ನೆಲಮಂಗಲ: ಕೋವಿಡ್ 19ಗೆ ಬಲಿಯಾದ ರೈತ ಮಹಿಳೆ ಕುಟುಂಬದವರು ಹಾಗೂ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿದ್ದು, ಮನೆಯಲ್ಲಿರುವ ಜಾನುವಾರು, ಹುಲ್ಲು-ಮೇವು ನೀರಿಲ್ಲದೇ ಅನಾಥವಾಗಿವೆ. ಜತೆಗೆ ಕೋವಿಡ್ 19 ಆತಂಕದಿಂದ ಡೇರಿಯಲ್ಲಿ ಹಾಲು ನಿಷೇಧಿಸಲಾಗಿದೆ.
ತಾಲೂಕಿನ ವೀರಸಾಗರದ ಮಹಿಳೆಗೆ ಮೇ.22ರಂದು ಕೋವಿಡ್ 19 ದೃಢವಾಗುತ್ತಿದ್ದಂತೆ ಸಂಪರ್ಕದಲ್ಲಿದ್ದ ಕುಟುಂಬದ 12 ಜನರನ್ನುಕ್ವಾರಂಟೈನ್ ಮಾಡಿ, 4 ಮನೆಗಳನ್ನು ಲಾಕ್ ಮಾಡಲಾಗಿದೆ. ಹೀಗಾಗಿ ಮನೆಯಲ್ಲಿರುವ 12ಕ್ಕೂ ಹೆಚ್ಚು ಹಸು, 10 ಮೇಕೆಗಳನ್ನು ನೋಡಿಕೊಳ್ಳುವವರಿಲ್ಲದಂತಾಗಿದ್ದು, ರೋಧನೆ ಮನಕಲಕುವಂತಿದೆ.
ನಿತ್ಯ 60 ಲೀ. ಹಾಲು ಮಣ್ಣುಪಾಲು: ಸೋಂಕಿತೆ ಮನೆಯವರು ಪ್ರತಿದಿನ 60ಕ್ಕೂ ಹೆಚ್ಚು ಲೀ. ಹಾಲನ್ನು ವೀರಸಾಗರದ ಹಾಲಿನ ಡೇರಿಗೆ ಸರಬರಾಜು ಮಾಡುತ್ತಿದ್ದರು. ಆದರೆ ಈಗ ಬಮೂಲ್ ಅಧಿಕಾರಿಗಳು, ನಿರ್ದೇಶಕರು ಹಾಲು ಪಡೆಯದಂತೆ ಡೇರಿ ಸಿಬ್ಬಂದಿಗೆ ತಿಳಿಸಿದ್ದಾರೆ. ಹೀಗಾಗಿ ನಿತ್ಯ 60 ಲೀಟರ್ ಹಾಲು ಮಣ್ಣಿಗೆ ಸುರಿಯಲಾಗುತ್ತಿದೆ.
ಮನೆ ಬಳಿ ಹೋಗದ ಜನರು: ಗ್ರಾಮದ ಜನರು ಮನೆ ಹಾಗೂ ತೋಟದ ಬಳಿ ಹೋಗಲು ಭಯಪಟ್ಟು ಪ್ರಾಣಿಗಳಿಗೆ ಹಲ್ಲು ಹಾಕಲು ಹೋಗುತ್ತಿಲ್ಲ. ಹಸುಗಳ ರೋಧನೆ ತಾಳಲಾರ ದೆ ಗ್ರಾಮದ ವ್ಯಕ್ತಿಯೊಬ್ಬರು ದಿನಕ್ಕೆ ಒಂದು ಬಾರಿ ನೀರು ಕುಡಿಸಿ ಹಾಲು ಕರೆಯುತ್ತಿದ್ದರು. ಈಗ ಅವರು ಕೂಡ ಮೇವು, ನೀರು ಕುಡಿಸುವುದನ್ನು ನಿಲ್ಲಿಸಿದ್ದಾರೆ.
ಔಷಧ ನೀಡಿಲ್ಲ: ಸೋಂಕಿತೆಯ ಸಂಪರ್ಕದಲ್ಲಿದ್ದ ಆಟೋ ಚಾಲಕನನ್ನು ಸಿದ್ದಾರ್ಥ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಆತನಿಗೆ ಮೆದುಳಿನ ನರದಲ್ಲಿ ರಕ್ತ ಸರಬರಾಜಿನ ಸಮಸ್ಯೆ ಎದುರಾಗಿದೆ. ದಿನಕ್ಕೆ ಎರಡು ಬಾರಿ ಮಾತ್ರೆ ತೆಗೆದುಕೊಂಡು ಬಿಸಿ ನೀರು ಕುಡಿಯಲು ಸೂಚಿಸಲಾಗಿದೆ. ಆದರೆ ಕ್ವಾರಂಟೈನ್ ಕೇಂದ್ರದಲ್ಲಿ ಮಾತ್ರೆ ಹಾಗೂ ಬಿಸಿ ನೀರು ನೀಡುತ್ತಿಲ್ಲ. ನನಗೆ ಮಾನಸಿಕ ಹಿಂಸೆಯಂತಾಗುತ್ತಿದೆ.
ತಕ್ಷಣ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು. ಸೋಂಕಿತರ ಮನೆಗೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡುತ್ತೇವೆ. ಹಾಲು ಹಾಕಿಸಿಕೊಳ್ಳಲು ಬಮೂಲ್ ಅಧಿಕಾರಿ ಗಳ ಜತೆ ಮಾತನಾಡಲಾಗುತ್ತದೆ. ಕ್ವಾರಂಟೈನ್ ಇರುವ ವ್ಯಕ್ತಿಗೆ ಔಷಧಿ ಸರಬರಾಜು ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಶ್ರೀನಿವಾಸ್ ಹೇಳಿದರು.
ಕಣ್ಣೀರು ಹಾಕಿದ ಕುಟುಂಬ: ತಾಯಿಯನ್ನು ಕಳೆದುಕೊಂಡು ಸರಕಾರದ ಆದೇಶ ಹಾಗೂ ಜನರ ಹಿತದೃಷ್ಟಿಯಿಂದ ಕ್ವಾರಂಟೈನ್‌ನಲ್ಲಿ ಜೀವನ ಮಾಡುತಿದ್ದೇವೆ. ಮನೆಯಲ್ಲಿ ಪ್ರಾಣಿಗಳಿಗೆ ವ್ಯವಸ್ಥೆಗೂ ಬಿಡದೆ, ಅಧಿಕಾರಿಗಳು ಕರೆದುಕೊಂಡು ಬಂದರು. ಈಗ ಹಸುಗಳಿಗೆ ಆಹಾರವಿಲ್ಲದಿರುವುದು ಕೇಳಿ ದುಃಖವಾಗುತ್ತಿದೆ. ಹಾಲು ಕರೆಯದಿದ್ದರೆ ಹಸುಗಳ ಸಾವು ನಿಶ್ಚಿತ, ಇಬ್ಬರನ್ನಾದರೂ ಮನೆಗೆ ಕಳುಹಿಸಿ ಎಂದು ಕುಟುಂಬದ ಸದಸ್ಯರು ಕಣ್ಣೀರು ಹಾಕಿದ್ದಾರೆ.