Advertisement

ಭಕ್ತರು ಪ್ರವಾಸವನ್ನು ಮುಂದೂಡಿದರೆ ಉತ್ತಮ

03:53 AM May 18, 2019 | Team Udayavani |

ಬೆಳ್ತಂಗಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರಗಾಲದ ಬಿಸಿ ಧಾರ್ಮಿಕ ಕ್ಷೇತ್ರಗಳಿಗೂ ತಟ್ಟಿದ್ದು, ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವದಿಂದಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಮನವಿ ಮಾಡಲಾಗಿದೆ.

Advertisement

ಧರ್ಮಸ್ಥಳದ ಮೂಲಕ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿರುವ ಕಾರಣ ಕ್ಷೇತ್ರದಲ್ಲೂ ದಿನದಿಂದ ದಿನಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ದ.ಕ. ಜಿಲ್ಲಾಡಳಿತದ ಮೂಲಕ ತಮ್ಮ ಕ್ಷೇತ್ರದರ್ಶನ ಕೆಲದಿನಗಳ ಕಾಲ ಮುಂದೂಡುವಂತೆ ಭಕ್ತರಲ್ಲಿ ವಿನಂತಿಸಿದ್ದಾರೆ.

ಪ್ರಸ್ತುತ ಶಾಲಾ-ಕಾಲೇಜುಗಳ ರಜಾ ಅವಧಿಯಾಗಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ನೀರಿನ ಆವಶ್ಯಕತೆಯೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ನೇತ್ರಾವತಿ ಸ್ನಾನಘಟ್ಟದಲ್ಲೇ ಸ್ನಾನ ಮಾಡುತ್ತಾರೆ. ಆದರೆ ಈಗ ನದಿಯಲ್ಲಿ ನೀರಿಲ್ಲದೆ ಅಲ್ಲಿ ಸ್ನಾನ ಮಾಡುವುದು ಕಷ್ಟವಾಗಿದೆ.

ಹೀಗಾಗಿ ಕ್ಷೇತ್ರದ ವಸತಿಗೃಹಗಳಲ್ಲೇ ಸ್ನಾನವನ್ನು ಮಾಡುತ್ತಿದ್ದಾರೆ. ಹೀಗಾಗಿ ಅಷ್ಟೊಂದು ಪ್ರಮಾಣದ ನೀರನ್ನು ಪೂರೈಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಮನವಿಯನ್ನು ಮಾಡಲಾಗಿದೆ. ಕ್ಷೇತ್ರಕ್ಕೆ ದೂರ ದೂರುಗಳಿಂದ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಅವರು ತಾಸುಗಟ್ಟಲೆ ಪ್ರಯಾಣ ಮಾಡಿ ಬರುವುದರಿಂದ ಕ್ಷೇತ್ರದಲ್ಲಿ ಬಂದು ಸ್ನಾನ ಮಾಡುವುದು ಕೂಡ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ನೀರಿಗೆ ತೊಂದರೆ ಕಂಡುಬಂದಿದೆ.

ಧರ್ಮಸ್ಥಳ ಕ್ಷೇತ್ರಕ್ಕೆ ನೇತ್ರಾವತಿ ನದಿಯೇ ನೀರಿನ ಮೂಲವಾಗಿದ್ದು, ಡ್ಯಾಮ್‌ ಮೂಲಕ ಓವರ್‌ಹೆಡ್‌ ಟ್ಯಾಂಕ್‌ಗೆ ನೀರನ್ನು ಪೂರೈಸಿ ಉಪಯೋಗಿಸಲಾಗುತ್ತಿದೆ. ಹೀಗಾಗಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಪೂರೈಕೆ ಕಷ್ಟವಾಗಲಿದೆ.

Advertisement

ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದು, ಭಕ್ತರ ಸಂಖ್ಯೆ ಹೆಚ್ಚಳವಾದಾಗ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇಲ್ಲಿಯವರೆಗೆ ಭಕ್ತರಿಗೆ ತೊಂದರೆಯಾಗದಂತೆ ಕ್ಷೇತ್ರದ ವತಿಯಿಂದ ಕ್ರಮಕೈಗೊಳ್ಳಲಾಗಿದ್ದು, ಮುಂದೆ ನೀರಿಲ್ಲದೆ ಭಕ್ತರಿಗೆ ತೊಂದರೆಯಾಗಬಾರದ ರೀತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮನವಿ ಮಾಡಲಾಗಿದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿದೆ.

ಮುಂದಿನ 10 ದಿನದೊಳಗೆ ಮಳೆ ಬಾರದಿದ್ದಲ್ಲಿ ಕೊಲ್ಲೂರಿನಲ್ಲಿ ತೀವ್ರ ಸ್ವರೂಪದ ನೀರಿನ ಕ್ಷಾಮ ಉಂಟಾಗಲಿದೆ. ಆದ್ದರಿಂದ ಭಕ್ತರು ಇತಿಮಿತಿಯಲ್ಲಿ ನೀರನ್ನು ಬಳಸಬೇಕು.
– ಎಚ್. ಹಾಲಪ್ಪ, ಕಾರ್ಯನಿರ್ವಹಣಾಧಿಕಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ
ಕಟೀಲು ದೇವಸ್ಥಾನದಲ್ಲಿ ಇನ್ನು 15 ದಿನಗಳಿಗೆ ಸಾಕಾಗುವಷ್ಟು ನೀರಿನ ವ್ಯವಸ್ಥೆಯಿದೆ. ನಂದಿನಿ ನದಿಗೆ ಕಳೆದ ನವೆಂಬರ್‌ನಲ್ಲಿ ವೆಂಟೆಡ್‌ ಡ್ಯಾಂಗೆ ಹಲಗೆ ಹಾಕಿ ನೀರನ್ನು ನಿಲ್ಲಿಸಿದ್ದರಿಂದ ನದಿ ಹಾಗೂ ಪರಿಸರದ ಬಾವಿಗಳಲ್ಲಿ ಸಾಕಷ್ಟು ನೀರು ಇದೆ.
-ಹರಿನಾರಾಯಣ ಆಸ್ರಣ್ಣ, ಕಟೀಲು ದೇಗುಲದ ಆರ್ಚಕ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದುವರೆಗೆ ನೀರಿನ ಸಮಸ್ಯೆ ಕಂಡುಬಂದಿಲ್ಲ. ಈ ಪರಿಸರದಲ್ಲಿ ಮೂರು ನಾಲ್ಕು ಸಲ ಮಳೆ ಬಂದ ಕಾರಣ ಕುಮಾರಧಾರಾದಲ್ಲಿ ಕೂಡ ಹರಿವು ಇದೆ. ಕಿಂಡಿ ಅಣೆಕಟ್ಟಿನಲ್ಲಿ ನೀರು ಪೋಲಾಗದಂತೆ ನೋಡಿಕೊಳ್ಳಲು ಸಿಬಂದಿಗೆ ಸೂಚಿಸಲಾಗಿದೆ.
– ನಿತ್ಯಾನಂದ ಮುಂಡೋಡಿ,ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ
ಭಕ್ತರಿಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಛತ್ರಗಳು, ಲಾಡ್ಜ್ ಗಳಲ್ಲಿ ನೀರಿನ ಸಮಸ್ಯೆ ಇರುವ ಕಾರಣ ಪಲಿಮಾರಿನ ಮಠ, ಪಾಜಕ ಇತ್ಯಾದಿ ತಾಣಗಳಿಗೆ ಹೋಗಿ ಶ್ರೀಕೃಷ್ಣಮಠಕ್ಕೆ ಸೇವೆಯ ಸಮಯ ಬನ್ನಿ ಎನ್ನುತ್ತಿದ್ದೇವೆ. ಸದ್ಯ ಹಣ ಕೊಟ್ಟು ನೀರು ತರಿಸುತ್ತಿದ್ದೇವೆ.
– ಪ್ರಹ್ಲಾದ ರಾವ್‌, ಆಡಳಿತಾಧಿಕಾರಿ, ಶ್ರೀಪಲಿಮಾರು ಮಠ, ಉಡುಪಿ
Advertisement

Udayavani is now on Telegram. Click here to join our channel and stay updated with the latest news.

Next