ ತಿಂದು ಬಿಟ್ಟ ಹಣ್ಣು ತಿನ್ನುವುದರಿಂದ ನಿಪ ವೈರಾಣು ಹರಡುತ್ತದೆ ಎಂದು ಹೇಳಲಾಗುತ್ತಿದೆ. ಹೀಗೆ ಬಾವಲಿ ಅಥವಾ ನ್ನಾವುದೇ ಪಕ್ಷಿ, ಪ್ರಾಣಿ ಕಚ್ಚಿದ ಹಣ್ಣುಗಳನ್ನು ತೋಟಗಾರಿಕೆ ಇಲಾಖೆ ಎಂದಿಗೂ ಮಾರಾಟ ಮಾಡುವುದಿಲ್ಲ. ಅಲ್ಲದೆ, ಕರ್ನಾಟಕದಲ್ಲಿ ನಿಪ ಭೀತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

* ದೇವೇಶ ಸೂರಗುಪ್ಪ 

Advertisement

Udayavani is now on Telegram. Click here to join our channel and stay updated with the latest news.

Next