Advertisement
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಮತ್ತೆ ತಾವೇ ಸಿಎಂ ಆಗುತ್ತೇನೆ ಎಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ‘ಅಮಿತ್ ಶಾ ಆರಂಭದಲ್ಲಿ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಹೇಳಿದ್ದರು. ನಂತರ ಮೋದಿ ಮುಖ ನೋಡಿ ಮತ ನೀಡಿ ಎಂದಿದ್ದಾರೆ. ಅಲ್ಲಿಗೆ ಬೊಮ್ಮಾಯಿ ನಾಯಕತ್ವದ ಮೇಲೆ ನಂಬಿಕೆ ಇಲ್ಲವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದರು.
Related Articles
Advertisement
ಕಾಂಗ್ರೆಸ್ ಗ್ಯಾರಂಟಿ ಯೋಜನೆ ರಾಜ್ಯವನ್ನು ಸಾಲದ ಕೂಪಕ್ಕೆ ಕೊಂಡೊಯ್ಯುತ್ತಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ‘ನೀವು ಬಿಜೆಪಿಯ ಪ್ರಣಾಳಿಕೆ ತೆಗೆದು ನೋಡಿ. ಜ.16ರಂದು ಅವರು ಸರ್ಕಾರದ ವತಿಯಿಂದ ಜಾಹೀರಾತು ನೀಡಿ ಏನು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ರೈತರಿಗೆ 10 ಗಂಟೆ ವಿದ್ಯುತ್ ನೀಡುವುದಾಗಿ ಯಾಕೆ ಹೇಳಿದ್ದಾರೆ? ಇನ್ನು ಸಾಲ ಮನ್ನಾ ವಿಚಾರವಾಗಿ ಹೇಗೆ ಭರವಸೆ ನೀಡಿದ್ದರು? ಈ ಬಗ್ಗೆ ಅವರು ಮೊದಲು ಉತ್ತರ ನೀಡಲಿ’ ಎಂದರು.
ವೈಎಸ್ ವಿ ದತ್ತಾ ಅವರ ಆಡಿಯೋ ಕುರಿತು ಕೇಳಿದಾಗ, ‘ರಾಜಕೀಯದಲ್ಲಿ ಹೂವಿನ ಹಾರ ಹಾಕುವವರೂ ಇರುತ್ತಾರೆ. ಕಲ್ಲು ಹೊಡೆಯುವವರೂ ಇರುತ್ತಾರೆ. ನಾವು ಎಲ್ಲರ ಸಲಹೆ, ಅಭಿಪ್ರಾಯವನ್ನು ಸ್ವೀಕಾರ ಮಾಡುತ್ತೇವೆ. ಅವರು ಹಿರಿಯರಿದ್ದಾರೆ. ಅವರನ್ನು ಮೇಸ್ಟ್ರು ಎಂದು ಸ್ವೀಕಾರ ಮಾಡಿದ್ದೇವೆ. ಅವರ ಮಾತನ್ನು ನಾವು ಆಶೀರ್ವಾದ ಎಂದು ಸ್ವೀಕರಿಸಿ ಅವರ ಜತೆ ಕೆಲಸ ಮಾಡುತ್ತೇವೆ’ ಎಂದರು.
ಪಕ್ಷದಲ್ಲಿ ಟಿಕೆಟ್ ವಿಚಾರವಾಗಿ ಮೂಲ ಕಾಂಗ್ರೆಸಿಗರು ಹಾಗೂ ವಲಸಿಗರ ನಡುವಣ ಸಂಘರ್ಷದ ಬಗ್ಗೆ ಕೇಳಿದಾಗ, ‘ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭಾವನೆ ಎಲ್ಲರಿಗೂ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಹಾಗೂ ದಳದವರಿಗೂ ಗೊತ್ತಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇನ್ನು ಅರ್ಜಿ ಹಾಕುವವರು ಇದ್ದಾರೆ. ಚಿಂಚನಸೂರು ಅವರು ಕೂಡ ಅರ್ಜಿ ಹಾಕಬೇಕಿದೆ. ಯಾರು ಕ್ಷೇತ್ರದಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಾರೆ ಅವರಿಗೆ ಅನೇಕ ಅವಕಾಶಗಳಿವೆ. 75 ಪರಿಷತ್, 12 ರಾಜ್ಯಸಭಾ, ಲೋಕಸಭಾ ಹಾಗೂ ನಿಗಮ ಮಂಡಳಿಗಳಿವೆ. ಎಲ್ಲರಿಗೂ ಅಧಿಕಾರವನ್ನು ಹಂಚುತ್ತೇವೆ’ ಎಂದರು.
ಟಿಕೆಟ್ ಯಾವಾಗ ಎಂದು ಕೇಳಿದಾಗ, ‘ಇಂದು ಪ್ರಕಟಿಸುವ ಉದ್ದೇಶವಿತ್ತು. ಆದರೆ ಹಬ್ಬದ ಆಚರಣೆ ಹಿನ್ನೆಲೆಯಿಂದ ನಾಳೆ ನಾಡಿದ್ದು ಪ್ರಕಟಿಸುತ್ತೇವೆ’ ಎಂದು ತಿಳಿಸಿದರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ನಿವಾಸದಲ್ಲಿ ಗೋ ಪೂಜೆ ನೆರವೇರಿಸಿದರು. ಹಿಂದೂ ಧರ್ಮದಲ್ಲಿ ಗೋ ಪೂಜೆ ಸರ್ವ ಶ್ರೇಷ್ಠವಾಗಿದ್ದು, ನಾಡಿಗೆ ಸಕಲ ಸನ್ಮಂಗಳವಾಗಲಿ ಎಂದು ಗೋಮಾತೆಯನ್ನು ಪ್ರಾರ್ಥಿಸಿದೆ. ನವ ಸಂವತ್ಸರವು ಪ್ರತಿಯೊಬ್ಬರ ಬದುಕಿನಲ್ಲಿ ಖುಷಿ ಹಾಗೂ ಬೆಳಕನ್ನು ತರಲಿ ಎಂದು ಟ್ವೀಟ್ ಮಾಡಿದ್ದಾರೆ.