ಬೀದರ: ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಕೌಠಾದ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ನುಡಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ದಿನದರ್ಶಿಕೆ- ಪಾಕೆಟ್ ಡೈರಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಅಗತ್ಯವಿದೆ. ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಬೆಳೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶರಣಪ್ಪ ಮಟ್ಟೂರ ಮಾತನಾಡಿ, ತಮ್ಮ ಶಾಸಕ ಅವಧಿಯಲ್ಲಿ ಶಿಕ್ಷಕರ ತಾರತಮ್ಯಗಳನ್ನು ಆದಷ್ಟು ನಿವಾರಣೆ ಮಾಡಲು ಪ್ರಯತ್ನಿಸಿದ್ದೇನೆ. ಮುಖ್ಯಶಿಕ್ಷಕರ ಮುಂಬಡ್ತಿ, ಶಿಕ್ಷಕರಿಗೆ ಹಾಗೂ ಮುಖ್ಯಶಿಕ್ಷಕರಿಗೆ ವಿಶೇಷ ಭತ್ಯೆ ಸೌಲಭ್ಯ ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡಿದ್ದೇನೆ. ಶಿಕ್ಷಕರ ಕಾಲ್ಪನಿಕ ವೇತನ, 1984 ರಿಂದ 1992ರ ವರೆಗೆ ಗುತ್ತಿಗೆ ಆಧಾರದ ಶಿಕ್ಷಕರಿಗೆ ತೊಂದರೆಯಾಗದಂತೆ ಮುಂಬರುವ ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಪಾಂಡುರಂಗ ಬೆಲ್ದಾರ ಮಾತನಾಡಿ, ಸಂಘವು ಶಿಕ್ಷಣ ಇಲಾಖೆ ಜೊತೆ ಕೈಜೋಡಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಶಿಕ್ಷಕರ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಹೇಳಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ ಮಾತನಾಡಿದರು. ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶೀತಲ್ ಚವ್ಹಾಣ ಸಂಘದ ಪಾಕೇಟ್ ಡೈರಿ ಬಿಡುಗಡೆ ಮಾಡಿದರು.
ರಾಜ್ಯ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಅಭಿವೃದ್ಧಿ ಪರಿಷತ್ ಸದಸ್ಯ ಜಾನ್ ವೆಸ್ಲಿ, ಅನುದಾನಿತ ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ರಘುನಾಥ ಭೂರೆ, ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ದಾನಿ ಬಾಬುರಾವ್, ಗೋವಿಂದ ಪೂಜಾರಿ, ಶಿವಕುಮಾರ ಬಾವಗೆ, ಅಕ್ಷರ ದಾಸೋಹದ ಎಂ.ಎಸ್. ವಿಭೂತಿ, ಮಲ್ಲಿಕಾರ್ಜುನ ಬಿರಾದಾರ, ಸೂರ್ಯಕಾಂತ ಸಿಂಗೆ, ಯೋಗರಾಜ ಕೆ., ಬಾಲಾಜಿ ಕಾಂಬಳೆ, ರವಿ ಕುಮೂರ, ಶೇಕ್ ಮಹೇಬೂಬ ಪಟೇಲ್ ಮತ್ತಿತರರು ಇದ್ದರು. ಮಹ್ಮದ ಪಟೇಲ್ ಸ್ವಾಗತಿಸಿದರು. ಕಲಾಲ್ ದೇವಿಪ್ರಸಾದ ನಿರೂಪಿಸಿದರು. ಸಂಜೀವಕುಮಾರ ಸ್ವಾಮಿ ವಂದಿಸಿದರು.