ಮಂಡ್ಯ: ಪ್ರತಿಯೊಬ್ಬರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛ ಮಾಡಿದರೆ, ಸ್ವಚ್ಛ ದೇಶ ನಿರ್ಮಾಣವಾಗುವ ಜೊತೆಗೆ ಸಾಂಕ್ರಾಮಿಕ ರೋಗ ಮುಕ್ತ ದೇಶ ನಿರ್ಮಾಣವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಹೇಳಿದರು.
ಸಾಂಕ್ರಾಮಿಕ ರೋಗಗಳ ಜಾಗೃತಿ: ಡೆಂಘೀ, ಚಿಕನ್ ಗುನ್ಯಾ ಸೇರಿ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗುವುದು ಮನುಷ್ಯನಿಗೆ ಅವಶ್ಯಕವಾಗಿದೆ. ಇಂತಹ ಗಂಭೀರ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಲು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರಮುಖವಾಗಿದೆ. ಈ ಉದ್ದೇಶದಿಂದ ಇಡೀ ರಾಜ್ಯಾದ್ಯಂತ ಡೆಂಘೀ ರೋಗ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಮೇ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಜಾಗೃತಿ ಮೂಡಿಸುತ್ತಿವೆ. ಜನರು ರೋಗ ಮುಕ್ತರಾಗಿ ಆರೋಗ್ಯಯುತ ಜೀವನ ಮಾಡಬೇಕು ಎಂದು ಹೇಳಿದರು.
ಸ್ವಚ್ಛತೆ ಕಾಪಾಡಿ: ಮನುಷ್ಯ ಆರೋಗ್ಯ ಕಾಪಾಡಿಕೊಳ್ಳಲು ತಾನು ವಾಸ ಮಾಡುವ ಸುತ್ತಲಿನ ಪರಿಸರದ ಸ್ವಚ್ಛತೆ ಇರಬೇಕು. ಸ್ವಚ್ಛತೆಯೇ ಸಾಂಕ್ರಾಮಿಕ ರೋಗಗಳ ವಿನಾಶಕ್ಕೆ ರಾಮಬಾಣವಾಗಿದೆ. ಹೀಗಾಗಿ ತಮ್ಮ ಮನೆ, ಹಾಗೂ ಸುತ್ತಲಿನ ಪರಿಸರ ಸ್ವಚ್ಛ ಮಾಡುವಲ್ಲಿ ಪ್ರತಿಯೊಬ್ಬರೂ ಭಾಗೀದಾರರಾಗಬೇಕು. ಸೊಳ್ಳೆಗಳಿಂದ ಬರುತ್ತಿರುವ ರೋಗಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಹೀಗಾಗಿ ಆರೋಗ್ಯ ಕಾರ್ಯಕರ್ತರು ಸೇರಿ ವಿವಿಧ ಸಂಘಟನೆಗಳ ಮೂಲಕ ಪ್ರತಿಯೊಂದು ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸೊಳ್ಳೆ ನಿವಾರಕ ಬಳಸಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಚೇಗೌಡ ಮಾತನಾಡಿ, ಸಾಂಕ್ರಾಮಿಕ ರೋಗಗಳಿಗೆ ಮನುಷ್ಯನ ಸುತ್ತಲೂ ಇರುವ ನೈರ್ಮಲ್ಯದ ಕೊರತೆಯೇ ಕಾರಣವಾಗಿದೆ. ಸೊಳ್ಳೆಗಳು ಬಹುತೇಕ ಮಾರಣಾಂತಿಕ ಸಾಂಕ್ರಾಮಿಕ ರೋಗ ಹರಡುವ ಕೀಟವಾಗಿದೆ. ಹಗಲಿನಲ್ಲಿ ಕಚ್ಚುವ ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಡೆಂಘೀ ರೋಗ ಬರುತ್ತದೆ. ಹೀಗಾಗಿ ನೀರು ನಿಲ್ಲದಂತೆ ಗುಂಡಿಗಳನ್ನು ಹಾಗೂ ಚರಂಡಿಗಳನ್ನು ಮುಚ್ಚುವ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬೇಕು. ಮನೆಯಲ್ಲಿ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿವಾರಕಗಳನ್ನು ಬಳಕೆ ಮಾಡಬೇಕು. ಡೆಂಘೀ ಬರದಂತೆ ಜಾಗೃತಿ ವಹಿಸಬೇಕು ಎಂದರು.
Advertisement
ನಗರದ ಜಯಚಾಮರಾಜ ಒಡೆಯರ್ ವೃತ್ತದಿಂದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಆವರಣದವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಡೆಂಘೀ ಜಾಗೃತಿ ಜಾಥಾಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಡೆಂಘೀ ಮುಕ್ತ ಜಿಲ್ಲೆ: ಮೇ ತಿಂಗಳ ಕೊನೆಯ ದಿನಗಳು, ಜೂನ್ ಹಾಗೂ ಜುಲೈ ತಿಂಗಳ ಮಳೆಗಾಲದಲ್ಲಿ ಡೆಂಘೀ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸಾರ್ವಜನಿಕರು ಜ್ವರ, ತಲೆನೋವು, ವಾಂತಿ, ತೀವ್ರ ಕಣ್ಣಿನ ನೋವು ಹಾಗೂ ಅತಿಯಾದ ಸುಸ್ತು ಕಂಡು ಬಂದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ರಾಜ್ಯದಲ್ಲಿ 201-17ನೇ ಸಾಲಿನಲ್ಲಿ ಡೆಂಘೀ ಪ್ರಕರಣದಿಂದ ಹಲವು ಜನರು ಸಾವನ್ನಪ್ಪಿದ್ದಾರೆ. ಆದರೆ ಕಳೆದ 2018ನೇ ಸಾಲಿನಲ್ಲಿ ಡೆಂಘೀ ರೋಗ ದಿಂದ ಸಾವು ಸಂಭವಿಸಿಲ್ಲ. ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವ ಮೂಲಕ ಡೆಂಘೀ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದರು. ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಅಧಿಕಾರಿ ಡಾ.ಭವಾನಿ ಶಂಕರ್, ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಮತ್ತಿತರರಿದ್ದರು.