ಮುದ್ದೇಬಿಹಾಳ: ಸರ್ಕಾರ ವಿ ಧಿಸಿರುವ 14 ದಿನಗಳ ಜನತಾ ಕರ್ಫ್ಯೂನ ಮೂರನೇ ದಿನವಾದ ಬುಧವಾರ ಪೊಲೀಸರು ಲಾಠಿ ಬೀಸದೆ ಜನ ಮತ್ತು ವಾಹನ ಸಂಚಾರ ನಿಯಂತ್ರಿಸಲು ಸಾಕಷ್ಟು ಹೆಣಗಿದರು.
ಪೊಲೀಸರ ಲಾಠಿ ಏಟಿಗೆ ಜನರು ಬೆದರಿದ್ದ ಶೇ. 80ರಷ್ಟು ಸೆಮಿ ಲಾಕ್‌ಡೌನ್ ಯಶಸ್ವಿಯಾಗಿತ್ತು. ಆದರೆ ಲಾಠಿ ಬೀಸಲು ಸರ್ಕಾರ ನಿಯಂತ್ರಣ ಹೇರಿದ್ದರಿಂದ ಪೊಲೀಸರು ಅಸಹಾಯಕರಾಗಿ ತಮ್ಮ ಕಣ್ಣೆದುರೆ ನಿಯಮ ಉಲ್ಲಂಘಿಸಿ ಜನ ಸಂಚರಿಸುತ್ತಿದ್ದರೂ ಹೆಚ್ಚು ಆಸಕ್ತಿ ತೋರಿಸದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪೊಲೀಸರು ಲಾಠಿಯಿಂದ ಹೊಡೆಯೋದಿಲ್ಲ ಎನ್ನುವ ಭಂಡ ಧೈರ್ಯದಿಂದ ಜನ ರಾಜಾರೋಷವಾಗಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದದ್ದು ಹಲವೆಡೆ ಕಂಡು ಬಂತು.
ಪಟ್ಟಣದ ಬಸವೇಶ್ವರ, ಇಂದಿರಾ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಮುಂತಾದ ವೃತ್ತಗಳಲ್ಲಿ ಜನ, ವಾಹನಗಳ ಸಂಚಾರ ಕಳೆದ ಎರಡು ದಿನಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು. ಅಲ್ಲಲ್ಲಿ ಪೊಲೀಸರು ನಿಂತಿದ್ದರೂ ಬಹಳಷ್ಟು ಪೊಲೀಸರ ಕೈಯಲ್ಲಿ ಲಾಠಿ ಇಲ್ಲದಿರುವುದು, ಕೆಲವರ ಕೈಯಲ್ಲಿ ಲಾಠಿ ಇದ್ದರೂ ಬೀಸದೆ ಸುಮ್ಮನೆ ಹಿಡಿದುಕೊಂಡದ್ದು ನಿಯಮ ಉಲ್ಲಂಘಿಸುವವರಿಗೆ ಧೈರ್ಯ ತಂದು ಕೊಟ್ಟಂತಾಗಿತ್ತು.
ಬೆಳಗ್ಗೆ 6-10ರ ಅವ ಧಿ ಮುಗಿದ ನಂತರವೂ ಅಲ್ಲಲ್ಲಿ ಜನರು ಹೆಚ್ಚಿಗೆ ಇದ್ದದ್ದು, ತಳ್ಳು ಗಾಡಿಯವರು ರಸ್ತೆ ಪಕ್ಕದಲ್ಲೇ ಹಣ್ಣು, ಕಾಯಿಪಲ್ಲೆ ಮಾರುತ್ತ ನಿಂತಿರುವುದು ಸರ್ಕಾರದ ನಿಯಮಗಳಿಗೆ ಸೆಡ್ಡು ಹೊಡೆದಂತಾಗಿತ್ತು. ಬೆಳಗ್ಗೆ 10 ಗಂಟೆ ಅವಧಿ ಮುಗಿದ ನಂತರ ಬಹುತೇಕ ವ್ಯಾಪಾರ ಚಟುವಟಿಕೆ ಸ್ವಯಂಪ್ರೇರಿತವಾಗಿ ಸ್ಥಗಿತಗೊಂಡಿತ್ತು.
10ರ ನಂತರವೂ ವ್ಯಾಪಾರ ನಡೆಸುತ್ತಿದ್ದವರಿಗೆ ಪುರಸಭೆ ಅಧಿ ಕಾರಿಗಳು ದಂಡ ವಿ ಧಿಸಿ ಬಿಸಿ ಮುಟ್ಟಿಸಿದರು. ಸಾವಿರಾರು ವ್ಯಾಪಾರದ ಎದುರು ಸಾವಿರ ರೂ. ದಂಡ ಕಟ್ಟಿದರೆ ಏನಾಗುತ್ತದೆ ಎನ್ನುವ ಭಂಡತನ ತೋರಿದ ಅಂಗಡಿಕಾರರಿಗೆ ಪೊಲೀಸರು ಬಿಸಿ ಮುಟ್ಟಿಸಿ ಅಂಥ ಅಂಗಡಿ ಬಂದ್ ಮಾಡಿಸಿ ವ್ಯಾಪಾರ ಸ್ಥಗಿತಗೊಳಿಸಿದರು.