Advertisement

ಅಂತೂ ಯಕ್ಷಗಾನ ಪಠ್ಯಕ್ಕೆ ಮುದ್ರಣ ಭಾಗ್ಯ

06:25 AM Nov 23, 2018 | Team Udayavani |

ಶಿರಸಿ: ಯಕ್ಷಗಾನ ಪಠ್ಯ ರಚನೆಗೊಂಡು ಆರು ವರ್ಷಗಳ ಬಳಿಕ ಮುದ್ರಣಕ್ಕೆ ಸಮ್ಮತಿ ಸಿಕ್ಕಿದೆ. ಪ್ರಾಥಮಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್‌.ಎಂ. ರಾಘವೇಂದ್ರ ಅವರು (ಏಕ ಕಡತ ಸಂಖ್ಯೆ ಕ.ಪ.ಪು.ಸಂ/ ಯಪಪುರ 01/2011-12) ಉಲ್ಲೇಖದಡಿ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕರಿಗೆ ನ.16ರಂದು ಪತ್ರ ಬರೆದು ಆದೇಶಿಸಿದ್ದಾರೆ.

Advertisement

ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಯಕ್ಷಗಾನ ಪಠ್ಯವನ್ನು 5 ಸಾವಿರ ಸಂಖ್ಯೆಯಲ್ಲಿ ಮುದ್ರಿಸಲು ಸೂಚಿಸಿದ್ದಾರೆ. ಈ ಮೂಲಕ ಬಾಕಿ ಉಳಿದಿದ್ದ ಆಗಬೇಕಾದ ಕಾರ್ಯಕ್ಕೆ ಚಾಲನೆ ಸಿಕ್ಕಂತಾಗಿದ್ದು, ಯಕ್ಷ ಪ್ರಿಯರಲ್ಲಿ ಹರ್ಷ ತಂದಿದೆ.

ಬಡಗು, ತೆಂಕು, ಬಡಾಬಡಗು ಯಕ್ಷಗಾನ ನಾಡಿನ ಜನಪ್ರಿಯ ಕಲೆಗಳು. ಆದರೆ, ಇದಕ್ಕೆ ಸಂಬಂಧಿಸಿ ಸಂಗೀತ ಮಾದರಿಯಲ್ಲಿ ಪಠ್ಯಗಳು ರಚನೆ ಆಗಿರಲಿಲ್ಲ. ಜಾನಪದ, ಶಾಸ್ತ್ರೀಯ ಎಂಬ ಗೊಂದಲದ ಮಧ್ಯೆ ಶಾಸ್ತ್ರೀಯ ಕಲೆಯ ಮಾನ್ಯತೆಗೆ ಪಠ್ಯ ರಚನೆಯ ಅಗತ್ಯತೆ ಕೂಡ ಇತ್ತು. ಯಕ್ಷಗಾನ ಒಂದೇ ಆದರೂ ಒಂದೊಂದು ಕಡೆ ಒಂದೊಂದು ಮಾದರಿಯಲ್ಲಿ ಪಾಠ ಮಾಡುವ ರೂಢಿಯಲ್ಲಿತ್ತು. ಏಕ ಸೂತ್ರ ಅಳವಡಿಕೆ ಮಾಡಿ ಅದಕ್ಕೊಂದು ಶಾಸ್ತ್ರೀಯ ರೂಪ ನೀಡಬೇಕೆಂಬ ಆಗ್ರಹಗಳೂ  ವ್ಯಕ್ತವಾಗುತ್ತಲೇ ಇದ್ದವು.
ಆಗಿದ್ದು ಆಗಲೇ!: ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಯಕ್ಷಗಾನಕ್ಕೂ ಪಠ್ಯ ರಚನೆಯ ಪ್ರಸ್ತಾಪಕ್ಕೆ ಒಂದು ರೂಪ ಕೊಡುವ ಪ್ರಯತ್ನ ನಡೆಯಿತು. 

ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ್‌, ಸದಾನಂದ ಐತಾಳ, ಪ್ರಕಾಶ ಮೂಡಿತ್ತಾಯ ಹಾಗೂ ಇತರನ್ನೊಳಗೊಂಡ ತಜ್ಞರ ಸಮಿತಿ ಯಕ್ಷಗಾನ ಪಠ್ಯಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ಒಂದು ರೂಪ ನೀಡಿತ್ತು.ಆದರೆ, ಸರ್ಕಾರಗಳು ಬದಲಾದಂತೆ ಕಡತ ಕೂಡ ಮುಂದುವರಿಯಲಿಲ್ಲ. ಈಗ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ವಿದ್ವಾಂಸ ಪ್ರೊ.ಎಂ.ಎ.ಹೆಗಡೆ ದಂಟ್ಕಲ್‌ ಅವರು ಬಂದ ಬಳಿಕ ಇದಕ್ಕೆ ಚಾಲನೆ ಸಿಕ್ಕಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಮೋದ ಮಧ್ವರಾಜ್‌ ಕಡತ ಹುಡುಕಿಸಿ ಪಠ್ಯಪುಸ್ತಕ ಮುದ್ರಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ಏನಿದೆ ಇಲ್ಲಿ?: ತೆಂಕು ಬಡಗು ಸೇರಿ ಯಕ್ಷಗಾನ ಕಲಿಕೆಗೆ ಅವಕಾಶ ಆಗುವ ಸೂತ್ರಗಳು ಇಲ್ಲಿವೆ. ಸಂಗೀತ ಪರೀಕ್ಷೆಯ ಮಾದರಿಯಲ್ಲಿ ಜೂನಿಯರ್‌ ಹಾಗೂ ಸೀನಿಯರ್‌ ಪರೀಕ್ಷೆಗಳಿಗೆ ಅಗತ್ಯವಾದ ಪಠ್ಯಗಳು ಆಸಕ್ತರ ಕೈಗೆ ಸಿಗಲಿವೆ. ಈಗಾಗಲೇ ಹಲವಡೆ ಯಕ್ಷಗಾನ ತರಬೇತಿ ನೀಡುತ್ತಿರುವ ಕೇಂದ್ರಗಳಿಗೆ, ವಾರಕ್ಕೊಂದು ತರಗತಿ ನಡೆಸುವ ಶಾಲೆಗಳಿಗೆ, ಯಕ್ಷಗಾನ ಅಕಾಡೆಮಿ ನಡೆಸುತ್ತಿರುವ ತರಬೇತಿ ಶಿಬಿರಗಳಿಗೆ ಅನುಕೂಲ ಆಗಲಿದೆ. ನಾಡಿನ ಎಲ್ಲೆಡೆ ಒಂದೇ ಮಾದರಿಯ ಪಠ್ಯ ಸಿಗಲಿದೆ. ಇದಕ್ಕೆ ಅಗತ್ಯವಾದ ಕೆಲವು ಮೂಲ ಸೌಕರ್ಯ, ಕಲಿಕಾ ಸಾಮಗ್ರಿಗಳನ್ನೂ ಇಲಾಖೆ ಒದಗಿಸಬೇಕಾಗಬಹುದಾಗಿದೆ.

Advertisement

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪಠ್ಯ ರಚನೆಯ ಬಳಿಕ ಕಲಿಕಾ ಹಾಗೂ ಪರೀûಾ ವಿಧಾನಗಳಿಗೆ ಆದ್ಯತೆ ನೀಡಬೇಕಾಗಿದೆ. ಸೀನಿಯರ್‌, ಜೂನಿಯರ್‌ ಬಳಿಕ ವಿದ್ವತ್‌ ಪರೀಕ್ಷೆಗಳಿಗೂ ಪಠ್ಯ ರಚನೆ ಮಾಡಬೇಕಿದೆ. ಯಕ್ಷಗಾನ ಕಲಿತೇ ಕಲಾವಿದರು ಆದವರು ಇಲ್ಲ. ಹಾಗೆ ಕೇಂದ್ರಗಳಲ್ಲಿ ಕಲಿತವರಿಗೆ ಪ್ರಮಾಣ ಪತ್ರ ಕೂಡ ಇಲ್ಲ. ಆದರೆ, ಅವರು ನಡೆಸುವ ಕಲಿಕಾ ಕೇಂದ್ರಗಳಿಗೂ ಮಾನ್ಯತೆ ನೀಡಿ ಯಕ್ಷಗಾನ ಸೀಮೋಲ್ಲಂಘನಕ್ಕೆ ಮುಂದಾಗಬೇಕಿದೆ.

ಯಕ್ಷಗಾನ ಪಠ್ಯ ಮುದ್ರಣಕ್ಕೆ ಹೊರಟಿದ್ದು ಖುಷಿಯಾಗಿದೆ. ಅಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ಯಕ್ಷಗಾನ ಪ್ರಿಯರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ.
– ಪ್ರೊ.ಎಂ.ಎ.ಹೆಗಡೆ ದಂಟ್ಕಲ್‌, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

ಕಲಿಕೆಯ ದೃಷ್ಟಿಯಿಂದ ಇಂಥ ಪಠ್ಯ ರಚನೆ ಆಗಿದ್ದು, ಈಗಲಾದರೂ ಮುದ್ರಣಕ್ಕೆ ಹೋಗಿದ್ದು ಸಂತಸ ಮೂಡಿಸಿದೆ. ಇದು ಎಲ್ಲ ಆಸಕ್ತರ ಕೈಗೆ ಸಿಕ್ಕು ಅಧ್ಯಯನಕ್ಕೆ ಅನುಕೂಲವಾಗಲಿ.
– ಕೇಶವ ಹೆಗಡೆ ಕೊಳಗಿ, ಪ್ರಸಿದ್ಧ ಭಾಗವತರು

– ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next