Advertisement

ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು ತರವಲ್ಲ

12:20 AM Jun 04, 2022 | Team Udayavani |

ಭಾರತದಲ್ಲಿ ಅಲ್ಪಸಂಖ್ಯಾಕರಿಗೆ ಕಿರುಕುಳ ನೀಡಲಾಗುತ್ತಿದೆ, ಹತ್ಯೆ ಮಾಡಲಾಗುತ್ತಿದೆ, ಹಲ್ಲೆ ನಡೆಸಲಾಗುತ್ತಿದೆ ಎಂಬ ಅಮೆರಿಕದ ವರದಿ ಖಂಡನಾರ್ಹ. ಅದರಲ್ಲೂ 2021ರ  ವರ್ಷಪೂರ್ತಿ ಇಂಥ ಘಟನೆಗಳು ನಡೆದಿವೆ ಎಂಬುದೂ ತರವಲ್ಲ. ಇಂಥ ವರದಿಗಳು ಭಾರತ ಮತ್ತು ಅಮೆರಿಕ ಇರಿಸಿಕೊಂಡಿರುವ ದ್ವಿಪಕ್ಷೀಯ ಸಂಬಂಧಗಳ ಮೇಲೆ ದೊಡ್ಡ ಪೆಟ್ಟು ನೀಡುತ್ತವೆ ಎಂಬುದನ್ನು ಆ ದೇಶ ಗಮನಿಸಬೇಕು.

Advertisement

ಅಮೆರಿಕದ ವರ್ತನೆ ಇದೇ ಮೊದಲಲ್ಲ. ಹಿಂದಿನಿಂದಲೂ ಅವಕಾಶ ಸಿಕ್ಕಾಗಲೆಲ್ಲ ಇಂಥ ವರದಿಗಳನ್ನು ಹೊರಡಿಸುವ ಮೂಲಕ ಮೂಗು ತೂರಿಸುವ ಕೆಲಸ ಮಾಡಿಕೊಂಡೇ ಬಂದಿದೆ. ಆದರೆ ಈ ಮಾಹಿತಿಗಳನ್ನು ಅಮೆರಿಕ ಹೇಗೆ ಸಂಗ್ರಹಿಸಿಕೊಂಡಿತು? ಆ ದೇಶದ ವರದಿಯ ಮೂಲ ಯಾವುದು ಎಂಬ ಬಗ್ಗೆ ನೋಡಬೇಕಾದುದು ಇಂದಿನ ಸ್ಥಿತಿಯಲ್ಲಿ ಪ್ರಮುಖವಾದದ್ದು.

ಅಮೆರಿಕದ ವರದಿಗೆ ಕೇಂದ್ರ ವಿದೇಶಾಂಗ ಇಲಾಖೆ ಸರಿಯಾಗಿಯೇ ತಿರುಗೇಟು ನೀಡಿದೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿಯೂ ಓಟ್‌ ಬ್ಯಾಂಕ್‌ ರಾಜಕೀಯವೇಕೆ ಎಂದು ಜರಿದಿದೆ. ಅಲ್ಲದೆ, ದುರುದ್ದೇಶಪೂರ್ವಕ ಮಾಹಿತಿ ಮತ್ತು ಪಕ್ಷಪಾತಿ ವಿವರಗಳನ್ನು ತೆಗೆದುಕೊಂಡು ಈ ವರದಿ ಸಿದ್ಧ ಮಾಡಲಾಗಿದೆ ಎಂದೂ ಹೇಳಿದೆ.

ಅಮೆರಿಕ ವಿದೇಶಾಂಗ ಇಲಾಖೆಯ ವರದಿ ಬಗ್ಗೆ ನಾವು ಗಮನಿಸಿದ್ದೇವೆ, ಅಮೆರಿಕದ ಅಧಿಕಾರಿಗಳು ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಸಂಬಂಧದಲ್ಲೂ ಓಟ್‌ ಬ್ಯಾಂಕ್‌ ರಾಜಕೀಯ ಮಾಡಿಕೊಂಡು ಬರುತ್ತಿರುವುದು ತೀರಾ ದುರದೃಷ್ಟಕರ ನಡೆ. ಇಂಥ ಮಾಹಿತಿಗಳನ್ನು ಸಂಗ್ರಹಿಸುವಾಗ ಪಕ್ಷಪಾತ ರಹಿತ ಮತ್ತು ಸದುದ್ದೇಶಪೂರ್ವಕ ಸಂಗತಿಗಳನ್ನು ಗಮನಿಸಿ ವಿಶ್ಲೇಷಿಸಬೇಕು ಎಂದು ಸರಿಯಾಗಿಯೇ ಟಾಂಗ್‌ ನೀಡಿದೆ.

ಭಾರತದ ವಿದೇಶಾಂಗ ಇಲಾಖೆ ಹೇಳಿರುವುದರಲ್ಲಿ ತಪ್ಪೇನಿಲ್ಲ. ಅಮೆರಿಕದಂಥ ದೇಶದಲ್ಲಿ ಆಗಾಗ್ಗೆ, ವೈಟ್‌ ಸುಪ್ರಿಮಸಿಯ ನೆಪದಲ್ಲಿ ಜನರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಹಲವಾರು ಬಾರಿ, ಅಲ್ಪಸಂಖ್ಯಾಕರು, ಕಪ್ಪುವರ್ಣೀಯರು, ಹೊರದೇಶದವರು ದುಷ್ಕರ್ಮಿಗಳ ಗುಂಡಿಗೆ ಪ್ರಾಣ ಬಿಡುತ್ತಿದ್ದಾರೆ. ಇತ್ತೀಚೆಗಷ್ಟೇ ಕಪ್ಪುವರ್ಣೀಯರೇ ಹೆಚ್ಚಾಗಿದ್ದ ಮಾಲ್‌ವೊಂದನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿ 10ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದನ್ನು ಅಮೆರಿಕ ಮರೆತಂತೆ ಕಾಣುತ್ತಿದೆ. ತನ್ನೊಡಲಲ್ಲೇ ಇಂಥ ಘಟನೆಗಳನ್ನು ನೋಡುತ್ತಿರುವ ಅಮೆರಿಕ, ಇನ್ನೊಂದು ದೇಶದ ಆಂತರಿಕ ಸಂಗತಿಗಳ ಬಗ್ಗೆ ಮೂಗು ತೂರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಬಹುತೇಕರ ಪ್ರಶ್ನೆಯಾಗಿದೆ.

Advertisement

ಪ್ರತಿಯೊಂದು ದೇಶದಲ್ಲೂ ತನ್ನ ನಾಗರಿಕರಿಗೆ ಭದ್ರತೆ ನೀಡಬೇಕು ಎಂಬುದು ಆಯಾ ಸರ್ಕಾರಗಳ ಉದ್ದೇಶವಾಗಿದೆ. ಹಾಗೆಯೇ ದೇಶಾದ್ಯಂತ ಗಲಭೆಗಳು ನಡೆಯಲಿ ಎಂದು ಸರಕಾರಗಳು ಬಯಸುವುದೂ ಇಲ್ಲ. ಹೀಗಾಗಿ, ಯಾವುದೇ ಘಟನೆಗಳು ನಡೆದರೂ ಆ ಘಟನೆಯ ಬಗ್ಗೆ ಪೂರ್ಣ ತನಿಖೆಯಾದ ಬಳಿಕ ಅಲ್ಲಿ ಏನಾಗಿದೆ ಎಂಬುದನ್ನು ಅರಿಯಬೇಕು. ಇದನ್ನು ಬಿಟ್ಟು ಯಾವುದೋ ಎನ್‌ಜಿಒಗಳು ನೀಡುವ ವರದಿಗಳನ್ನು ಆಧರಿಸಿ, ಇಡೀ ದೇಶಕ್ಕೆ ಅನ್ವಯವಾಗುವಂತೆ ವರದಿ ತಯಾರಿಸುವುದು ತಪ್ಪು ಎಂಬುದು ವಿದೇಶಾಂಗ ಇಲಾಖೆಯ ಅಭಿಪ್ರಾಯವಾಗಿದೆ. ಹಾಗೆಯೇ ಅಮೆರಿಕದಂಥ ಸರಕಾರ ಇನ್ನೊಂದು ದೇಶದ ಬಗ್ಗೆ ವರದಿ ತಯಾರಿಸುವಾಗ ಎಲ್ಲ ರೀತಿಯಲ್ಲೂ ಪುನರ್‌ವಿಮರ್ಶೆ ಮಾಡಿಕೊಳ್ಳಲಿ. ಆಗಷ್ಟೇ ನೈಜ ವರದಿ ಬರಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next