Advertisement

ಐಟಿ ದಿಢೀರ್‌ ದಾಳಿ ಮಾಡಲ್ಲ

11:49 AM Mar 29, 2019 | Lakshmi GovindaRaju |

ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ಪ್ರಕ್ರಿಯೆ ಕೇವಲ ಒಂದೆರಡು ದಿನಗಳಲ್ಲಿ ನಡೆಯುವಂತಹದಲ್ಲ. ಇದು ಕನಿಷ್ಠ ಆರೇಳು ತಿಂಗಳ ನಿರಂತರ ಅಧ್ಯಯನ.

Advertisement

ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆಗೆ ನಾನಾ ಮಾರ್ಗಗಳಿಂದ ಹತ್ತಾರು ದೂರುಗಳು ಬರುತ್ತವೆ. ಜತೆಗೆ ಕೆಲ ವಿಶ್ವಾಸರ್ಹ ಮೂಲಗಳಿಂದ ಮಾಹಿತಿ ಲಭ್ಯವಾಗುತ್ತದೆ. ಐಟಿ ಇಲಾಖೆ ಗುಪ್ತಚರ ವಿಭಾಗ ಪರಿಶೀಲಿಸಿ ಮೊದಲಿಗೆ ಈ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳುತ್ತದೆ.

ನಂತರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮೇಲಿನ ದಾಳಿಗೂ ಮೊದಲು ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ, ಅವುಗಳ ಪೂರ್ವಪರ ಪರಿಶೀಲನೆ ನಡೆಸುವುದರ ಜತೆಗೆ ಸಮಗ್ರ ಅಧ್ಯಯನ ಕೂಡ ನಡೆಸುತ್ತಾರೆ.

ದಾಳಿ ಮಾಡುವ ವ್ಯಕ್ತಿಯ ಸಂಬಂಧಿಕರು, ಸ್ಥಳೀಯರಿಂದ ಮಾಹಿತಿ, ಸರ್ಕಾರಿ ಕಚೇರಿಗಳಲ್ಲಿ ಲಿಖೀತ ರೂಪದ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಈ ಸಂದರ್ಭದಲ್ಲಿ ದೊರೆತ ದಾಖಲೆಗಳು, ಸಾಕ್ಷ್ಯಗಳನ್ನು ಖಚಿತ ಪಡಿಸಿಕೊಂಡು ಅನಂತರವೇ ದಾಳಿ ಮಾಡುತ್ತಾರೆ.

ಆದರೆ, ಯಾವುದೇ ಸಂದರ್ಭದಲ್ಲೂ ದೂರು ಅಥವಾ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡುವುದಿಲ್ಲ. ಈ ಪ್ರಕ್ರಿಯೆ ಉದ್ದೇಶ ಏಕಕಾಲದಲ್ಲಿ ವಿವಿಧೆಡೆ ದಾಳಿ ಮಾಡುವುದಾಗಿದೆ.

Advertisement

ಒಂದು ವೇಳೆ ದಾಳಿಗೊಳಗಾದ ವ್ಯಕ್ತಿಯ ಮನೆಯಲ್ಲಿ ಯಾವುದೇ ಮಾಹಿತಿ ಪತ್ತೆಯಾಗದಿದ್ದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗುತ್ತದೆ. ಹೀಗಾಗಿ ನಿರಂತರ ಅಧ್ಯಯನ ನಡೆಸಲಾಗುತ್ತದೆ. ಕೆಲ ಜನಪ್ರತಿನಿಧಿಗಳು, ದೊಡ್ಡ ಉದ್ಯಮಿಗಳ ಮೇಲೆ ದಾಳಿ ಪ್ರಕ್ರಿಯೆ ಕನಿಷ್ಠ ಒಂದು ವರ್ಷವಾದರು ಬೇಕಾಗುತ್ತದೆ ಎಂದು ಚಾರ್ಟರ್ಡ್‌ ಅಕೌಂಟೆಂಟ್‌ ಡಾ.ವಿಷ್ಣು ಭರತ್‌ ಅಭಿಪ್ರಾಯಪಡುತ್ತಾರೆ.

ಸ್ಥಳೀಯ ಪೊಲೀಸರ ಮೇಲೆ ಗುಮಾನಿ: ಬಹುತೇಕ ಜನಪ್ರತಿನಿಧಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಮೇಲಿನ ದಾಳಿ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಕೇಂದ್ರದ ಭದ್ರತಾ ಪಡೆಗಳನ್ನು ನಿಯೋಜಿಸಿಕೊಳ್ಳುತ್ತಾರೆ. ಇಲ್ಲವಾದರೆ, ದಾಳಿಯ ದಿನವೇ ಸ್ಥಳೀಯ ಪೊಲೀಸರನ್ನು ತಮ್ಮೊಡನೆ ಕರೆದೊಯ್ದು ಭದ್ರತೆ ಪಡೆದುಕೊಳ್ಳುತ್ತಾರೆ.

ಅದುವರೆಗೂ ದಾಳಿ ಮಾಡುವ ವ್ಯಕ್ತಿಯ ಹೆಸರನ್ನು ಐಟಿ ಅಧಿಕಾರಿಗಳು ಪೊಲೀಸರಿಗೆ ತಿಳಿಸುವುದಿಲ್ಲ. ಅಷ್ಟೇ ಅಲ್ಲದೆ, ಕೆಲವೊಮ್ಮೆ ದಾಳಿ ಮಾಡುವ ಅಧಿಕಾರಿಗೂ ತಾವು ಯಾರ ಮನೆ ಅಥವಾ ಕಚೇರಿ ಮೇಲೆ ದಾಳಿ ಮಾಡುತ್ತಿದ್ದೇವೆ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಇಡೀ ಇಲಾಖೆ ಪ್ರತಿಯೊಂದು ಕಾರ್ಯಾಚರಣೆಯನ್ನು ಗೌಪ್ಯವಾಗಿ ನಡೆಸುತ್ತದೆ.

ಬೇನಾಮಿ ಆಸ್ತಿ ಪತ್ತೆ: ಸಾಮಾನ್ಯವಾಗಿ ಜನಪ್ರತಿನಿಧಿಗಳು, ಉದ್ಯಮಿಗಳು ತಮ್ಮ ಸಂಬಂಧಿಕರು, ಕೆಲಸದಾಳುಗಳ ಹೆಸರಿನಲ್ಲಿ ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡುತ್ತಾರೆ. ಈ ಮಾಹಿತಿಯನ್ನು ಐಟಿ ಅಧಿಕಾರಿಗಳು ಉದ್ಯಮಿ ಹೆಸರಿನಲ್ಲಿರುವ ಆಸ್ತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ.

ನಂತರ ತಾಲೂಕು ಕಚೇರಿ ಹಾಗೂ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಪತ್ತೆಯಾಗುವ ಕೆಲ ದಾಖಲೆಗಳನ್ನಾಧರಿಸಿ ಆಸ್ತಿ ಮಾಲೀಕನ ಪೂರ್ವಪರ, ಆತನಿಗೆ ಆಸ್ತಿ ಖರೀದಿಗೆ ಸಾಮರ್ಥಯ ಇದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ಬೇನಾಮಿ ಆಸ್ತಿ ಬಗ್ಗೆ ಖಚಿತ ಪಡಿಸಿಕೊಳ್ಳುತ್ತಾರೆ.

ಮತ್ತೂಂದೆಡೆ ತೆರಿಗೆ ವಂಚನೆ, ಆದಾಯ ಮೀರಿ ಆಸ್ತಿ ಸಂಪಾದನೆ ವಿಚಾರಗಳು ಸಾಮಾನ್ಯವಾಗಿ ಆರ್ಥಿಕ ವರ್ಷದಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆ ವೇಳೆ ಬೆಳಕಿಗೆ ಬರಲಿವೆ.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next