ಶಿವಮೊಗ್ಗ: ಕಾವೇರಿಯ ಹೋರಾಟ ದಿನೇ ದಿನೇ ಹೆಚ್ಚಾಗುತ್ತಿದೆ, ದುರಾದೃಷ್ಟವೆಂದರೆ ರಾಜ್ಯ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಕಾವೇರಿ ವಿಚಾರವನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಶಾಸಕ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿ, ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಸಿಗದ ಸಂದರ್ಭ ಸೃಷ್ಟಿ ಆಗಿದೆ.ಎಲ್ಲಿಯವರೆಗೆ ರಾಜ್ಯ ಸರಕಾರ ವಿಶ್ವಾಸ ಕಳೆದುಕೊಂಡಿದೆ ಎಂದರೆ ಕಾವೇರಿ ಕಣಿವೆ ಹೋರಾಟದ ರೈತರು ಸಹ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ನಡುವೆಯೂ ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಹಿನ್ನಡೆಯಾಗಿದೆ. ಈ ಭಾಗದ ರೈತರಿಗೆ ದೊಡ್ಡ ಆಘಾತವಾಗಿದೆ ಎಂದರು.
ಬೆಂಗಳೂರಿನಲ್ಲಿ ಬಿಜೆಪಿ ಸಹ ರಾಜ್ಯ ಸರಕಾರದ ವಿರುದ್ಧ ಹೋರಾಟ ಕೈಗೊಂಡಿದೆ. ನ್ಯಾಯ ಸಿಗುವವರೆಗು ನಾವು ನಮ್ಮ ಹೋರಾಟ ನಡೆಸುತ್ತೇವೆ. ಒಂದು ಕಡೆ ಬೆಂಗಳೂರು ಬಂದ್ ಕರೆ ಕೊಟ್ಟಿದ್ದಾರೆ, ಮಂಡ್ಯದಲ್ಲಿ ಹೋರಾಟ ನಡೆಯುತ್ತಿದೆ. ರಾಜ್ಯದ ಬೇರೆ ಬೇರೆ ಕಡೆ ಹೋರಾಟ ನಡೆಯುತ್ತಿದೆ. ಆದರೆ ರಾಜ್ಯ ಸರಕಾರ, ಮಂತ್ರಿಗಳು ಹೋರಾಟದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಐದು ಡಿಸಿಎಂ, ಆರು ಡಿಸಿಎಂ ಆಗಬೇಕು ಅಂತಾ ತಲೆ ಕೆಡಿಸಿಕೊಂಡಿದೆ ಹೊರತು ಕಾವೇರಿ ವಿಚಾರದಲ್ಲಿ ನ್ಯಾಯ ಕೊಡುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಕಿಡಿ ಕಾರಿದರು.
ದುರಂತ ಅಂದ್ರೆ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಇದು ರಾಜ್ಯದ ರೈತರಿಗೆ ಸಂಕಷ್ಟದ ಸಂದರ್ಭದಲ್ಲಿ ತೊಂದರೆ ಕೊಡುವುದು ಅಕ್ಷಮ್ಯ ಅಪರಾಧ ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ”ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಕನಸು ಹೊಂದಿದ್ದಾರೆ. ಈ ಕನಸು ನನಸು ಮಾಡಲು, ರಾಜ್ಯ ಹಾಗು ದೇಶದ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್, ಎನ್ ಡಿಎ ತೆಕ್ಕೆಗೆ ಬಂದಿರೋದು ಸ್ವಾಗತಾರ್ಹ ಸಂಗತಿ. ಬಿಜೆಪಿಯ ಎಲ್ಲಾ ನಾಯಕರು ಸ್ವಾಗತ ಮಾಡಿದ್ದಾರೆ” ಎಂದರು.