Advertisement

ದೇಶದಲ್ಲಿ ಬುದ್ಧಿಜೀವಿ ಎನಿಸಿಕೊಳ್ಳುವುದು ದಂಧೆ

06:00 AM Dec 02, 2018 | Team Udayavani |

ಬೆಳಗಾವಿ: ಭಾರತದಲ್ಲಿ ಬುದ್ಧಿಜೀವಿಗಳೆನಿಸಿಕೊಳ್ಳುವುದು ದಂಧೆ ಎನಿಸಿದೆ. ಅಧಿಕಾರಸ್ಥರ ಸಂಸ್ಥಾನದಲ್ಲಿ ಜ್ಞಾನ ಅಡ ಇಡುವವರ ಸಂಖ್ಯೆಯೂ ಹೆಚ್ಚಾಗಿದೆ. ಜತೆಗೆ, ಅಧಿಕಾರದಲ್ಲಿ ಇದ್ದವರನ್ನು ಓಲೈಸುವ ತಂತ್ರಗಾರಿಕೆ ನೋಡಿ ಜನ ಬೇಸತ್ತಿದ್ದಾರೆ. ಇದು ಪ್ರಾಮಾಣಿಕತೆಯ ಲಕ್ಷಣ ಅಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ವಿಚಾರವಾದಿಗಳ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ| ಎ.ಪಿ.ಜೆ.ಅಬ್ದುಲ್‌ ಕಲಾಂ ಅಡಿಟೋರಿಯಂನಲ್ಲಿ ಪ್ರಬುದ್ಧ ಭಾರತ ಸಂಘಟನೆಯಿಂದ ಆರಂಭವಾದ ಸ್ಟೆಪ್‌-2018 (ಎಸ್‌ಟಿಇಪಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯಾವುದೇ ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮ, ಗೋಷ್ಠಿಗಳಲ್ಲಿ ಪರಸ್ಪರ ಒಬ್ಬರಿಗೊಬ್ಬರು ಬುದ್ಧಿಜೀವಿ ಎಂದು ಹೊಗಳಿಕೊಳ್ಳುತ್ತಾರೆ. ಇದು ಸದುದ್ದೇಶವೋ, ದುರುದ್ದೇಶವೋ ಗೊತ್ತಿಲ್ಲ. ಬುದ್ಧಿಜೀವಿಗಳನ್ನು ಕಂಡರೆ ಸಾಮಾನ್ಯ ಮನುಷ್ಯರಲ್ಲಿ ಹೇಸುವ ಹಾಗೂ ಅಪನಂಬಿಕೆ ಮೂಡುವ ಪರಿಸ್ಥಿತಿ ಇದೆ. ಬುದ್ಧಿಜೀವಿಗಳೆನಿಸಿಕೊಳ್ಳುವವರ ಬುದ್ಧಿ ಮಾರುಕಟ್ಟೆಯಲ್ಲಿ ಮಾರುವ-ಕೊಳ್ಳುವ ವಸ್ತುವಾಗಿದೆ ಎಂದರು.

ಭಾರತದಲ್ಲಿ ರಾಜಕಾರಣಿಗಳಿಗಿಂತಲೂ ಬುದ್ಧಿಜೀವಿಗಳು, ಇತಿಹಾಸಕಾರರು, ಸಾಂಸ್ಕೃತಿಕ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂಥ ಸಾಂಸ್ಕೃತಿಕ ಪರಂಪರೆಯಲ್ಲಿ ಬುದ್ಧಿಜೀವಿ ಎನ್ನುವುದು ಸಂತನಾಗುವ ಪ್ರಕ್ರಿಯೆಯ ಭಾಗ. ಅದು ನೈತಿಕತೆ, ಪ್ರಾಮಾಣಿಕತೆ, ಬೌದ್ಧಿಕ ಸಾಮರ್ಥಯ ಇದ್ದಾಗ ಮಾತ್ರ ಸಾಧ್ಯ. ಸಮಾಜಕ್ಕೆ ಕ್ರಿಯಾಶೀಲವಾಗಿ ಕೊಡುಗೆ ನೀಡದೆ ಇರುವುದು ಬುದ್ಧಿಜೀವಿ ಎನಿಸಿಕೊಳ್ಳುವವನ ಲಕ್ಷಣ ಅಲ್ಲ ಎಂದರು.

ಭಾರತ ಶಕ್ತಿಶಾಲಿ ದೇಶ ಇದ್ದಾಗಲೂ ಇತರರ ಮೇಲೆ ದಂಡೆತ್ತಿ ಹೋಗಲಿಲ್ಲ. ನೆಪೋಲಿಯನ್‌, ಹಿಟ್ಲರ್‌, ಅಲೆಗಾÕಂಡರ್‌ನಂಥವರನ್ನು ಕಳುಹಿಸಿಕೊಡಲಿಲ್ಲ. ಬದಲಾಗಿ ಭಾರತೀಯ ಸಾಂಸ್ಕೃತಿಕ ರಾಯಭಾರಿಗಳನ್ನು ಕಳುಹಿಸಿ ಕೊಟ್ಟಿದೆ. ದಕ್ಷಿಣ ಭಾರತದಿಂದ ಬೋಧಿಧರ್ಮ ಎಂಬ ರಾಜಮನೆತನದವನು ಸಾವಿರಾರು ವರ್ಷಗಳ ಹಿಂದೆ ಚೀನಾ, ಜಪಾನ್‌ ಜನರಿಗೆ ಸಾಂಸ್ಕೃತಿಕ ಶಿಕ್ಷಣ ನೀಡಿದ್ದಾನೆ. ಸಂಸ್ಕೃತಿ ಮತ್ತು ಶಿಕ್ಷಣವನ್ನು ಬೇರೆ ದೇಶಗಳಿಗೆ ಪರಿಚಯ ಮಾಡಿದ ಸಂತರಿಂದ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಇದೆ ಎಂದರು.

ಭಾರತೀಯ ರೈತರಿಗೆ ಕೇವಲ ನೀರು ಕೊಟ್ಟರೆ ಚಿನ್ನವನ್ನೇ ಬೆಳೆಯುತ್ತಾರೆ ಎಂದು ಹಿರಿಯ ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಆದರೆ, ನೀರಿನ ಬದಲು ಅವರ ಮೇಲೆ ವಿಚಾರಗಳನ್ನು ಹೇರಲಾಗುತ್ತಿದೆ. ಅಮೆರಿಕದಲ್ಲಿ ನಡೆಯುವ ಸ್ಪೆಲ್ಲಿಂಗ್‌ ಬಿ ಸ್ಪರ್ಧೆಯಲ್ಲಿ ಮೊದಲ ಐದು ಸ್ಥಾನ ಭಾರತೀಯ ಸಂಜಾತ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಈ ಬಗ್ಗೆ ಅಧ್ಯಯನ ಮಾಡಿದಾಗ ಭಾರತೀಯರಿಗೆ ಅಪರೂಪ ಹಾಗೂ ಶ್ರೇಷ್ಠ ಜ್ಞಾಪಕ ಶಕ್ತಿ ಇದೆ ಎಂಬುದಾಗಿ ಗೊತ್ತಾಯಿತು. ಇದಕ್ಕೆ ಕಾರಣ ಜ್ಞಾನ ಪರಂಪರೆಯಲ್ಲಿ ಸ್ಮೃತಿಗೆ ಬಹಳ ಮಹತ್ವವಿದೆ. ಬಾಯಿಯಿಂದ ಬಾಯಿಗೆ ಸಾವಿರಾರು ವರ್ಷಗಳಿಂದ ವೇದ, ಇತರೆ ಧರ್ಮ ಗ್ರಂಥಗಳನ್ನು ಒಂದು ಚೂರು ಬದಲಾಗದಂತೆ ಸಂಗ್ರಹಿಸಿ ಇಡಲಾಗಿದೆ. ನಮ್ಮ ಸಂಪ್ರದಾಯಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿವೆ ಎಂದರು.ವಿಟಿಯು ಉಪಕುಲಪತಿ ಡಾ| ಕರಿಸಿದ್ದಪ್ಪ, ರಾಣಿ ಚನ್ನಮ್ಮ ವಿವಿ ಉಪಕುಲಪತಿ ಡಾ| ಶಿವಾನಂದ ಹೊಸಮನಿ, ಕೆಎಲ್‌ಇ ವಿವಿ ಉಪಕುಲಪತಿ ಪ್ರೊ| ವಿವೇಕ ಸಾವೋಜಿ ಹಾಗೂ ಇತರರು ಉಪಸ್ಥಿತರಿದ್ದರು.

Advertisement

ಬ್ರಿಟಿಷರ ಸಂಸ್ಕೃತಿ ಬೂಟು ನೆಕ್ಕುವಷ್ಟು ಶ್ರೇಷ್ಠ ಅನ್ನುತ್ತೇವೆ
ನಮ್ಮನ್ನು ಗುಲಾಮರನ್ನಾಗಿ ಮಾಡಿದವರ ಭಾಷೆಯನ್ನೇ ನಾವು ಹೆಚ್ಚು ಬಳಸುತ್ತೇವೆ. ಅವರನ್ನೇ ಶ್ರೇಷ್ಠ ಎಂದುಕೊಂಡಿದ್ದೇವೆ. ಮೊಘಲರು ನಮ್ಮನ್ನಾಳಿದರೂ ಅವರನ್ನು ಶ್ರೇಷ್ಠ ಎಂದು ಭಾವಿಸಲಿಲ್ಲ. ಬ್ರಿಟಿಷರ ಸಂಸ್ಕೃತಿ ಮಾತ್ರ ಬೂಟು ನೆಕ್ಕುವಷ್ಟು ಶ್ರೇಷ್ಠ ಎಂದುಕೊಂಡಿದ್ದೇವೆ. ನಮ್ಮಲ್ಲಿ ಭಾಷಾ ಶ್ರೇಷ್ಠತೆ ಇದ್ದರೂ ಹೆಮ್ಮೆ ಪಡುವ ಬದಲು ಜಗಳವಾಡುತ್ತಿದ್ದೇವೆ. ಗಾಂಧೀಜಿ ಹೇಳಿದಂತೆ ನಾವು ಈ ದೇಶದ ಮಾಲೀಕರಲ್ಲ, ಟ್ರಸ್ಟಿಗಳು ಎಂದು ಹೊಸಬಾಳೆ ಅಭಿಪ್ರಾಯಪಟ್ಟರು.

ನಮ್ಮನ್ನು ಒಟ್ಟಾಗಿ ಹಿಡಿದಿಡುವ ಸಾಮರ್ಥ್ಯ ಯಾವುದೆಂದರೆ ರೇಷ್ಮೆ ದಾರ ಎಂದು ಜವಾಹರಲಾಲ್‌ ನೆಹರು ಹೇಳಿದ್ದರು. ಅದುವೇ ನಮ್ಮ ಸಂಸ್ಕೃತಿ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರಾಜಕೀಯ ಹಿತಾಸಕ್ತಿಗಳು ನಮ್ಮ ಏಕತೆ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ವಸಾಹತುಶಾಹಿ ಪ್ರವೃತ್ತಿಯಿಂದ ಹೊರ ಬರಬೇಕಾಗಿದೆ ಎಂದು ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next