ಮಂಗಳೂರು: ಕೋವಿಡ್-19 ಸೋಂಕು ಹರಡುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಷೇಧಾಜ್ಞೆ, ನಿರ್ಬಂಧವಿದ್ದರೂ ಅದನ್ನು ಲೆಕ್ಕಿಸದೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜನರು ರಸ್ತೆಗಳಲ್ಲಿ ತಿರುಗಾಡುವುದು, ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ದೃಶ್ಯ ಬಹುತೇಕ ಕಡೆಗಳಲ್ಲಿ ಕಂಡುಬಂತು. ಆ ಮೂಲಕ, ಉಭಯ ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಣೆ ಪಾಲನೆಗೆ ಕಿಂಚಿತ್ತೂ ಮುತುವರ್ಜಿ ವಹಿಸುತ್ತಿಲ್ಲ ಎನ್ನುವುದು ವಾಸ್ತವ.
ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳಲ್ಲಿ ಮನ ಬಂದಂತೆ ತಿರುಗಾಡುತ್ತಿರುವುದು ಮುಂದುವರಿದಿದೆ. ಕೊನೆಗೆ ಇದನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾದ ಪ್ರಮೇಯ ಬಂತು. ಈ ರೀತಿಯ ಪ್ರವೃತ್ತಿ ಬುದ್ಧಿವಂತರ ಜಿಲ್ಲೆ ಎಂದು ಪರಿಗಣಿಸಲ್ಪಟ್ಟಿರುವ ಕರಾವಳಿಗೆ ನಿಶ್ಚಿತವಾಗಿಯೂ ಭೂಷಣವಾಗದು.
ಶತಮಾನದ ಮಹಾಮಾರಿ ಎಂದು ಜಾಗತಿಕವಾಗಿ ಪರಿಗಣಿತವಾಗಿರುವ ಕೋವಿಡ್-19 ರೋಗ ಉಭಯ ಜಿಲ್ಲೆಗಳಲ್ಲಿ ಆಪಾಯ ಘಂಟೆ ಬಾರಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಆತಂಕದ ವಲಯದಲ್ಲಿದೆ. ಮಂಗಳೂರಿನಲ್ಲಿ ಭಟ್ಕಳ ಮೂಲದ ಯುವಕನಲ್ಲಿ ರವಿವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ಇನ್ನಷ್ಟು ಗಂಭೀರತೆ ಪಡೆದುಕೊಳ್ಳುವುದರಿಂದ ಜಿಲ್ಲಾಡಳಿತ ಹಲವಾರು ನಿರ್ದೇಶನಗಳನ್ನು ನೀಡಿದೆ. ನಿರ್ಬಂಧಗಳನ್ನು ಘೋಷಿಸಿದೆ. ಆದರೆ ಸರಕಾರ ಈ ಕ್ರಮಗಳನ್ನು ಉಲ್ಲಂಘಿಸಿ, ಒಂದು ರೀತಿಯ ಉಡಾಫೆ ಮನೋಭಾವದ ವರ್ತನೆ ತೋರುತ್ತಿರುವುದು ಉಭಯ ಜಿಲ್ಲೆಗಳಲ್ಲಿ ಕಂಡುಬಂದಿದ್ದು, ಕಳವಳಕ್ಕೆ ಕಾರಣವಾಗಿದೆ.
ಕೋವಿಡ್-19 ಹರಡದಂತೆ ತಡೆಯುವಲ್ಲಿ ಮುಂಜಾಗ್ರತಕ್ರಮವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ವೈದ್ಯಕೀಯ ವಿಜ್ಞಾನಿಗಳು, ಆರೋಗ್ಯ ತಜ್ಞರ ಸಲಹೆಗಳನ್ನು ಆಧರಿಸಿ ಹಾಗೂ ವಿದೇಶಗಳಲ್ಲಿ ಈಗಾಗಲೇ ಕೊರೊನಾ ಬಾಧಿತ ರಾಷ್ಟ್ರಗಳಲ್ಲಿನ ಆಗಿರುವ ಬೆಳವಣಿಗೆಗಳನ್ನು ಮನಗಂಡು ಸರಕಾರ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸಾಮಾಜಿಕ ಅಂತರ (ಸೋಶಿಯಲ್ ಡಿಸ್ಟೆನ್ಸ್) ಕಾಯ್ದುಕೊಳ್ಳುವುದರಿಂದ ಕೋವಿಡ್-19ವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ ಎನ್ನುವ ಹಿನ್ನೆಲೆಯಲ್ಲಿ ಜನರ ಓಡಾಟವನ್ನು ನಿಯಂತ್ರಿಸಲು ಲಾಕ್‌ಡೌನ್ ಘೋಷಿಸಲಾಗಿದೆ.
ಸರಕಾರಿ ಕಚೇರಿಗಳಲ್ಲಿ ಎಲ್ಲ ಸರಕಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.ಖಾಸಗಿ ಕಚೇರಿಗಳಿಗೂ ರಜೆ ಘೋಷಿಸಲಾಗಿದೆ. ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದೆ. ಸರಕಾರಿ, ಖಾಸಗಿ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅವಶ್ಯಕ ಸಾಮಗ್ರಿಗಳನ್ನು ಹೊರತು ಪಡಿಸಿ ಉಳಿದ ಎಲ್ಲ ವಾಣಿಜ್ಯ ಮಳಿಗೆಗಳು, ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದೆಲ್ಲವೂ ಜನರು ಒಂದೆಡೆ ಹೆಚ್ಚು ಸೇರಬಾರದು ಎಂಬ ಉದ್ದೇಶದಿಂದಲೇ ಮಾಡಲಾಗಿದೆ. ಆದರೆ ಇದರ ಉದ್ದೇಶ ಗೊತ್ತಿದ್ದರೂ ಜಿಲ್ಲಾಡಳಿತದ ನಿರ್ದೇಶನಗಳನ್ನು ಧಿಕ್ಕರಿಸಿ ರಸ್ತೆಗಳಲ್ಲಿ ಮನಬಂದಂತೆ ತಿರುಗಾಡುವ ಪ್ರವೃತ್ತಿ ಮುಂದುವರಿದಿದೆ.
ಜಿಲ್ಲಾಡಳಿತದೊಂದಿಗೆ ಸಹಕರಿಸೋಣ
ಕೋವಿಡ್-19 ರೋಗದ ಗಂಭೀರತೆ ಹಾಗೂ ಇದನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಕ್ರಮಗಳಿಗೆ ಸಹಕರಿಸುವುದು ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಿದೆ. ಜಿಲ್ಲಾಡಳಿತ, ಸರಕಾರ ಕಾಲ ಕಾಲಕ್ಕೆ ಹೊರಡಿಸುವ ನಿರ್ದೇಶನಗಳನ್ನು ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸೋಣ. ಸರಕಾರ ರಜೆ ನೀಡಿರುವುದು ಮನೆಯಲ್ಲೇ ಇರಬೇಕು ಎಂಬ ಉದ್ದೇಶದಿಂದ. ಮಜಾಕ್ಕೆ ಬಳಸುವ ಪ್ರವೃತ್ತಿ ಬೇಡ. ಮನೆಯೊಳಗೆ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ಮಹಾಮಾರಿ ಕೋವಿಡ್-19 ವಿರುದ್ಧದ ಸಮರದಲ್ಲಿ ಕೈಜೋಡಿಸೋಣ.
ಭಾರೀ ಬೆಲೆ ತೆರಬೇಕಾದೀತು ಎಚ್ಚರ
ಕೋವಿಡ್-19 ರೋಗಕ್ಕೆ ಇದುವರೆಗೆ ನಿರ್ದಿಷ್ಟ ಯಾವುದೇ ಔಷಧ ಶೋಧನೆಯಾಗಿಲ್ಲ. ಸಾಮಾಜಿಕ ಅಂತರ (ಸೋಶಿಯಲ್ ಡಿಸ್ಟೆನ್ಸ್) ಕಾಯ್ದುಕೊಳ್ಳುವುದರಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ಕೋವಿಡ್-19ದ ಬಗ್ಗೆ ಆರಂಭದಲ್ಲಿ ನಿರ್ಲಕ್ಷ್ಯ ತೋರಿದ ಕಾರಣದಿಂದ ಚೀನ, ಇಟಲಿ, ಜರ್ಮನಿ, ಅಮೆರಿಕ ಮುಂತಾದ ದೇಶಗಳು ರೋಗ ನಿಯಂತ್ರಿಸಲು ಇದೀಗ ಹರಸಾಹಸಪಡುತ್ತಿವೆ. ಅತಿ ಹೆಚ್ಚು ಜನಸಂಖ್ಯೆ, ಜನದಟ್ಟನೆ ಹೊಂದಿರುವ ಭಾರತದಲ್ಲಿ ಒಂದೊಮ್ಮೆ ಕೋವಿಡ್-19 ಸ್ಫೋಟಿಸಿದರೆ ಇದರ ಪರಿಸ್ಥಿತಿ ಗಂಭೀರವಾಗಿರುತ್ತವೆ ಎಂಬುದಾಗಿ ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ. ಮಂಗಳೂರಿನಲ್ಲಿ ಒಂದು ಕೋವಿಡ್-19 ಪಾಸಿಟಿವ್ ಪ್ರಕರಣ ಈಗಾಗಲೇ ವರದಿಯಾಗಿದೆ. ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕೊಡಗು ಜಿಲ್ಲೆಯಲ್ಲಿ
ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದು ಕರಾವಳಿಗೆ ಎಚ್ಚರಿಕೆ ಘಂಟೆಯಾಗಿದೆ. ಆದುದರಿಂದ ಕೋವಿಡ್-19 ನಮಗೆ ಬರುವುದಿಲ್ಲ. ನಾವು ಸುರಕ್ಷಿತ ಎಂಬ ಹುಚ್ಚುಧೈರ್ಯ ತರವಲ್ಲ. ನಿರ್ಲಕ್ಷ್ಯ ತೋರಿದರೆ ಮುಂದೆ ಭಾರೀ ಬೆಲೆ ತೆರಬೇಕಾದಿತು ಎಚ್ಚರ.