Advertisement
ಹಣ ಗಳಿಸುವುದು, ಗಳಿಸಿದ ಹಣವನ್ನು ಉಳಿಸುವುದು, ಉಳಿಸಿದ ಹಣವನ್ನು ಅತ್ಯಧಿಕ ಲಾಭಕ್ಕಾಗಿ ಹೂಡುವುದು ನಮ್ಮ ಬದುಕಿನ ಒಟ್ಟು ಆರ್ಥಿಕ ಚಟುವಟಿಕೆಗಳ ಬಹುಮುಖ್ಯ ಭಾಗ ಎಂಬುದನ್ನು ನಾವು ಅರಿತಿದ್ದೇವೆ. ಇದೆಲ್ಲವೂ ಸರಿ; ಆದರೆ ನಾವು ಗಳಿಸುವ ಹಣ, ಉಳಿಸುವ ಹಣ, ಹೂಡುವ ಹಣ, ಈ ಹೂಡಿದ ಹಣದಿಂದ ನಮಗೆ ಬರುವ ಲಾಭ (ಇಳುವರಿ) ಇತ್ಯಾದಿಗಳ ಸರಿಯಾದ ಲೆಕ್ಕಾಚಾರ ಇಟ್ಟು ಕೊಳ್ಳುವುದು ಕೂಡ ಅಷ್ಟೇ ಮುಖ್ಯ.
Related Articles
Advertisement
ನಾವು ಖುದ್ದಾಗಿ ಸೆಕೆಂಡರಿ ಮಾರ್ಕೆಟ್ನಲ್ಲಿ ಕೈಗೊಳ್ಳುವ ಶೇರು ಖರೀದಿ ಮತ್ತು ಮಾರಾಟದ ವ್ಯವಹಾರಗಳು, ಬ್ಯಾಂಕುಗಳಲ್ಲಿ ನಾವಿರಿಸುವ ನಿರಖು ಠೇವಣಿ, RD, ನಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುವ ಯಾವುದೇ ರೀತಿಯ “ಇತರೇ ಮೂಲಗಳ ಆದಾಯ’ ಎಲ್ಲವೂ ಐಟಿ ಇಲಾಖೆಗೆ ಗೊತ್ತಾಗುತ್ತದೆ. ಹೇಗೆಂದರೆ ನಾವು ನೋ ಯುವರ್ ಕಸ್ಟಮರ್ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮದಡಿ ನಾವು ಬ್ಯಾಂಕುಗಳಿಗೆ ಸಲ್ಲಿಸಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮೂಲಕ !
ಮೇಲಾಗಿ ನಾವು ಐಟಿ ರಿಟರ್ನ್ ಸಲ್ಲಿಸುವಾಗ ನಮಗೆ ನೆರವಾಗುವ ಚಾರ್ಟರ್ಡ್ ಅಕೌಂಟೆಂಟ್, ನಮ್ಮ ಸಕಲ ಬಗೆಯ ಆದಾಯಗಳ ದಾಖಲೆ ಪತ್ರಗಳನ್ನು ಕೇಳುತ್ತಾರೆ. ಬ್ಯಾಂಕ್ ಖಾತೆಗಳ ವರ್ಷಪೂರ್ತಿ ವಹಿವಾಟಿನ ವಿವರಗಳನ್ನು ತೋರಿಸುವ ಸ್ಟೇಟ್ಮೆಂಟ್ ಆಫ್ ಅಕೌಂಟ್ ಅನ್ನು ನಾವು ಅವರಿಗೆ ಕೊಡಲೇ ಬೇಕಾಗುತ್ತದೆ. ಹಾಗೆಯೇ ನಾವು ಮಾರಿರುವ ಶೇರುಗಳ ಕಾಂಟ್ರಾಕ್ಟ್ ನೋಟ್ ಪ್ರತಿ ಕೂಡ ಬಹಳ ಮುಖ್ಯವಾಗುತ್ತದೆ.
ಒಂದು ನಿರ್ದಿಷ್ಟ ದಿನದಂದ ನಾವು ಖರೀದಿಸಿ ಅದೇ ದಿನ ಮಾರುವ ಶೇರುಗಳ ವಹಿವಾಟು “ಸಟ್ಯಾ ವಹಿವಾಟು’ ಅಥವಾ ಸ್ಪೆಕ್ಯುಲೇಟೀವ್ ಟ್ರೇಡಿಂಗ್ ಎನಿಸಿಕೊಳ್ಳುತ್ತದೆ. ಒಂದು ನಿರ್ದಿಷ್ಟ ದಿನ ಖರೀದಿಸಿದ ಶೇರನ್ನು ಎರಡು ವರ್ಷಗಳ ಒಳಗೆ ಲಾಭಕ್ಕೆ ಮಾರಿದಲ್ಲಿ ಒಂದು ಲಕ್ಷ ಮೀರುವ ಲಾಭದ ಮೇಲೆ ನಮಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ತೆರಿಗೆ (LTCG) ಲಗಾವಾಗುತ್ತದೆ.
ವಿಷಯ ಹೀಗಿರುವಾಗ ನಾವು ಐಟಿ ರಿಟರ್ನ್ಸ್ ಸಲ್ಲಿಸುವಲ್ಲಿ ನೀಡದ ಅಥವಾ ನೀಡಲು ಮರೆತುಹೋದ, ಅಥವಾ ಜಾಣ ಮರೆವು ತೋರಿಸಿದ ಪ್ರಸಂಗ ಇದ್ದಲ್ಲಿ ನಮಗೆ ನೇರವಾಗಿ ಐಟಿ ನೊಟೀಸ್ ಬರುತ್ತದೆ. ಎಂದರೆ ಐಟಿ ಇಲಾಖೆಯ ಕೈಯಲ್ಲಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಮೂಲಕ ನಮ್ಮ ಸಂಪೂರ್ಣ ಆರ್ಥಿಕ ಜಾತಕ ಇರುತ್ತದೆ.
ಹಾಗಾಗಿ ನಾವು ನಿರ್ದಿಷ್ಟ ಹಣಕಾಸು ವರ್ಷ ಆರಂಭವಾಗುವ ಎಪ್ರಿಲ್ 1ರಿಂದಲೇ ಜಾಗೃತರಾಗಿ ತೆರಿಗೆ ವಿನಾಯಿತಿಗೆ ಹಣ ಹೂಡುವ ಯೋಜನೆಯನ್ನು ಕೈಗೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡದೇ ಹೋದರೆ ಮಾರ್ಚ್ 31ಕ್ಕೆ ಹಣಕಾಸು ವರ್ಷ ಮುಗಿಯುವಾಗ ನಾವು ತೆರಿಗೆ ವಿನಾಯಿತಿ ಪಡೆಯುವ ಹೂಡಿಕೆಗಾಗಿ ಆರ್ಥಿಕ ಅಡಚಣೆಯನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲೆಂದೇ ವಿವಿಧ ಮುಂಚೂಣಿ ಕಂಪೆನಿಗಳ ರೂಪಿಸಿರುವ ಮ್ಯೂಚುವಲ್ ಫಂಡ್ ಗಳ ಸಿಪ್ (SIP = Systematic Investment Plan) ಯೋಜನೆಯು ನಮ್ಮ ಅನುಕೂಲಕ್ಕಾಗಿಯೇ ಇದೆ ಎಂಬುದನ್ನು ನಾವು ಮನಗಾಣಬೇಕು.
ಈ ನಿಟ್ಟಿನಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾದ ಸಂಗತಿ ಎಂದರೆ ನಮ್ಮ ಆದಾಯದ ಮೇಲಿನ ತೆರಿಗೆ ವಿನಾಯಿತಿ ಪಡೆಯಲು ನಾವು ವರ್ಷಕ್ಕೆ 1.50 ಲಕ್ಷ ರೂ. ಹೂಡಲೇ ಬೇಕು ಎನ್ನುವುದು ! ನಮ್ಮ ಮಟ್ಟಿಗಿನ ಇಷ್ಟೊಂದು ದೊಡ್ಡ ಮೊತ್ತವನ್ನು ನಾವು ಏಕಗಂಟಿನಲ್ಲಿ ಮಾರ್ಚ್ ತಿಂಗಳಲ್ಲಿ ಸರ್ವಥಾ ಹೂಡಲಾರೆವು. ಆದುದರಿಂದ ಹನಿ,ಹನಿ ಕೂಡಿ ಹಳ್ಳ ಎಂಬ ನೆಲೆಯಲ್ಲಿ ನಾವು ಸಿಪ್ ಮೂಲಕ ತಿಂಗಳ ಕಂತಿನಲ್ಲಿ ಈ ಮೊತ್ತವನ್ನು ವಿಭಾಗಿಸಿ ಹೂಡುವುದೇ ಸರಿಯಾದ ಬುದ್ಧಿವಂತಿಕೆಯ ಕ್ರಮ ಎನಿಸುವುದು.
ಈ ನಿಟ್ಟಿನಲ್ಲಿ ನಾವು ಸದಾ ನೆನಪಿರಿಸಿಕೊಳ್ಳಬೇಕಾದ ಸೂತ್ರಗಳು ಹೀಗಿವೆ :
1. ನಾವು ಆದಾಯ ತೆರಿಗೆ ವಿನಾಯಿತಿಗಾಗಿ ನಾವು ವರ್ಷಂಪ್ರತಿ ಹೂಡುವ 1.50 ಲಕ್ಷ ರೂ. ನಮ್ಮ ಭವಿಷ್ಯದ ಆಸ್ತಿ. ಉದ್ಯೋಗದಿಂದ ನಾವು ನಿವೃತ್ತರಾಗುವಾಗ ಕೋಟ್ಯಧೀಶರಾಗಲು ಪೂರಕ. ಒಮ್ಮೆಲೆ 1.50 ಲಕ್ಷ ರೂ. ನಾವು ಎಲ್ಲಿಂದಲೂ ತರಲಾರೆವು; ತಿಂಗಳ ಕಂತು ಕಂತಿನ ಸಿಪ್ ಹೂಡಿಕೆಯಿಂದ ನಮಗೆ ಸಂಭಾವ್ಯ ಆರ್ಥಿಕ ಅಡಚಣೆಯ ನೋವು ಕಡಿಮೆ.
2. ಏಕಗಂಟಿನಲ್ಲಿ ಹಣ ಹೂಡುವುದಕ್ಕಿಂತ ಕಂತು ಕಂತಿನಲ್ಲಿ ಹೂಡಿದರೆ (ಸಿಪ್ ಮೂಲಕ) ನಮಗೆ ಅತ್ಯಧಿಕ ಲಾಭ, ಇಳುವರಿ. ವರ್ಷಾಂತ್ಯದಲ್ಲಿ ಹೂಡಿಕೆಗೆ ಹಣ ಹೊಂದಿಸುವ ಟೆನ್ಶನ್ ಇರುವುದಿಲ್ಲ. ಮೇಲಾಗಿ ಫಂಡ್ ನ ಎಲ್ಲ ಏರಿಳಿತಗಳ ಲಾಭ ನಮಗೆ ಸಿಗುತ್ತದೆ. ನಾವು ಸದಾ ಕಾಲ ಅದರೊಳಗೇ ಇರುತ್ತೇವೆ.
3. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ನಮಗೆ ಕಲ್ಪಿಸುವ 1.50 ಲಕ್ಷ ರೂ.ಗಳ ಹೂಡಿಕೆ ಅವಕಾಶ ನಿಜಕ್ಕೂ ಒಂದು ದೊಡ್ಡ ಅವಕಾಶ. ಅದರ ಸದುಪಯೋಗದಲ್ಲೇ ನಮ್ಮ ಭವಿಷ್ಯದ ಸಿರಿವಂತಿಗೆ ಅಡಕ.
4. ಪವರ್ ಆಫ್ ಕಾಂಪೌಂಡಿಗ್ನಿಂದ ನಮಗೆ ಸಿಪ್ ಮೂಲಕದ ಮ್ಯೂಚುವಲ್ ಫಂಡ್ ಹೂಡಿಕೆಯಿಂದ ಸಿರಿವಂತಿಕೆಯ ಭಾಗ್ಯದ ಬಾಗಿಲು ತೆರೆದಿರುವುದು ನಿಶ್ಚಿತ.