Advertisement

ಕಂಠಪಾಠಕ್ಕಿಂತ ಬರೆದು ಕಲಿಯುವುದೇ ಸೂಕ್ತ

12:11 AM Mar 13, 2022 | Team Udayavani |

ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳು ಒಂದಿಷ್ಟು ಗಲಿಬಿಲಿಗೊಳಗಾಗುವ ವಿಷಯ ಎಂದರೆ ವಿಜ್ಞಾನ. ಆದರೆ ಈ ವಿಷಯ ಅಂಕಗಳಿಕೆಯಲ್ಲಿ ಬಲುಮುಖ್ಯ ಪಾತ್ರ ವಹಿಸುತ್ತದೆ. ವಿಜ್ಞಾನ ವಿಷಯದ ಅಧ್ಯಯನದ ವೇಳೆ ಏಕಾಗ್ರತೆ ಅತ್ಯವಶ್ಯ. ಇಲ್ಲವಾದಲ್ಲಿ ನೀವು ಓದಿದ್ದು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಮರೆತು ಹೋಗುವ ಅಥವಾ ಅನಾವಶ್ಯಕ ಗೊಂದಲಕ್ಕೊಳಗಾಗಿ ಯಾವುದೋ ಪ್ರಶ್ನೆಗೆ ಇನ್ಯಾವುದೋ ಉತ್ತರವನ್ನು ಬರೆಯುವ ಸಾಧ್ಯತೆ ಅಧಿಕ. ಹೀಗಾಗಿ ಅಧ್ಯಯನದ ಸಂದರ್ಭದಲ್ಲಿಯೇ ಪಠ್ಯ ವಿಷಯದತ್ತ ಗಮನವನ್ನು ಕೇಂದ್ರೀಕರಿಸಿ, ಬರೆದು ಕಲಿತಲ್ಲಿ ಪರೀಕ್ಷೆಯ ವೇಳೆ ಸೂಕ್ತ ಮತ್ತು ಸಮರ್ಪಕ ಉತ್ತರಗಳನ್ನು ಬರೆಯುವುದು ಬಲು ಸುಲಭ.

Advertisement

ವಿಜ್ಞಾನವನ್ನು ಸುಲಭವಾಗಿ ಅಧ್ಯಯನ ಮಾಡಲು ರಿಮೆಂಬರ್‌, ರೀಕಾಲ್‌, ರಿಪೀಟ್‌ ಅತೀ ಅವಶ್ಯಕ ಸೂತ್ರವಾಗಿದೆ. ಪ್ರತೀ ಅಧ್ಯಾಯದ ಪ್ರಮುಖಾಂಶಗಳನ್ನು ಕ್ಯಾಲೆಂಡರ್‌ ರೂಪದಲ್ಲಿ ಸಿದ್ಧಪಡಿಸಿಕೊಳ್ಳ ಬೇಕು. ಒಮ್ಮೆ ಇಡೀ ಅಧ್ಯಾಯವನ್ನು ಓದಿದ ಅನಂತರ ಪುನಃ ಪೂರ್ಣ ಓದಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಾರದು. ಪ್ರಮುಖಾಂಶಗಳನ್ನು ನೋಡಿ, ಅದರಲ್ಲಿ ಯಾವ ವಿಷಯದ ವಿವರಣೆ ತಿಳಿಯು ವುದಿಲ್ಲವೋ ಅದನ್ನು ಪುನಃ ಓದಿದರೆ ಸಾಕಾಗುತ್ತದೆ. ವಿಜ್ಞಾನ ವಿಷಯವನ್ನು ಹೋಲಿಕೆಯ ಮೂಲಕ ಓದಬೇಕು. (ಉದಾ: ಲೋಹ-ಅಲೋಹ, ಆಮ್ಲ-ಪ್ರತ್ಯಾಮ್ಲ, ವಾಯುವಿಕ ಉಸಿರಾಟ -ಅವಾಯುವಿಕ ಉಸಿರಾಟ) ಇಂತಹ ವಿಷಯದಲ್ಲಿ ಯಾವುದಾದರೂ ಒಂದು ಪದ ಸ್ಪಷ್ಟವಾಗಿ ಅರ್ಥವಾದರೆ ಇನ್ನೊಂದನ್ನು ಅರ್ಥೈಸಿ ಕೊಳ್ಳುವುದು ಬಲು ಸುಲಭ ಮತ್ತು ಇದರಿಂದ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುವಾಗಲೂ ಅನಿಶ್ಚತತೆ ಕಾಡಲಾರದು. ವ್ಯತ್ಯಾಸ, ನಿಯಮ, ರೇಖಾ ಚಿತ್ರಗಳು, ಸೂತ್ರಗಳನ್ನು ಪ್ರತ್ಯೇಕ ಪಟ್ಟಿ ಮಾಡಿಕೊಳ್ಳಬೇಕು. ಚಿತ್ರಗಳು, ಒಂದು ಅಂಕದ ಪ್ರಶ್ನೆಗಳು, ಪಠ್ಯದ ಪ್ರಮುಖಾಂಶಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಂಡು ನಿತ್ಯ ಅದರ ಮೇಲೆ ಕಣ್ಣು ಹಾಯಿಸಬೇಕು.

ಭೌತಶಾಸ್ತ್ರ, ರಸಾಯಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿ ತಲಾ 2 ಚಿತ್ರದಂತೆ 12 ಅಂಕದ ಚಿತ್ರಗಳು ಬರುತ್ತವೆ. ಬೆಳಕು, ವಿದ್ಯುತ್‌ ಶಕ್ತಿ, ವಿದ್ಯುತ್‌ ಕಾಂತಿಯ ಪರಿಣಾಮ ಈ ಅಧ್ಯಾಯಗಳಲ್ಲಿ 20 ಅಂಕದ ಪ್ರಶ್ನೆಗಳು ಬರುತ್ತವೆ. ಕಾರ್ಬನ್‌, ಲೋಹ, ಅಲೋಹ, ರಾಸಾಯನಿಕ ಕ್ರಿಯೆಗಳು ಮತ್ತು ಸಮಿಕರಣ, ಆಮ್ಲ, ಪ್ರತ್ಯಾಮ್ಲದ ಗುಣಗಳು, ತಟಸ್ಥ ದ್ರಾವಣಗಳು, ಲವಣಗಳ ಉಪಯೋಗ ಇತ್ಯಾದಿಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಾಗ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದಾಗಿದೆ.

ಜೀವಶಾಸ್ತ್ರದಲ್ಲಿ ಜೀರ್ಣಕ್ರಿಯೆ, ಸಸ್ಯಗಳಲ್ಲಿ ಆಹಾರ ಮತ್ತು ನೀರಿನ ಸಾಗಾಣಿಕೆ, ರಕ್ತನಾಳಗಳ ವಿಧಗಳು, ಘಟಕಗಳು, ಅವುಗಳ ಕಾರ್ಯ, ವಿಸರ್ಜನ ಕ್ರಿಯೆ ಇತ್ಯಾದಿ ಪಾಠಗಳ ಪ್ರಶ್ನೆ ಪ್ರಮುಖವಾಗಿ ಬರುತ್ತದೆ. ವಿಜ್ಞಾನವನ್ನು ಮೂರು ವಿಭಾಗವಾಗಿ ಅಧ್ಯಯನ ಮಾಡಿದಾಗ ವಿಷಯವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ ಎನ್ನುತ್ತಾರೆ ಉಡುಪಿ ಚಿತ್ಪಾಡಿ ಇಂದಿರಾ ನಗರದ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಹಾಗೂ ವಿಷಯ ತಜ್ಞೆ ಜಯಂತಿ ಶೆಟ್ಟಿ.

ವಿಜ್ಞಾನ ಪರೀಕ್ಷೆಗಾಗಿ ತಯಾರಿ, ಎದುರಿ ಸುವ ಕುರಿತಂತೆ ವಿದ್ಯಾರ್ಥಿಗಳಿಗೆ ಅವರು ನೀಡಿರುವ ಕೆಲವೊಂದು ಸಲಹೆಗಳು ಇಲ್ಲಿವೆ.

Advertisement

ವಿಜ್ಞಾನದಲ್ಲಿ ಓದಲೇ ಬೇಕಾದ ಅಧ್ಯಾಯಗಳು
ಭೌತಶಾಸ್ತ್ರ
ಬೆಳಕು: ಪ್ರತಿಫ‌ಲನ ಮತ್ತು ವಕ್ರೀಭವನ ಅಧ್ಯಾಯ ಓದಲೇ ಬೇಕು. ಇದರಲ್ಲಿ ಸುಮಾರು 12 ಅಂಕಗಳ ಪ್ರಶ್ನೆಗಳು ಬರುತ್ತವೆ. ವಿದ್ಯುತ್‌ ಶಕ್ತಿ ಅಧ್ಯಾಯದಲ್ಲಿ ಸುಮಾರು 7 ಅಂಕಗಳ ಪ್ರಶ್ನೆಗಳು ಬರುತ್ತವೆ. ವಿದ್ಯುತ್‌ ಕಾಂತೀಯ ಪರಿಣಾಮ ಅಧ್ಯಾಯ, ಶಕ್ತಿಯ ಆಕಾರಗಳು ಎಂಬ ಅಧ್ಯಾಯವನ್ನು ಚೆನ್ನಾಗಿ ಓದಿದರೆ 20ಕ್ಕೂ ಅಧಿಕ ಅಂಕಗಳನ್ನು ಭೌತಶಾಸ್ತ್ರದಲ್ಲಿ ಸುಲಭವಾಗಿ ಗಳಿಸಬಹುದು.

ರಸಾಯನ ಶಾಸ್ತ್ರ
ಕಾರ್ಬನ್‌ ಮತ್ತು ಅದರ ಸಂಯುಕ್ತಗಳು ಇದರಲ್ಲಿ ಹೈಡ್ರೋ ಕಾರ್ಬನ್‌ಗಳ ಹೆಸರು, ಅಣುಸೂತ್ರ, ರಚನಾ ವಿನ್ಯಾಸ. ಲೋಹ- ಅಲೋಹ ಅಧ್ಯಾಯದಲ್ಲಿ ಇವುಗಳಿಗೆ ಇರುವ ವ್ಯತ್ಯಾಸ, ಭೌತ, ರಾಸಾಯನಿಕ ಗುಣಲಕ್ಷಣ, ಲೋಹಗಳ ಕ್ರಿಯಾಶೀಲತೆ ಮುಖ್ಯವಾದವಾಗಿದೆ. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣ-ನಾಲ್ಕು ವಿಧದ ರಾಸಾಯನಿಕ ಕ್ರಿಯೆಗಳು ಮತ್ತುಅದಕ್ಕೆ ಉದಾಹರಣೆ: ಬಹಿರ್‌ಉಷ್ಣಕ- ಅಂತರ್‌ ಉಷ್ಣಕ ಕ್ರಿಯೆಗಳ ವ್ಯಾಖ್ಯಾನ, ಉದಾ ಹರಣೆ: ಆಮ್ಲ-ಪ್ರತ್ಯಾಮ್ಲ- ಲವಣಗಳು ಅಧ್ಯಾಯ, ಧಾತುಗಳು ಅಧ್ಯಾಯದಲ್ಲಿ ಬರುವ ನಾಲ್ಕು ನಿಯಮಗಳು.

 ಜೀವಶಾಸ್ತ್ರ
ಜೀವಕ್ರಿಯೆಗಳು ಎಂಬ ಅಧ್ಯಾಯ ದಲ್ಲಿ ಜೀರ್ಣಾಂಗ ವ್ಯೂಹ, ಹೃದಯ, ವಿಸರ್ಜನಾಂಗ ಕ್ರಿಯೆ ಚಿತ್ರ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಜೀರ್ಣಕ್ರಿಯ ಅಧ್ಯಾಯದಲ್ಲಿ ಬಾಯಿ, ಜಠರ, ಸಣ್ಣ ಕರುಳು ಇವುಗಳ ಕುರಿತಾಗಿಯೂ ಪ್ರಶ್ನೆಗಳಿರಲಿವೆ. ಸಸ್ಯಗಳಲ್ಲಿ ಆಹಾರ ಮತ್ತು ನೀರಿನ ಸಾಗಾಣಿಕೆ, ಮನುಷ್ಯನ ರಕ್ತನಾಳದ ವಿಧಗಳು, ರಕ್ತದ ಘಟಕ, ಕಾರ್ಯಗಳು, ಸಸ್ಯ ಮತ್ತು ಪ್ರಾಣಿಗಳ ವಿಸರ್ಜನಾ ಕ್ರಿಯೆಗಳ ಬಗ್ಗೆ ಪ್ರಶ್ನೆ ಕೇಳುವ ಸಾಧ್ಯತೆ ಹೆಚ್ಚಿರುತ್ತದೆ. ಸಹಭಾಗಿತ್ವ ಮತ್ತು ನಿಯಂತ್ರಣ ಅಧ್ಯಾಯದಲ್ಲಿ ಮೆದುಳಿನ ಭಾಗಗಳು, ಕಾರ್ಯ, ಸಸ್ಯಗಳಲ್ಲಿ ಅನುವರ್ತನೆ, ಪ್ರಾಣಿ ಹಾರ್ಮೋನ್‌ಗಳು, ಕಾರ್ಯ, ಅನುವಂಶೀಯತೆ, ಜೀವ ವಿಕಾಸ ಅಧ್ಯಾಯ, ಪಳೆಯುಳಿಕೆಗಳ ಮೇಲೆ ಪ್ರಶ್ನೆಗಳಿರಲಿವೆ.

ಬರೆದು ಕಲಿಯಿರಿ
ವಿಜ್ಞಾನದಲ್ಲಿ ಬರೆದು ಅಭ್ಯಾಸ ಮಾಡುವುದು ಅತೀ ಮುಖ್ಯ. ಎಲ್ಲವನ್ನು ಕಂಠಪಾಠ ಮಾಡುವುದಕ್ಕಿಂತ ಪ್ರಮುಖವಾದ ಚಿತ್ರಗಳು, ಒಂದು ಅಂಕದ ಪ್ರಶ್ನೆಗಳು, ಪ್ರತೀ ಪಾಠದ ಪ್ರಮುಖ ಅಂಶಗಳನ್ನು ಬರೆದು ಕಲಿತು ನೆನಪಿಟ್ಟು ಕೊಳ್ಳಬೇಕು. ಪ್ರತೀ ಪಾಠದ ಕೊನೆಯಲ್ಲಿ ಈ ಅಧ್ಯಾಯದಲ್ಲಿ ನೀವು ಕಲಿತಿರುವ ಅಂಶಗಳು ಎಂದಿರುತ್ತದೆ. ಅದಕ್ಕೆ ವಿಶೇಷ ಗಮನ ಕೊಡಬೇಕು. ವಿಜ್ಞಾನದಲ್ಲಿ ಬರುವ ಎಲ್ಲ ವ್ಯತ್ಯಾಸಗಳು, ನಿಯಮಗಳು, ಉಪಯೋಗಗಳು, ಸೂತ್ರಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಂಡು ಕಲಿಯಬೇಕು.
-ಜಯಂತಿ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next