Advertisement

 ಇದು ಉದ್ಯೋಗ ಕತ್ತರಿ ಯೋಜನೆ 

01:52 PM Sep 25, 2017 | |

ಒಂದು ಕಡೆ, ಎಲ್ಲವೂ ಕಂಪ್ಯೂಟರೈಸ್ಡ್… ಎಂದು ಬ್ಯಾಂಕ್‌ಗಳು ಘೋಷಿಸುತ್ತಿವೆ. ಮತ್ತೂಂದು ಕಡೆಯಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಬ್ಯಾಂಕ್‌ ಉದ್ಯೋಗಿಗಳ ಸಂಖ್ಯೆ ಕಡಿತವಾಗುತ್ತಿದೆ. ಎಲ್ಲ ವ್ಯವಸ್ಥೆಯನ್ನು ಡಿಜಿಟಲ್‌ ಮಾಡಲಾಗಿದೆ. ಗ್ರಾಹಕರ ಅನುಕೂಲಕ್ಕೆಂದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳುವ ಬ್ಯಾಂಕ್‌ಗಳು, ಅದೇ ಸಮಯದಲ್ಲಿ ಹತ್ತಾರು ಕಾರಣ ಹೇಳಿ ಬಗೆ ಬಗೆಯ ಶುಲ್ಕ ವಿಧಿಸುತ್ತಿವೆ. ಆ ಮೂಲಕ ಗ್ರಾಹಕರಿಗೆ ಹೊರೆ ಆಗುತ್ತಿವೆ…

Advertisement

 80ರ ದಶಕದ ಮಾತು. ಸಾಂಪ್ರದಾಯಿಕ ಹೋಟೆಲ್‌ಗ‌ಳ ಎದುರು ಆಗ ದರ್ಶಿನಿಗಳು ನಿಧಾನವಾಗಿ ತಲೆ ಎತ್ತಿದವು. ಇನ್‌ಫ್ಯಾಕ್ಟ್, ಜನಪ್ರಿಯತೆ ಗಳಿಸಿದವು. 10-30 ಅಡಿ ವ್ಯಾಪ್ತಿಯ ಒಂದು ಜಾಗದಲ್ಲಿ ಎದ್ದುನಿಂತ ಇಂತಹ ಹೋಟೆಲ್‌ನಲ್ಲಿ ಕಣ್ಣೆದುರಿನಲ್ಲಿಯೇ ಅಡುಗೆ ತಯಾರಾಗುತ್ತಿರುತ್ತದೆ. ಗ್ರಾಹಕ ಕುಕಿಂಗ್‌ ಕೌಂಟರ್‌ನಲ್ಲಿಯೇ ಹಣ ತೆತ್ತು ತನ್ನ ಆರ್ಡರ್‌ಅನ್ನು ಪಡೆದುಕೊಳ್ಳಬೇಕು. ಚಿಕ್ಕ ಲಾಂಜ್‌ನಲ್ಲಿ ಹಾಕಿದ ರ್ಯಾಕ್‌ನ ಮೇಲೆ ತಿಂಡಿ ಇಟ್ಟುಕೊಂಡು ನಿಂತೇ ತಿಂದು ಮುಗಿಸಬೇಕು. ಸೆಲ್ಫ್ ಸರ್ವೀಸ್‌ ಎಂಬ ವರ್ಣನೆಯ ಜೊತೆ ಬಂದ ಇಂತಹ ದರ್ಶಿನಿಗಳು ಆಹಾರ ಒದಗಿಸುವಲ್ಲಿ ವಿಳಂಬ ಮಾಡದಿದ್ದುದೇ ಎದ್ದು ಬಿದ್ದು ತಿಂಡಿ ಮುಗಿಸಿ ಕೆಲಸಕ್ಕೆ, ಮನೆಗೆ ತೆರಳುವವರಿಗೆ ಆಕರ್ಷಕ ಎನಿಸಿತ್ತು. ಹೋಟೆಲ್‌ ಮಾಣಿ, ಕ್ಯಾರಿಯರ್‌, ಟೇಬಲ್‌ ಕ್ಲೀನರ್‌ ತರಹದ ವ್ಯವಸ್ಥೆಗಳಿಗೆ ಕೊಕ್‌ ನೀಡಿದ್ದರಿಂದ ಇಲ್ಲಿನ ತಿನಿಸುಗಳು ಕೂಡ ಸ್ವಲ್ಪ ಸಸ್ತಾ ಎನ್ನಿಸಿದ್ದವು.

ಕತ್ತರಿ ಯೋಜನೆಗೆ ಡಿಜಿಟಲ್‌ ವೇಷ!
ಇನ್ನೊಂದು ಮಗ್ಗುಲಿನಿಂದ ನೋಡಿದರೆ, ಇದು ಉದ್ಯೋಗ ಕತ್ತರಿ ಯೋಜನೆ! ಹೋಟೆಲ್‌ ಉದ್ಯಮದ ಸ್ವರೂಪವನ್ನೇ ಬದಲಿಸಿ ಸಾವಿರಾರು ಜನರ ಕೆಲಸಕ್ಕೆ ಕಲ್ಲು ಹಾಕಿದ್ದು ಒಂದೆಡೆಯಾದರೆ, ಗ್ರಾಹಕನಿಂದಲೇ ಸೇವೆ ತೆಗೆದುಕೊಳ್ಳುವಂತೆ ಮಾಡಿ ಅವನಿಂದ ಹಣ ಪೀಕಿಸಿಕೊಂಡದ್ದೂ ವಾಸ್ತವವೇ. ಇಂಥದ್ದೇ ಚಿತ್ರಣವನ್ನು ಈಗ ಬ್ಯಾಂಕ್‌ಗಳಲ್ಲಿ ನೋಡಬಹುದು. ಪಾಸ್‌ಬುಕ್‌ ಮುದ್ರಣಕ್ಕೆ ಈಗ ಕಿಯೋಸ್ಕ್ಗಳು ಬಂದಿವೆ. ಬ್ಯಾಂಕ್‌ ಖಾತೆದಾರ ತನ್ನ ಪಾಸ್‌ಬುಕ್‌ನ್ನು ಇದರೊಳಗೆ ತೂರಿ ಪಾಸ್‌ಬುಕ್‌ ಅಪ್‌ಡೇಟ್‌ ಮಾಡಿಕೊಳ್ಳಬೇಕು. ತನ್ನ ಖಾತೆಗೆ ಹಣ ತುಂಬಲು ಕೂಡ ಯಂತ್ರ ಬಂದಿದೆ. ಹಣ ಕೊಡುವುದಕ್ಕಂತೂ ಎಟಿಎಂ ಬಂದು ದಶಕಗಳೇ ಕಳೆದಿವೆ. ಮುಂಚಿನಂತೆ ನಗದೀಕರಣಕ್ಕೆ ಸಲ್ಲಿಸುವ ಚೆಕ್‌ಗಳನ್ನು ಕೌಂಟರ್‌ನಲ್ಲಿರುವ ಅಧಿಕಾರಿಗೆ ಕೊಡುವ ಪದ್ಧತಿ ಇಲ್ಲ. ಅದಕ್ಕೆಂದೇ ನಿಗದಿಪಡಿಸಿದ ಡಬ್ಬಿಯಲ್ಲಿ ಔಟ್‌ ಸ್ಟೇಷನ್‌, ಲೋಕಲ್‌ ವರ್ಗೀಕರಣವನ್ನು ಗ್ರಾಹಕನೇ ಮಾಡಿ ಹೊತ್ತಾಕಬೇಕು. 

ಇಲ್ಲೂ ಗ್ರಾಹಕನಿಂದಲೇ ಕೆಲಸ ತೆಗೆಸಿ ನಾವು ಸೇವೆ ಕೊಟ್ಟಿದ್ದೇವೆ ಎಂದು ಬ್ಯಾಂಕ್‌ಗಳು ಬೀಗುವ ವಾತಾವರಣ ಸೃಷ್ಟಿಯಾಗಿದೆ. ಇದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬ್ಯಾಂಕ್‌ ಉದ್ಯೋಗಿಗಳ ಸಂಖ್ಯೆ ಕಡಿತಗೊಳ್ಳುತ್ತಿದೆ. ಮತ್ತೂಮ್ಮೆ ಗಣಿತ ಸೋಲುತ್ತಿದೆ. ಮೋದಿ ಮಂತ್ರದ ಪ್ರಕಾರ, ದೇಶದ ಕೊನೆಯ ನಾಗರಿಕ ಕೂಡ ಬ್ಯಾಂಕಿಂಗ್‌ ಮೂಲಕ ಕಾಗದದ ನೋಟುಗಳ ಮೂಲಕ ವ್ಯವಹಾರ ಮಾಡುವುದು ನಿಲ್ಲಬೇಕು. ಈ ನೀತಿಯಿಂದಾಗಿ ಕೋಟಿಗಳ ಸಂಖ್ಯೆಯಲ್ಲಿ ಬ್ಯಾಂಕ್‌ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಗಣಿತ ನಿಯಮದ ಪ್ರಕಾರ, ಬ್ಯಾಂಕ್‌ ಉದ್ಯೋಗಿಗಳ ಸಂಖ್ಯೆ ಅನುಪಾತ ಸ್ವರೂಪವಾಗಿ ಹೆಚ್ಚಬೇಕು. ಆಗುತ್ತಿರುವುದು ಸಂಪೂರ್ಣ ಭಿನ್ನ.

ಬ್ಯಾಂಕಿಂಗ್‌ ತಜ್ಞರ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಶೇ. 30ರಷ್ಟು ಬ್ಯಾಂಕಿಂಗ್‌ ಉದ್ಯೋಗಗಳ ಸಂಖ್ಯೆ ಕಣ್ಮರೆಯಾಗಲಿದೆ. ಕಣ್ಮರೆ ಎಂಬ ಪದಬಳಕೆಗೆ ಹಿನ್ನೆಲೆ ಇದೆ. ಬ್ಯಾಂಕ್‌ಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಆಸಕ್ತ ಅರ್ಹರನ್ನು ಆಹ್ವಾನಿಸಿಯೂ ಆ ಸ್ಥಾನ ಭರ್ತಿಗೆ ಜನ ಸಿಗದಿದ್ದರೆ ಅದನ್ನು ಖಾಲಿ ಇರುವ ಸ್ಥಾನಗಳು ಎಂದು ಗುರುತಿಸಲಾಗುತ್ತಿತ್ತು. ಆದರೆ ಆಟೋಮ್ಯಾಟಿಕ್‌ ತಂತ್ರಜಾnನದ ಅಳವಡಿಕೆಯ ನಂತರ ಬ್ಯಾಂಕ್‌ಗಳೇ ಪ್ರಜಾnಪೂರ್ವಕವಾಗಿ ಈ ಹುದ್ದೆಗಳನ್ನೇ ಕೈಬಿಡುವುದರಿಂದ ಕಣ್ಮರೆ ಎಂಬ ಪದ ಬಳಕೆಯೇ ಸೂಕ್ತ.

Advertisement

ತಳಕ್ಕೆ ಮಾತ್ರ ಬೆಂಕಿ!
ಈ ತಂತ್ರಜಾnನದ ನೇರ ಪರಿಣಾಮ, ಬ್ಯಾಂಕ್‌ಗಳ ಕೆಳ ಹಂತದ ಉದ್ಯೋಗಾವಕಾಶವನ್ನೇ ಹೆಚ್ಚು ಪ್ರಭಾವಿಸುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಬ್ಯಾಂಕ್‌ ಎಂಬುದು ಎಂದಿನ ಹಣ ತುಂಬುವ, ತೆಗೆಯುವ, ದೃಶ್ಯವೇ ಇಲ್ಲದ ವ್ಯವಸ್ಥೆ ಆಗಿಬಿಡಬಹುದು. ಆಕ್ಸಿಸ್‌ನಂಥ ಖಾಸಗಿ ಬ್ಯಾಂಕ್‌ ದೇಶಾದ್ಯಂತ ಒಂದೂವರೆ ಸಾವಿರಕ್ಕೂ ಹೆಚ್ಚು ಹಣ ತುಂಬುವ ಮಿಷನ್‌ಗಳನ್ನು ಅಳವಡಿಸಿಕೊಂಡಿದೆ. ಆನ್‌ಲೈನ್‌ ವ್ಯವಸ್ಥೆಯ ಕಾರಣ ಡಿಜಿಟಲ್‌ ಆಗಿಯೇ ಈ ಬ್ಯಾಂಕ್‌ನ ಶೇ. 75ರಷ್ಟು ಜನ ಚೆಕ್‌ಬುಕ್‌ ಬೇಡಿಕೆಯ ಸೌಲಭ್ಯವನ್ನು ಪೂರೈಸಿಕೊಳ್ಳುತ್ತಾರೆ. ಐಸಿಐಸಿಐ, ಹೆಚ್‌ಡಿಎಫ್ಸಿ ತರಹದ ಖಾಸಗಿ ಬ್ಯಾಂಕ್‌ಗಳು ಮಾನವ ಆಧಾರಿತ ಬ್ಯಾಂಕಿಂಗ್‌ನಿಂದ ದೂರ ಹೋಗುತ್ತಿವೆ. ಒಂದರ್ಥದಲ್ಲಿ ತಾಂತ್ರಿಕತೆ ಗ್ರಾಹಕನೇ ಹೆಚ್ಚು ಕೆಲಸವನ್ನು ಮಾಡಿಕೊಳ್ಳುವಂತೆ ಉಪಾಯ ಹೂಡಿದೆ.

ಒಂದು ಮಾಹಿತಿಯ ಪ್ರಕಾರ, ಈಗಾಗಲೇ ಸಾಲ ಪ್ರಕ್ರಿಯೆ ಹಾಗೂ ಆರ್ಥಿಕ ಸರಕು ವ್ಯವಸ್ಥೆಯನ್ನು ರೋಬೋಟ್‌ಗಳ ಮೂಲಕ ಮೇಲಿನ ಬ್ಯಾಂಕ್‌ಗಳು ನಿರ್ವಹಿಸುವ ಮಾದರಿಯನ್ನು ಅಳವಡಿಸಿಕೊಂಡಾಗಿದೆ. ಹೆಚ್‌ಡಿಎಫ್ಸಿ ಬ್ಯಾಂಕ್‌, ಇವಾ ಎಂಬ ಎಲೆಕ್ಟ್ರಾನಿಕ್‌ ವರ್ಚುಯಲ್‌ ಅಸಿಸ್ಟೆಂಟ್‌ ಎಂಬ ಸಾಫ್ಟ್ವೇರ್‌ ತಾಂತ್ರಿಕತೆಯನ್ನು ಅಳವಡಿಸಿಕೊಂಡ ನಂತರ 17 ದೇಶಗಳ ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕ ಪ್ರಶ್ನೆ, ಸಂದೇಹಗಳನ್ನು ಮಾನವ ಸಂಪನ್ಮೂಲ ಬಳಸದೆ ಇತ್ಯರ್ಥಪಡಿಸಿದ ಉದಾಹರಣೆ ಇದೆ. ಕೇವಲ 0.4 ಸೆಕೆಂಡ್‌ಗಳಲ್ಲಿ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪ್ರಶ್ನೆಗೆ ಉತ್ತರಿಸುವ ಈ “ಚಾಟ್‌ ಬಾತ್‌’ ಶೇ. 85ರಷ್ಟು ಖಚಿತತೆಯನ್ನು ಪ್ರದರ್ಶಿಸಿದೆ. ಭಾರತದಲ್ಲಿ ಜಾರಿಗೆ ಬಂದ ಆರು ತಿಂಗಳಲ್ಲಿ 2.7 ಮಿಲಿಯನ್‌ ಗ್ರಾಹಕ ಅಹವಾಲುಗಳಿಗೆ ಉತ್ತರಿಸಲಾಗಿದೆ.  ಬ್ಯಾಂಕ್‌ಗಳ ವಿಲೀನ ಕೂಡ ಒಂದೆಡೆ ಉದ್ಯೋಗ ಕತ್ತರಿಯನ್ನು ಪ್ರಚೋದಿಸುವಂತಹದ್ದು. ಈಗಾಗಲೇ ಎಸ್‌ಬಿಐ ಚಾಟ್‌ ಬಾತ್‌ ಜಾರಿಗೊಳಿಸುವ ಲೆಕ್ಕಾಚಾರದಲ್ಲಿದೆ. ಕೇಂದ್ರವೂ 27 ಬ್ಯಾಂಕ್‌ಗಳನ್ನು ವಿಲೀನ ಪ್ರಕ್ರಿಯೆ ಮೂಲಕ ಆರು ದೊಡ್ಡ ಬ್ಯಾಂಕ್‌ಗಳಾಗಿ ಮಾಡುವ ಚಿಂತನೆಯಲ್ಲಿದೆ. ಸೇವಾ ಗುಣಮಟ್ಟದ ವಿಚಾರದಲ್ಲಿ ಮಾತ್ರ ಬ್ಯಾಂಕ್‌ಗಳು ನಿರಾಶೆಯನ್ನೇ ಮಾಡುತ್ತಿವೆ.

ಸುಸ್ಥಿರ ಬೆಳವಣಿಗೆ ಎಂಬುದರತ್ತ….
ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮಾನವ ಸಂಪನ್ಮೂಲ ಹೇರಳ ಲಭ್ಯ ಎಂದೇ ಅರ್ಥೈಸಬಹುದು. ಆದರೆ ತಾಂತ್ರಿಕತೆ ಮತ್ತು ಯಾಂತ್ರೀಕರಣ ಉದ್ಯೋಗಾವಕಾಶಗಳನ್ನು ಕಸಿಯುವಂಥದು. ನಮ್ಮ ಕೋಟ್ಯಂತರ ರೂ. ಬೆಲೆಬಾಳುವ ನೈಸರ್ಗಿಕ ಸಂಪನ್ಮೂಲಗಳನ್ನು ಅನುಭೋಗಿಸಿ ಮಿಥ್ಯೆಯಂತಹ ಹಣದ ಮೌಲ್ಯದ ಬಿಸಿನೆಸ್‌ ಸೃಷ್ಟಿಸುವುದು ಇಂದಿನ ಖಯಾಲಿ. ಯಂತ್ರಗಳು ಈ ಅಪಾಯವನ್ನು ಹೆಚ್ಚಿಸುತ್ತವೆ. ಮಾನವ ಶ್ರಮದಿಂದಲೇ ಹೆಚ್ಚಿನ ಉದ್ಯೋಗ ನಿರ್ವಹಣೆಯಾದರೆ ಒಂದು ಸುಸ್ಥಿರ ಬೆಳವಣಿಗೆ ಆದಂತೆ. ಮೊತ್ತಮೊದಲಾಗಿ ಸುಸ್ಥಿರ ಬೆಳವಣಿಗೆ ಎಂಬ ವ್ಯಾಖ್ಯೆ ಬಳಕೆಯಾಗಿದ್ದು ಕೃಷಿ ಕ್ಷೇತ್ರದಲ್ಲಿ. ರಾಸಾಯನಿಕಗಳನ್ನು ಚೆಲ್ಲಿ, ಕೃತಕ ನೀರಾವರಿ ಸೌಲಭ್ಯ ಕಲ್ಪಿಸಿ, ಗ್ರೀನ್‌ ಹೌಸ್‌, ಪಾಲಿನೇಷನ್‌ ಹಾರ್ಮೋನ್‌ ಸಿಂಪಡನೆಯಂಥ ಕ್ರಮದ ಮೂಲಕ ಅಧಿಕ ಬೆಳೆ ಬೆಳೆದು ಭೂಮಿಯನ್ನು ಬರಡಾಗಿಸುವುದು ಅನುಸರಿಸಬೇಕಾದ ಕೃಷಿ ಕ್ರಮವಲ್ಲ. ಭೂಮಿಯ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವ ಮೂಲ ನಿಧಾನಗತಿಯಲ್ಲಿಯಾದರೂ ಫ‌ಸಲು ಹೆಚ್ಚಾದರೂ ಈ ಸುಸ್ಥಿರ ಬೆಳವಣಿಗೆ ಅಡ್ಡ ಪರಿಣಾಮಗಳಿಲ್ಲದ ಬಹುವರ್ಷದ ವ್ಯವಸ್ಥೆ ಎಂಬ ಮಾತಿದೆ. ವಾಸ್ತವವಾಗಿ ತಾಂತ್ರಿಕತೆಯೇ ಮಾನವನ ಮೇಲೆ ಕುಳಿತು ಅವಕಾಶವನ್ನೇ ಕಸಿಯುವ ಹಂತಕ್ಕೆ ಮುಂದಾಗಬಾರದು ಎಂಬ ವಾದವೂ ಇದೆ.

ಕೈ ಮಗ್ಗದ ಖಾದಿ ತಯಾರಕ ಸಂಸ್ಥೆ ಹೆಗ್ಗೊàಡಿನ “ಚರಕ’ದ ಮುಖ್ಯಸ್ಥ ಪ್ರಸನ್ನ ಹೇಳುವುದು ಇದನ್ನೇ. ಕೈ ಉತ್ಪಾದಕ ಕ್ಷೇತ್ರ ಯಂತ್ರೋತ್ಪಾದಕ ಕ್ಷೇತ್ರಕ್ಕಿಂತ ಹನ್ನೆರಡು ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಿರುವುದನ್ನು ಸರಕಾರಗಳು ಗಮನಿಸಬೇಕು. ಒಂದು ವಿದ್ಯುತ್‌ ಮಗ್ಗ ಅಳವಡಿಕೆಯಿಂದ 12 ಸಾವಿರ ಕೈಮಗ್ಗ ಕಾರ್ಮಿಕರಿಗೆ ಸಿಗುವ ಉದ್ಯೋಗ ತಪ್ಪಿ ಹೋಗುತ್ತಿದೆ. ಉದ್ಯೋಗಾವಕಾಶವನ್ನು ಕಸಿದುಕೊಂಡ ಸರ್ಕಾರ ಹೊಸ ಉದ್ಯಮಗಳ ಮೂಲಕ ಉದ್ಯೋಗ ಸೃಷ್ಟಿಯ ಮಾತನಾಡುವುದು ಶುದ್ಧ ವ್ಯಂಗ್ಯ.

ಪರಿಹಾರ? ಮುಂದೊಂದು ದಿನ ಬ್ಯಾಂಕ್‌ನಲ್ಲಿ ಹಣ ಕಟ್ಟಿದರೆ, ತೆಗೆದರೆ ಅಥವಾ ಪಾಸ್‌ಬುಕ್‌ ಎಂಟ್ರಿ ಮಾಡಿದರೆ ಶುಲ್ಕ. ಅದರ ಬದಲು ಯಂತ್ರಗಳನ್ನು ಜನ ಕಡ್ಡಾಯವಾಗಿ ಬಳಸುವಂತಾಗಬೇಕು ಎಂಬುದು ಎಟಿಎಂ ಕಾರ್ಡ್‌ಗಳ ಜನನ ಸಮಯದಲ್ಲಿ ಪ್ರತಿಪಾದನೆಯಾಗುತ್ತಿತ್ತು. ಈಗ ಬ್ಯಾಂಕ್‌ ಒಳಗೆ ನಿಗದಿತ ನಗದಿ ವ್ಯವಹಾರದ ನಂತರ ಶುಲ್ಕ ಜಾರಿಗೆ ಬಂದು ಮೊದಲ ಮಾತನ್ನು ನಿಜವಾಗಿಸಿದೆ. ಇದರ ಜೊತೆಗೆ ಎಟಿಎಂ ಬಳಕೆಯನ್ನೂ ದುಬಾರಿಯಾಗಿಸಿದೆ. ಕಳೆದ ಮೂರು ತಿಂಗಳಲ್ಲಿ ಮಿನಿಮಮ್‌ ಬ್ಯಾಲೆನ್ಸ್‌, ಚೆಕ್‌ ಶುಲ್ಕ, ಅಕೌಂಟ್‌ ಕ್ಲೋಸರ್‌ ಫೀ ತರಹದ ಅಸ್ತ್ರ ಬಳಸಿ ಎಸ್‌ಬಿಐ ಗ್ರಾಹಕರಿಂದ 250 ಪ್ಲಸ್‌ ಕೋಟಿ ರೂ. ದಂಡ ಪೀಕಿದೆ. ಉಳಿದ ಖಾಸಗಿ ಬ್ಯಾಂಕ್‌ಗಳು ನಮಗಿಂತ ಜಾಸ್ತಿ ದಂಡ ಶುಲ್ಕ ದರವನ್ನು ಹೊಂದಿವೆ ಎಂಬ ಷರಾ ಕೂಡ ಅದರದ್ದು. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್‌ ಶುಲ್ಕದ ವಿರುದ್ಧ ಜನಾಂದೋಲನವೊಂದು ಹುಟ್ಟಬೇಕಾಗಿದೆ. ಆರು ಲಕ್ಷ ಕೋಟಿಯ ಎನ್‌ಪಿಎ ಭಾರವನ್ನು ಸಾಮಾನ್ಯ ಗ್ರಾಹಕ ಯಾಕಾದರೂ ಹೊರಬೇಕು? 

ಎಂ.ವಿ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next