ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆ ಮತ್ತು ರಾಮಲಲ್ಲಾ ಪ್ರತಿಷ್ಠಾಪನೆ ರಾಜಕೀಯ ಘಟನೆ ಯಾಗಿದ್ದು, ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಉಪವಾಸ ವ್ರತ ಕೈಗೊಂಡಿರುವ ಬಗ್ಗೆ ಮಂಗಳವಾರ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ “ಇಂದು ಬೆಳಗಿನ ವಾಕ್ ಮಾಡುವಾಗ, ನನ್ನ ಜತೆಗಿದ್ದ ವೈದ್ಯರೊಬ್ಬರು, ‘ಆಹಾರವಿಲ್ಲದೆ 11 ದಿನಗಳವರೆಗೆ ಬದುಕಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು. ಯಾರಾದರೂ ಬದುಕುಳಿದಿದ್ದರೆ ಅದು ಪವಾಡ. ಹೀಗಾಗಿ ಮೋದಿ ಉಪವಾಸ ಆಚರಿಸಿರುವ ಬಗ್ಗೆ ಅನುಮಾನವಿದೆ” ಎಂದರು.
“ಮೋದಿ ದೇವಸ್ಥಾನದ ಗರ್ಭಗುಡಿಯಲ್ಲಿ ಉಪವಾಸವನ್ನು ಆಚರಿಸದೆ ಪೂಜೆ ಮಾಡಿದರೆ ಆ ಸ್ಥಳವು ಅಶುದ್ಧವಾಗುತ್ತದೆ ಮತ್ತು ಅಲೌಕಿಕ ಶಕ್ತಿ ಉತ್ಪಾದನೆಯಾಗುವುದಿಲ್ಲ. ಮೋದಿ ಅವರು 11 ದಿನಗಳ ಕಾಲ ಉಪವಾಸವನ್ನು ಆಚರಿಸಿದ್ದಾರೆ ಮತ್ತು ಕೇವಲ ಎಳನೀರಿನಿಂದ ಬದುಕುಳಿದರು ಎಂದು ಹೇಳುತ್ತಾರೆ. ಅವರ ಮುಖದಲ್ಲಿ ಆಯಾಸದ ಲಕ್ಷಣಗಳು ಕಾಣಲಿಲ್ಲ. ಅವರು ಉಪವಾಸ ಆಚರಿಸುತ್ತಾರೆಯೇ ಅಥವಾ ಇಲ್ಲವೇ ಎಂದು ಜನರ ಪ್ರಶ್ನಿಸುತ್ತಿದ್ದಾರೆ, ನಾನಲ್ಲ ಎಂದು ಮಾಜಿ ಕೇಂದ್ರ ಸಚಿವ ಮೊಯ್ಲಿ ಹೇಳಿದ್ದಾರೆ.
ಕಳೆದ 25 ವರ್ಷಗಳಲ್ಲಿ ಬಿಜೆಪಿ ರಾಮ ಮಂದಿರದ ಕುರಿತು ಹೇಳಿ ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ದೇವಸ್ಥಾನ ಸಿದ್ಧವಾಗಿದೆ. ಮುಂದೆ ಏನು? ಎಂದು ಪ್ರಶ್ನಿಸಿದರು.
ವ್ಯಾಪಕ ಆಕ್ರೋಶ
ಮೊಯ್ಲಿ ಅವರ ಹೇಳಿಕೆಗೆ ಬಿಜೆಪಿ ನಾಯಕರು ಸೇರಿ ಹಿಂದೂ ಪರ ಸಂಘಟನೆಗಳ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.