ಕೋಲಾರ: ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತವೇ ಮುಖ್ಯವಾಗಬೇಕು. ದೇಶ ಹಾಗೂ ಜನರ ಪರವಾಗಿ ಸರ್ಕಾರ ತೆಗೆದು ಕೊಳ್ಳುವ ನಿರ್ಧಾರಗಳಿಗೆ ಬೆಂಬಲ ನೀಡ ಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದರು. ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕಸಬ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಗರದ ಕುರುಬರಪೇಟೆಯ ಬೀರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸುಮಂಗಲಿ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪೌರತ್ವ ತಿದ್ದುಪಡಿ ಬೆಂಬಲಿಸಿ: ದೇಶ ಸುಭದ್ರ ವಾಗಿದ್ದರೆ ಭಾರತೀಯ ಪ್ರಜೆಯೂ ಸುಭದ್ರ ವಾಗಿರುತ್ತಾನೆ. ಈ ದಿಸೆಯಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ, ಕಾಯ್ದೆಗಳನ್ನು ಬೆಂಬಲಿಸಬೇಕು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವತಿದ್ದುಪಡಿ ಕಾನೂನು ಬೆಂಬಲಿಸುವಂತೆ ಮನವಿ ಮಾಡಿದರು.
ನನ್ನ ಜೇಬಿನಿಂದ ಖರ್ಚು ಮಾಡಿದ್ದೇನೆ: ಕೋಲಾರಮ್ಮ ಕೆರೆ 800 ಎಕರೆ ವಿಸ್ತೀರ್ಣವಿದೆ. ಕೆರೆಯನ್ನು ಸರ್ಕಾರದ ಹಣ ತಂದು ಸ್ವತ್ಛಗೊಳಿಸುತ್ತಿಲ್ಲ. 40 ರಿಂದ 50 ಜೆಸಿಬಿ ಯಂತ್ರಗಳನ್ನು ಇಟ್ಟುಕೊಂಡು ಕೆಲಸ ಮಾಡಿದ್ದೇವೆ. ಅದರ ಖರ್ಚು ನನ್ನ ಜೇಬಿನ ಹಣದಿಂದ ಮಾಡಲಾಗಿದೆ. ಯಾರಿಂದಲೂ ನಯಾಪೈಸೆ ತೆಗೆದುಕೊಂಡಿಲ್ಲ. ಎಲ್ಲ ಮುಖಂಡರು ಜೊತೆಯಲ್ಲಿ ನಿಂತು ಸಹಕಾರ ನೀಡಿದ್ದಾರೆ, ನನಗೆ ಅಷ್ಟೇ ಸಾಕು ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ಕೆರೆ ಕೆರೆಯ ರೀತಿ ಇರಬೇಕೇ ಹೊರತು? ಕಾಡಿನ ರೀತಿಯಲ್ಲಿರಬಾರದು, ಹುಡುಗರಿಗೆ ದುಶ್ಚಟಗಳಿಗೆ ಹೇಳಿ ಮಾಡಿಸಿದ ಸ್ಥಳವಾಗ ಬಾರದು ಎಂದು ಕೋಲಾರಮ್ಮನ ಕೆರೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸ್ವತ್ಛಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿಪಡಿಸಬೇಕೆಂಬ ಕಾಳಜಿ ಇದೆ: ದೊಡ್ಡ ಹಳ್ಳಿಗಿಂತಲೂ ಕಡೆ ಆಗಿದೆ ಕೋಲಾರ ನಗರ. ನಗರಸಭೆ ಯಾವ ಪರಿಸ್ಥಿತಿಯಲ್ಲಿದೆ, ಏನು ಎತ್ತ ಎಂದು ನನಗೂ ಗೊತ್ತು. ಅಭಿವೃದ್ಧಿ ಮಾಡುವ ಸಲುವಾಗಿ ಎಲ್ಲರ ಆಶೀರ್ವಾದದಿಂದ ನಾನು ಗೆದ್ದು ಬಂದಿದ್ದೇನೆ. ನಾನು ಕೋಲಾರದ ಮಣ್ಣಿನ ಮಗ, ನನಗೂ ಕೋಲಾರ ನಗರಸಭೆ ಯನ್ನು ಅಭಿವೃದ್ಧಿಪಡಿಸ ಬೇಕೆಂಬ ಕಾಳಜಿ ಇದೆ. ಇದನ್ನು ಎಲ್ಲರೂ ಸೇರಿಕೊಂಡು ಮಾಡೋಣ ಎಂದು ಹೇಳಿದರು.
ಬಯಕೆಗಳು ಈಡೇರಲಿ: ಜನಜಾಗೃತಿ ವೇದಿಕೆ ಸದಸ್ಯ ಶಶಿಕುಮಾರ್, ಪ್ರಸ್ತುತ ಧನುರ್ಮಾಸ. ಪೌರಾಣಿಕ ಹಿನ್ನೆಲೆಯಲ್ಲಿ ಹೇಳುವುದಾದರೆ ಪಾರ್ವತಿ ತನಗೆ ಒಳ್ಳೆಯ ಪತಿ ಸಿಗಲಿ ಎಂದು ವ್ರತಾಚರಣೆ ಮಾಡಿ ಶಿವ ವನ್ನು ಪಡೆಯುತ್ತಾಳೆ. ಅಂತೆಯೇ ಸುಮಂಗಲಿ ಪೂಜೆ ಮಾಡುವ ಮೂಲಕ ಜ.15ರವರೆಗೆ ವ್ರತಾಚರಣೆ ಮಾಡಿ, ಅಂದುಕೊಂಡ ಬಯಕೆಗಳು ಈಡೇರಲಿ ಎಂದು ಆಶಿಸಿದರು.
ನಗರಸಭೆ ಸದಸ್ಯ ಎ.ಪ್ರಸಾದ್‌ಬಾಬುಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ. ವೆಂಕಟಮುನಿಯಪ್ಪ,ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ಜನಜಾಗೃತಿ ವೇದಿಕೆ ಸದಸ್ಯೆ ಅರುಣಾ, ನಗರಸಭೆ ಸದಸ್ಯರಾದ ನಾರಾಯಣಮ್ಮ, ಅಪೂರ್ವ ರಾಮಚಂದ್ರ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಡೆದ ಸುಮಂಗಲಿ ಪೂಜೆಯಲ್ಲಿ ನೂರಕ್ಕೂ ಹೆಚ್ಚು ಸುಮಂಗಲಿಯರು ಅರ್ಚಕರ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.