Advertisement

ವರ್ಷಾಂತ್ಯದವರೆಗೂ ಈ ಬಾರಿ ವಿದ್ಯುತ್‌ಗೆ ಬರವಿಲ್ಲ

06:00 AM Aug 18, 2018 | Team Udayavani |

ಬೆಂಗಳೂರು: ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಜಲವಿದ್ಯುತ್‌ ಘಟಕಗಳಿರುವ ಜಲಾಶಯಗಳಲ್ಲಿ ನೀರಿನ ಸಂಗ್ರಹ ಎರಡು ಪಟ್ಟು ಹೆಚ್ಚಾಗಿದೆ. ಇದೇ ವೇಳೆ, ಕಳೆದ ವರ್ಷಕ್ಕೆ ಹೋಲಿಸಿದರೆ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಮೂರು ಪಟ್ಟು ಹೆಚ್ಚಾಗಿದೆ. ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್‌ ಉತ್ಪಾದನೆಯಲ್ಲೂ ಮೂರು ಪಟ್ಟು ಏರಿಕೆಯಾಗಿದೆ. ಹೀಗಾಗಿ, ಈ ವರ್ಷಾಂತ್ಯದವರೆಗೂ ವಿದ್ಯುತ್‌ಗೆ ಬರ ಬರುವ ಸಾಧ್ಯತೆಯಿಲ್ಲ.

Advertisement

ಮುಂಗಾರು ಆರಂಭದಿಂದಲೂ ರಾಜ್ಯದ ಹಲವಡೆ ಉತ್ತಮ ಮಳೆಯಾಗಿದ್ದು, ಒಂದೆಡೆ ಕೃಷಿ ಪಂಪ್‌ಸೆಟ್‌ ಬಳಕೆಯ ಪ್ರಮಾಣ ಇಳಿಕೆಯಾಗಿದೆ. ಇನ್ನೊಂದೆಡೆ, ನವೀಕರಿಸಬಹುದಾದ ಇಂಧನ ಮೂಲದಿಂದ ಗರಿಷ್ಠ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಹಾಗಾಗಿ, ಜಲವಿದ್ಯುತ್‌, ಉಷ್ಣ ವಿದ್ಯುತ್‌ ಉತ್ಪಾದನೆ ಕಡಿಮೆಯಿದ್ದು, ಜಲಾಶಯಗಳಲ್ಲಿ ನೀರು ಶೇಖರಣೆ, ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನಿಗೆ ನೆರವಾಗಿದೆ.

ಲಿಂಗನಮಕ್ಕಿ ಬಹುಪಾಲು ಭರ್ತಿ: ಲಿಂಗನಮಕ್ಕಿ ಜಲಾಶಯ ಶೇ.96ರಷ್ಟು ಭರ್ತಿಯಾಗಿದ್ದು, ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. 35 ದಿನಗಳಲ್ಲಿ ಶೇ.59ರಷ್ಟು ನೀರು ಜಲಾಶಯಕ್ಕೆ ಬಂದಿದೆ. 1975-76ನೇ ಸಾಲಿನಿಂದ ಈವರೆಗೆ 14 ವರ್ಷವಷ್ಟೇ ಜಲಾಶಯ ಭರ್ತಿಯಾಗಿದ್ದು, ಈ ಬಾರಿಯೂ ಪೂರ್ತಿ ಭರ್ತಿಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಗರಿಷ್ಠ ಶೇ.61.94ರಷ್ಟು ಭರ್ತಿಯಾಗಿತ್ತು.

ಸೂಫಾ, ಮಾಣಿಯಲ್ಲೂ ಉತ್ತಮ ಸಂಗ್ರಹ: ಸೂಫಾ ಜಲಾಶಯವು 1985ರಿಂದ ಈವರೆಗೆ 1994-95 ಹಾಗೂ 2006-07ರಲ್ಲಿ ಎರಡು ಬಾರಿಯಷ್ಟೇ ಭರ್ತಿಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗರಿಷ್ಠ ಶೇ.60.34ರಷ್ಟು ನೀರು ಸಂಗ್ರಹವಾಗಿತ್ತು. ಈ ಬಾರಿ ನೀರಿನ ಸಂಗ್ರಹ ಸದ್ಯ ಶೇ.81ಕ್ಕೆ ಏರಿಕೆಯಾಗಿದೆ. ಹಾಗೆಯೇ ಮಾಣಿ ಜಲಾಶಯ ಸಹ 1991-92ರಿಂದ ಈವರೆಗೆ ಮೂರು ಬಾರಿಯಷ್ಟೇ ಭರ್ತಿಯಾಗಿದೆ. ಕಳೆದ ವರ್ಷ ಗರಿಷ್ಠ ಶೇ.62.24ರಷ್ಟು ನೀರು ಸಂಗ್ರಹವಾಗಿತ್ತು. 10 ವರ್ಷದ ಹಿಂದೆ ಅಂದರೆ, 2007-08ನೇ ಸಾಲಿನಲ್ಲಿ ಮಾಣಿ ಭರ್ತಿಯಾಗಿತ್ತು. ಪ್ರಸ್ತುತ ಜಲಾಶಯದಲ್ಲಿ ನೀರಿನ ಸಂಗ್ರಹ ಶೇ.96ಕ್ಕೆ ಹೆಚ್ಚಳವಾಗಿದೆ.

ಕಲ್ಲಿದ್ದಲು ದಾಸ್ತಾನು ಹೆಚ್ಚಳ: ವಿದ್ಯುತ್‌ ಬೇಡಿಕೆ ಕಡಿಮೆಯಿರುವುದರಿಂದ ರಾಯಚೂರಿನ ಬಿಟಿಪಿಎಸ್‌ ಘಟಕದಲ್ಲಿ 2 ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಬಳ್ಳಾರಿಯ ಬಿಟಿಪಿಎಸ್‌ ಘಟಕ ಹಲವು ದಿನಗಳಿಂದ ಸ್ಥಗಿತಗೊಂಡಿದೆ. ಹಾಗಾಗಿ, ಕಲ್ಲಿದ್ದಲು ದಾಸ್ತಾನು ಉತ್ತಮವಾಗಿದೆ. ಸದ್ಯಕ್ಕೆ ಬಿಟಿಪಿಎಸ್‌ನಲ್ಲಿ 4 ಲಕ್ಷ ಟನ್‌ (ಕಳೆದ ವರ್ಷ ಇದೇ ಹೊತ್ತಿಗೆ 54,363 ಟನ್‌), ಬಿಟಿಪಿಎಸ್‌ನಲ್ಲಿ 2.8 ಲಕ್ಷ ಟನ್‌ ಕಲ್ಲಿದ್ದಲು ದಾಸ್ತಾನು (ಕಳೆದ ವರ್ಷದ ಇದೇ ಹೊತ್ತಿಗೆ 1.38 ಲಕ್ಷ ಟನ್‌) ಇದ್ದು, ಒಟ್ಟು 6.80 ಲಕ್ಷ ಟನ್‌ ಸಂಗ್ರಹವಿದೆ.

Advertisement

ತಗ್ಗಿದ ಬೇಡಿಕೆ: ರಾಜ್ಯಾದ್ಯಂತ ನಿತ್ಯ ಸರಾಸರಿ 7,500ರಿಂದ 8000 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ ಇದೆ. ಈ ಪೈಕಿ, ನವೀಕರಿಸಬಹುದಾದ ಇಂಧನ ಮೂಲದಿಂದಲೇ ಶೇ.65ರಷ್ಟು, ಅಂದರೆ 4,500 ರಿಂದ 5,000 ಮೆ.ವ್ಯಾ. ವಿದ್ಯುತ್‌ ಪೂರೈಕೆಯಾಗುತ್ತಿದೆ. ಆ.16ರಂದು ರಾಜ್ಯಾದ್ಯಂತ ಒಟ್ಟು 257 ದಶಲಕ್ಷ ಯೂನಿಟ್‌ ವಿದ್ಯುತ್‌ ಹಂಚಿಕೆಯಾಗಿದ್ದರೆ, ಬಳಕೆಯಾಗಿರುವುದು 152 ದಶಲಕ್ಷ ಯೂನಿಟ್‌ ಮಾತ್ರ. ಕೇಂದ್ರ ಸರ್ಕಾರದಿಂದ ಹಂಚಿಕೆ ಆಧಾರದ ಮೇಲೆ ಸುಮಾರು 1600 ಮೆ.ವ್ಯಾ. ವಿದ್ಯುತ್‌ ಪೂರೈಕೆಯಾಗುತ್ತಿದೆ. ಲಿಂಗನಮಕ್ಕಿಯಿಂದ 1000 ಮೆ.ವ್ಯಾ. ಹಾಗೂ ಗೇರುಸೊಪ್ಪಾ ಜಲವಿದ್ಯುತ್‌ ಘಟಕದಿಂದ 240 ಮೆ.ವ್ಯಾ.ಉತ್ಪತ್ತಿಯಾಗುತ್ತಿದ್ದು, ಉಷ್ಣ ಸ್ಥಾವರಗಳಿಂದ 350 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೂರು ಪಟ್ಟು ವಿದ್ಯುತ್‌ ಉತ್ಪಾದನೆ ಏರಿಕೆ: ಕಳೆದ ವರ್ಷ ಇದೇ ಹೊತ್ತಿಗೆ ನವೀಕರಿಸಬಹುದಾದ ಇಂಧನ ಮೂಲದಿಂದ ಗರಿಷ್ಠ 27 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗಿತ್ತು. 2018ರ ಆ.16ರಂದು ಸೌರ, ಪವನ, ಕಿರು ಜಲವಿದ್ಯುತ್‌ ಸೇರಿದಂತೆ ಇತರ ನವೀಕರಿಸಬಹುದಾದ ಇಂಧನ ಮೂಲಗಳಿಂದ 75 ದಶಲಕ್ಷ ಯೂನಿಟ್‌ ಉತ್ಪಾದನೆಯಾಗಿದೆ. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಉತ್ಪಾದನೆಯಾಗುತ್ತಿದೆ.

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ ಜತೆಗೆ ಸೌರಶಕ್ತಿ, ಪವನಶಕ್ತಿ ವಿದ್ಯುತ್‌ ಉತ್ಪಾದನೆಯೂ ಗರಿಷ್ಠ ಪ್ರಮಾಣದಲ್ಲಿರುವುದರಿಂದ ವಿದ್ಯುತ್‌ ಉತ್ಪಾದನೆ ಉತ್ತಮ ಸ್ಥಿತಿಯಲ್ಲಿದೆ. ಪರಿಸ್ಥಿತಿಗೆ ಅನುಗುಣವಾಗಿ ಜಲವಿದ್ಯುತ್‌, ಉಷ್ಣ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.
– ಜಿ. ಕುಮಾರ ನಾಯಕ್‌, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

2018 ಆ.16ರ ಜಲಾಶಯ ಸ್ಥಿತಿಗತಿ (ಆವರಣದಲ್ಲಿ 2018ರ ಜು.9ರ ವಿವರ)
* ಲಿಂಗನಮಕ್ಕಿ- ಶೇ. 96.27 (ಶೇ. 37.59)
* ಸೂಫಾ- ಶೇ. 81.72 (ಶೇ. 41.73)
* ಮಾಣಿ- ಶೇ. 96.19 (ಶೇ. 35.55)

– ಎಂ. ಕೀರ್ತಿಪ್ರಸಾದ್‌
 

Advertisement

Udayavani is now on Telegram. Click here to join our channel and stay updated with the latest news.

Next