Advertisement

ವಿದ್ಯುತ್‌ ಸ್ವಾವಲಂಬನೆ ಸಾಧಿಸುವುದು ಮುಖ್ಯ

11:11 AM Jul 21, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ 8000 ಮೆಗಾವ್ಯಾಟ್‌ಗೆ ಏರಿಕೆಯಾಗಿದ್ದು, ನಾನಾ ಶಕ್ತಿ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಾಜ್ಯ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿಲ್ಲಿ ವಿದ್ಯುತ್‌ ನಿಗಮ ಕಾರ್ಯ ನಿರ್ವಹಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಗುರುವಾರ ನಡೆದ ಕರ್ನಾಟಕ ವಿದ್ಯುತ್‌ ನಿಗಮದ 48ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಸಾಕಷ್ಟು ಏರಿಕೆಯಾಗಿದೆ. ಸೌರ, ಪವನ ಶಕ್ತಿ ಸೇರಿದಂತೆ ಇತರೆ ಶಕ್ತಿ ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ನಿತ್ಯ ಸರಾಸರಿ 8000 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಆಗಾಗ್ಗೆ 1000 ಮೆಗಾವ್ಯಾಟ್‌ನಷ್ಟು ಕೊರತೆ ಸೃಷ್ಟಿಯಾಗುತ್ತದೆ. ಈ ಅಭಾವ ತಲೆದೋರದಂತೆ ತಡೆಯಲು ವಿದ್ಯುತ್‌ ಸ್ವಾವಲಂಬನೆ ಸಾಧಿಸಬೇಕಿದೆ. ಇದರಿಂದ ಸರ್ಕಾರಕ್ಕೂ ಹಣ ಉಳಿತಾಯವಾಗಲಿದೆ. ವಿದ್ಯುತ್‌ ಉತ್ಪಾದನಾ ವೆಚ್ಚ ತಗ್ಗಿಸುವ ನಿಟ್ಟಿನಲ್ಲೂ ನಿಗಮ ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಎರಡು ವರ್ಷಗಳಿಂದ ಭೀಕರ ಬರಗಾಲವಿದ್ದರೂ ರೈತರ ಕೃಷಿ ಚಟುವಟಿಕೆಗೆ, ಕೈಗಾರಿಕೆಗಳಿಗೆ ಹಾಗೂ ಜನತೆಗೆ ಅಗತ್ಯ ಪ್ರಮಾಣದಲ್ಲಿ ವಿದ್ಯುತ್‌ ಪೂರೈಸಿ ಕೊರತೆಯಾಗದಂತೆ ನಿಗಮವು ಪರಿಸ್ಥಿತಿ ನಿಭಾಯಿಸಿದೆ. ಮುಂದಿನ ವರ್ಷದ ಸಂಸ್ಥಾಪನಾ ದಿನಾಚರಣೆ ವೇಳೆಗೆ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ ಬಂದಿರುತ್ತದೆ ಎಂದು ತಿಳಿಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌, “ಸರ್ಕಾರದ ಅಧಿಕಾರಾವಧಿ ಪೂರ್ಣಗೊಳ್ಳುವುದರೊಳಗೆ ರಾಜ್ಯವು ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಪಾವಗಡದ ಬೃಹತ್‌ ಸೌರ ವಿದ್ಯುತ್‌ ಸ್ಥಾವರದ ಮಾದರಿಯಲ್ಲೇ ತಾಲೂಕು ಮಟ್ಟದಲ್ಲಿ 20 ಮೆಗಾವ್ಯಾಟ್‌ ಸಾಮರ್ಥಯದ ಸೌರ ಘಟಕಗಳ ಸ್ಥಾಪನೆಗೆ ಸಿದ್ಧತೆ ನಡೆದಿದ್ದು, ಸದ್ಯದಲ್ಲೇ 40 ತಾಲೂಕುಗಳಲ್ಲಿ ಘಟಕಗಳು ಆರಂಭವಾಗಲಿವೆ ಎಂದು ಹೇಳಿದರು.

Advertisement

ನಿಗಮದ ವಿದ್ಯುತ್‌ ಸ್ಥಾವರಗಳಲ್ಲಿನ ಸಿಬ್ಬಂದಿ ಹೆಚ್ಚು ಶ್ರಮ ವಹಿಸಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ಮುಂದಿನ ವರ್ಷದಿಂದ ಸಂಸ್ಥಾಪನಾ ದಿನಾಚರಣೆಯನ್ನು ರೊಟೇಷನ್‌ ಪದ್ಧತಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಆಚರಿಸುವತ್ತ ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟರು.

ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳು, ಅತ್ಯುತ್ತಮ ಸಾಧನೆ ತೋರಿದ ಅಧಿಕಾರಿಗಳು, ಕ್ರೀಡಾಕೂಟದಲ್ಲಿ ವಿಜೇತರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದ ನೌಕರ, ಸಿಬ್ಬಂದಿ ಮಕ್ಕಳನ್ನು ಗೌರವಿಸಲಾಯಿತು. ಕೆಪಿಸಿಎಲ್‌ ವ್ಯವಸ್ಥಾಪಕ ನಿದೇಶಕ ಜಿ.ಕುಮಾರ ನಾಯಕ್‌ ಇತರರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರಕ್ಕೆ ಯಾವುದೇ ಜಿಡಿಪಿ ಇಲ್ಲ. ರಾಜ್ಯಗಳ ಜಿಡಿಪಿ ಹೆಚ್ಚಾದರಷ್ಟೇ ದೇಶದ ಒಟ್ಟು ದೇಶೀಯ ಉತ್ಪನ್ನ ಹೆಚ್ಚಾಗಲು ಸಾಧ್ಯ. ಪ್ರತಿ ರಾಜ್ಯಗಳು ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತಂದರಷ್ಟೇ ಜಿಡಿಪಿ ಪ್ರಮಾಣ ಏರಿಕೆಯಾಗುತ್ತದೆ. ಆದರೆ ಕೇಂದ್ರ ಸರ್ಕಾರ ತನ್ನ ಜಿಡಿಪಿ ಹೆಚ್ಚಾಗುತ್ತಿದೆ ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next