Advertisement

ಸಿಕ್ಕ ಸಿಕ್ಕವರನ್ನು ಬೈಯುವ,ಭಿಕ್ಷೆ ಬೇಡುವ ಆದಿವಾಸಿಗಳ ವಿಶಿಷ್ಟವಾದ ಹಬ್ಬ!!

06:13 PM May 26, 2022 | Team Udayavani |

ಹುಣಸೂರು : ಆದಿವಾಸಿಗಳ ಪ್ರಮುಖ  ಹಬ್ಬವನ್ನು ನಾಗರಹೊಳೆ ಉದ್ಯಾನವನದಂಚಿನ ವಿವಿಧ ಹಾಡಿ, ಗ್ರಾಮಗಳಲ್ಲಿ ಆಚರಿಸಿ ಕೊಡಗಿನ ದೇವಪುರದತ್ತ ತೆರಳಿದರು.

Advertisement

ಹುಣಸೂರು ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ೩೫ಕ್ಕೂ ಹೆಚ್ಚು ಹಾಡಿಯ ಗಿರಿಜನರು ಸೊಂಟಕ್ಕೆ ಸೊಪ್ಪು ಹಳೇ ಹರಿದ ಬಟ್ಟೆ ಹಾಗೂ ಗೋಣಿ ಚೀಲಗಳಿಂದ ವಿವಿಧ ವೇಷಗಳನ್ನು ತೊಟ್ಟು, ಒಣಗಿದ ಸೋರೆಕಾಯಿ ಬುರುಡೆ, ಪ್ಲಾಸ್ಟಿಕ್ ಡಬ್ಬಿ ಹಾಗೂ ಟಿನ್‌ಗಳನ್ನು ಡೋಲಿನ ರೀತಿಯಲ್ಲಿ ಬಡಿಯುತಾ,ತಮಟೆ ಬಾರಿಸುತ್ತ್ತಾ ಆಕರ್ಷಕವಾಗಿ ಕುಣಿಯುತ್ತಾ, ಎದುರು ಸಿಕ್ಕ-ಸಿಕ್ಕವರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಾ ಭಿಕ್ಷಾಟನೆ ಮಾಡುತ್ತಾ ಹಣ ಹಾಗೂ ಧವಸ ಧಾನ್ಯಗಳನ್ನು ಸಂಗ್ರಹಿಸಿದರು.

ಜೇನುಕುರುಬ, ಬೆಟ್ಟಕುರುಬ ಸಮುದಾಯದವರು ಆಚರಿಸುವ ಈ ಕುಂಡೆ ಹಬ್ಬದ ಸಂಭ್ರಮದಲ್ಲಿ ಕೊಡಗಿನ ಕಾಡಂಚಿನ ಜನರು ಸೇರಿ ಆಚರಿಸಿದರು.

ಯಾಕಾಗಿ  ಹಬ್ಬ?

Advertisement

ನೂರಾರು ವರ್ಷಗಳಿಂದಲೂ ಕೊಡಗಿನ ಕಾಫಿ ತೋಟದ ಕೂಲಿಯನ್ನೇ ಆಶ್ರಯಿಸಿರುವ ಗಿರಿಜನರು ತೋಟದ ಮಾಲಿಕ(ಜಮೀನ್ದಾರರು) ಕೂಲಿಕಾರ್ಮಿಕರನ್ನು ವರ್ಷವಿಡೀ ಬೈಯ್ಯುತ್ತಿದ್ದರು, ಇದನ್ನು ಗಿರಿಜನರು ಒಂದು ದಿನ ಬೈದು ಗಿರಿಜನರು ತಮ್ಮ ಆಕ್ರೋಶವನ್ನು ತೋಡಿಕೊಂಡು ದೇವರಲ್ಲಿ ಪೂಜೆಸಲ್ಲಿಸಿ ಕ್ಷಮೆ ಕೇಳಿ ಕೋಪ ತಣಿಸಿಕೊಳ್ಳುವುದೇ ಈ ಕುಂಡೆ ಹಬ್ಬದ ವಿಶೇಷ.

ಇದನ್ನೂ ಓದಿ : ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ

ದೇವರು-ದೈವಕ್ಕೆ ಸಮರ್ಪಣೆ

ಪ್ರತಿ ವರ್ಷದ ಮೇ ತಿಂಗಳ ಕೊನೆಯ ಬುಧವಾರದಂದು ಗಿರಿಜನರು ವಿವಿಧ ವೇಷ ಧರಿಸಿ ಆಚರಣೆ ಮಾಡುತ್ತಾರೆ, ಬಿಕ್ಷೆ ಬೇಡಿ ಪಡೆದ ಹಣ ಮತ್ತು ದವಸ-ಧಾನ್ಯಗಳನ್ನು ಕೊಡಗಿನ ವಿರಾಜಪೇಟೆ ರಸ್ತೆಯ ತಿತಿಮತಿ ಪಕ್ಕದ ದೇವರಪುರದ ಅಯ್ಯಪ್ಪ ಹಾಗೂ ಭದ್ರಕಾಳಿ ದೇವಾಲಯಕ್ಕೆ ಅರ್ಪಿಸಿ ದೇವರ ಉತ್ಸವದಲ್ಲಿ ಪಾಲ್ಗೊಂಡು ತಾವು ಮಾಡಿದ ತಪ್ಪಿಗಾಗಿ ದೇವರಲ್ಲಿ ಕ್ಷಮೆಯಾಚಿಸಿ ವಿಶೇಷ ಪೂಜೆ ಸಲ್ಲಿಸಿ. ಸಾಮೂಹಿಕ ಅಡುಗೆ ಮಾಡಿ ಪ್ರಸಾದ ಸ್ವೀಕರಿಸುವುದು ಈ ಹಬ್ಬದ ಮತ್ತೊಂದು ವಿಶೇಷ.

ಪಿರಿಯಾಪಟ್ಟಣದಲ್ಲೂ ಅದ್ಧೂರಿಯಾಗಿ ಕುಂಡೆ ಹಬ್ಬ ಆಚರಣೆ:

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಸುಮಾರು 34 ಕ್ಕೂ ಹೆಚ್ಚು ಗಿರಿಜನ ಹಾಡಿಗಳಿದ್ದು, ಇವುಗಳಲ್ಲಿನ ಗಿರಿಜನರು ಸಾಂಪ್ರದಾಯಿಕವಾಗಿ ಆಚರಿಸುವ ಕುಂಡೇ ಹಬ್ಬ ಗಿರಿಜನರ ಪ್ರಮುಖ ಹಬ್ಬವಾಗಿದ್ದು, ಈ ಹಬ್ಬದ ಅಂಗವಾಗಿ ನೂರಾರು ಗಿರಿಜನರು ತಂಡೋಪ ತಂಡವಾಗಿ ಪಿರಿಯಾಪಟ್ಟಣಕ್ಕೆ ಆಗಮಿಸಿದರು.

ಹೆಣ್ಣಿನ ವೇಷ, ಕಾಡು ಮೃಗಗಳ ವೇಷ, ಹೀಗೆ ಅನೇಕ ವೇಷ ಭೂಷಣಗಳನ್ನು ತೊಟ್ಟ ತಂಡ ತಗಡಿನ ಡ್ರಮ್ಮು, ಸೋರೆ ಬುಂಡೆ ಮುಂತಾದವುಗಳನ್ನು ಹಿಡಿದುಕೊಂಡು ವಾದ್ಯ ನುಡಿಸುತ್ತಾ ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಹಾಡಿ ಕುಣಿದು ಕುಪ್ಪಳಿಸುವ ಬೈಯುವ ಮೂಲಕ ಕುಂಡೇ, ಕುಂಡೇ ಎಂದು ಹೇಳುತ್ತಾ ಹಾಡಿ ಸಾರ್ವಜನಿಕರು ಹಾಗೂ ಪಟ್ಟಣದ ಅಂಗಡಿ ಮಾಲೀಕರಿಂದ ಹಣ ಪಡೆಯುವುದು ಮಾಮೂಲಿಯಾಗಿತ್ತು.
ಕುಂಡೇ ಹಬ್ಬದ ಅಂಗವಾಗಿ ಜನರಿಂದ ವಸೂಲಿ ಮಾಡಲಾದ ಹಣವನ್ನು ಕುಂಡೇ ಹಬ್ಬದ ಆಚರಣೆಯ ಅಂಗವಾಗಿ ದೇವರಿಗೆ ಅರ್ಪಿಸಲಾಗುತ್ತದೆ.

ಗಿರಿಜನರೆಲ್ಲರೂ ಸಂಭ್ರಮದಿಂದ ಆಚರಿಸುವ ಕುಂಡೇ ಹಬ್ಬ ನಮ್ಮ ವೇಷಭೂಷಣಗಳು ಎಲ್ಲವೂ ದೇವರಿಗೆ ಅರ್ಪಿತವಾದವು. ಈ ಹಬ್ಬದಲ್ಲಿ ಗಿರಿಜನರು ದೇವರಿಗೆ ಹಿಗ್ಗಮುಗ್ಗಾ ಬೈದು, ಕಂಡ ಕಂಡವರನ್ನೂ ಅಡ್ಡಗಟ್ಟಿ ಅವರಿಂದ ಹಣ ಸಂಗ್ರಹಿಸಿ ಬಳಿಕ ದೇವರೇ ಕ್ಷಮಿಸಿ ಬಿಡಪ್ಪಾ ಎಂದು ಅಡ್ಡಬಿದ್ದು ಎಲ್ಲವನ್ನೂ ಮರೆತು ಬಿಡಿ ಎನ್ನುವ ಬುಡಕಟ್ಟು ಜನರ ವಿಶಿಷ್ಟವಾದ ಕುಂಡೆ ಹಬ್ಬಕ್ಕೆ ಬುಧವಾರ ಹನಗೋಡು ಹೋಬಳಿ ಸುತ್ತ ಮುತ್ತ ಅತಿ ಹೆಚ್ಚು ಗಿರಿಜನರು ವಾಸಿಸುವ ಜನರ ವಿಶಿಷ್ಟ ಹಬ್ಬ.

ಗಿರಿಜನರ ಪ್ರಮುಖ ಹಬ್ಬಗಳಲ್ಲಿ ಕುಂಡೇ ಹಬ್ಬ ಸಹ ಒಂದಾಗಿದ್ದು ನಮ್ಮ ಹಿರಿಯರು ಪಾಲಿಸಿಕೊಂಡ ಈ ಸಾಂಪ್ರದಾಯಿಕ ಹಬ್ಬವನ್ನು ಚಾಚೂ ತಪ್ಪದೆ ನಡೆಸಿಕೊಂಡು ಬಂದಿದ್ದಾರೆ. ಇದನ್ನು ನಾವು ಕೂಡ ಮುಂದುವರಿಸುತ್ತಿದ್ದು ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಈ ಆಚರಣೆಯಲ್ಲಿ ತೊಡಗಿದ್ದೇವೆ. – ಬಸಪ್ಪ ಲಿಂಗಾಪುರ ಹಾಡಿ

Advertisement

Udayavani is now on Telegram. Click here to join our channel and stay updated with the latest news.

Next