Advertisement
ನ್ಯಾಸ್‌ಕಂನ (ಎನ್‌ಎಎಸ್‌ಎಸ್‌ಸಿಓಎಂ) ವರದಿಯನ್ವಯ ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಐಟಿ ಕ್ಷೇತ್ರದ ಅಭಿವೃದ್ಧಿ 13 ಶೇ.ದಿಂದ 7-8 ಶೇ.ಇಳಿದಿದ್ದು, ವಾರ್ಷಿಕವಾಗಿ ಉದ್ಯೋಗ ಸೃಷ್ಟಿಯೂ ಕಡಿಮೆಯಾಗಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲಿ ಯಾವುದೇ ಐಟಿ, ಬಿಪಿಓ ಕಂಪೆನಿಗಳು ಐಟಿ ಹಬ್ ಎನಿಸಿಕೊಂಡಿರುವ ಬೆಂಗಳೂರಿನಂಥ ನಗರಗಳಲ್ಲಿಯೇ ವಹಿವಾಟು ಮುಂದುವರಿಸುವುದಕ್ಕೆ ಪ್ರಯಾಸ ಪಡುವ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಮಂಗಳೂರು, ಮೈಸೂರು, ಹುಬ್ಬಳ್ಳಿಯಂತಹ ದ್ವಿತೀಯ ಹಂತದ ನಗರಗಳಲ್ಲಿ ಹೊಸದಾಗಿ ಬಂಡವಾಳ ಹೂಡುವುದಕ್ಕೆ ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ. ಅಷ್ಟೇ ಅಲ್ಲ, ಈಗಾಗಲೇ ಮಂಗಳೂರಿನಲ್ಲಿರುವ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲಿಯೂ ತಮ್ಮ ಭವಿಷ್ಯದ ಕುರಿತು ಆತಂಕ ಮನೆ ಮಾಡಿರುವುದು ಮಾತ್ರ ನಿಜ.
ಸಾಮಾನ್ಯವಾಗಿ ಪ್ರತಿವರ್ಷ ದೇಶದ ಐಟಿ ಕ್ಷೇತ್ರದ ಬೆಳವಣಿಗೆ 12ರಿಂದ 13 ಶೇ. ಇರುತ್ತದೆ. ಆದರೆ ಈ ಬಾರಿ ಅದು 7-8 ಶೇ.ಇಳಿದಿದೆ ಎಂದು ನ್ಯಾಸ್‌ಕಂ ವರದಿ ಹೇಳುತ್ತದೆ. ಜತೆಗೆ ದೇಶದ ಒಟ್ಟು ಐಟಿ ಕ್ಷೇತ್ರದಲ್ಲಿ ಹಿಂದೆ ವಾರ್ಷಿಕವಾಗಿ 3 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದ್ದವು. ಅದು ಈ ಬಾರಿ ಉದ್ಯೋಗದ ಸಂಖ್ಯೆ 1.5 ಲಕ್ಷ ಇಳಿದಿದೆ. ಈ ರೀತಿಯಲ್ಲಿ ಐಟಿ ಕ್ಷೇತ್ರದಲ್ಲಿ 50 ಶೇ.ದಷ್ಟು ಉದ್ಯೋಗ ಸೃಷ್ಟಿ ಕಡಿಮೆಯಾಗಿರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಐಟಿ ಪರಿಣಿತರ ವಾದ.
Related Articles
ರಾಜ್ಯ ಸರಕಾರ ದ್ವಿತೀಯ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶ ಕಲ್ಪಿಸುತ್ತಿದ್ದರೂ, ಮಂಗಳೂರಿನಂತಹ ನಗರದಲ್ಲಿ ಇನ್ನೂ ಅದು ಯಶಸ್ವಿಯಾಗಿಲ್ಲ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಇನ್ಫೋಸಿಸ್, ಕಾಂಗ್ನಿಝೆಂಟ್ ಹಾಗೂ ಎಂಫಸೀಸ್‌ಗಳೆಂಬ ಮೂರು ಪ್ರಮುಖ ಕಂಪೆನಿಗಳು ಸೇರಿದಂತೆ ಒಟ್ಟು ಸುಮಾರು 150 ಐಟಿ ಹಾಗೂ ಬಿಪಿಓ(ಐಟಿಇಎಸ್) ಕಂಪೆನಿಗಳು ಕಾರ್ಯಾಚರಿಸುತ್ತಿವೆ. ಅಂದರೆ 12ರಿಂದ 15 ಸಾವಿರ ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೊಸ ಉದ್ಯೋಗಗಳ ಸೃಷ್ಟಿ ತೀರಾ ಕಡಿಮೆ ಇದೆ.
Advertisement
ಅನುಭವಿಗಳ ಕೊರತೆಮಂಗಳೂರಿನ ಐಟಿ ಕ್ಷೇತ್ರವನ್ನು ತೆಗೆದುಕೊಂಡರೆ ಇಲ್ಲಿ ಅನುಭವಿಗಳ ಕೊರತೆ ಕಾಡುತ್ತಿದೆ. ಅಂದರೆ ಕನಿಷ್ಠ 4ರಿಂದ 5 ವರ್ಷಗಳ ಅನುಭವಿಗಳು ಬೆಂಗಳೂರಿನಂತಹ ನಗರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಹೊಸಬರು ಇಲ್ಲಿ ಹೇರಳವಾಗಿ ಸಿಗುತ್ತಿದ್ದರೂ, ಇಲ್ಲಿನ ಐಟಿ ಕಂಪೆನಿಗಳಿಗೆ ಅನುಭವಿಗಳ ಅಗತ್ಯವಿದೆ. ಹೊಸ ತಂತ್ರಜ್ಞಾನಗಳು
ಐಟಿ, ಬಿಪಿಓ ಕಂಪೆನಿಗಳಲ್ಲಿ ಹೊಸ ಹೊಸ ತಂತ್ರಜ್ಞಾನ ವ್ಯವಸ್ಥೆ ಅಳವಡಿಕೆಯಾಗುತ್ತಿದ್ದು, ಅದಕ್ಕೆ ಪೂರಕವಾಗಿ ಇಲ್ಲಿನ ಸಿಬಂದಿ ಕೂಡ ತೆರೆದುಕೊಳ್ಳಬೇಕಿದೆ. ಆ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಕಷ್ಟವಾಗಲು ಸಿಬಂದಿ ಐಟಿ ಕ್ಷೇತ್ರದಿಂದ ಹೊರಬರುವುದು ಅನಿವಾರ್ಯವಾಗುತ್ತಿದೆ. ಇದು ಕೂಡ ಐಟಿ ಕ್ಷೇತ್ರಕ್ಕೆ ಒಂದಷ್ಟು ಹೊಡೆತ ನೀಡಿದೆ ಎಂದು ಹೇಳಲಾಗುತ್ತಿದೆ. ಐಟಿ ಕ್ಷೇತ್ರದಲ್ಲಿ ಬೆಳವಣಿಗೆಯಾಗಿಲ್ಲ
ಮಂಗಳೂರು ಐಟಿ ಕ್ಷೇತ್ರದಲ್ಲಿ ಇನ್ನೂ ಬೆಳವಣಿಗೆಯಾಗದ ಕಾರಣ ಐಟಿ ಕ್ಷೇತ್ರದ ಆತಂಕ ಇಲ್ಲಿಗೆ ತಟ್ಟಿಲ್ಲ. ಇಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿದ್ದರೂ ಅದು ದೊಡ್ಡ ಮಟ್ಟದ ಬದಲಾವಣೆಯನ್ನು ತಂದಿಲ್ಲ. ಹೊಸ ಕಂಪೆನಿಗಳು ಮಂಗಳೂರಿಗೆ ಬರುವುದಕ್ಕೆ ಹಿಂದೇಟು ಹಾಕಿರುವುದು ನಿಜ ಎಂದು ನಗರದ ಐಟಿ ಕಂಪೆನಿಯೊಂದರ ಸಾಫ್ಟ್‌ವೇರ್ ಎಂಜಿನಿಯರ್ ಅಭಿಪ್ರಾಯಿಸುತ್ತಾರೆ. ಇಕ್ಯುಬೇಷನ್ ಸೆಂಟರ್
ಮಂಗಳೂರಿನಲ್ಲಿ ಹೊಸ ಸ್ಟಾಟ್ ಅಪ್‌ಗಳನ್ನು ತೆರೆಯುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐಟಿ ಇಕ್ಯುಬೇಷನ್ ಸೆಂಟರ್ ತೆರೆಯುವ ಕಾರ್ಯ ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಅಷ್ಟೇ ಅಲ್ಲದೆ ಮಂಗಳೂರನ್ನು ಕೇಂದ್ರ ಸರಕಾರ ಕೂಡ ಈಗಾಗಲೇ ದೇಶದ ಮೊದಲ ಸ್ಟಾಟ್ ಅಪ್ ನಗರವಾಗಿ ಆಯ್ಕೆ ಮಾಡಿದೆ. ಅಂದರೆ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ಪಡೆಯುವ ಎಂಜಿನಿಯರ್‌ಗಳಿಗೆ ಈ ಕೇಂದ್ರದ ಮೂಲಕ ಸಬ್ಸಿಡಿದರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ನಗರದ ಮಲ್ಲಿಕಟ್ಟೆಯಲ್ಲಿರುವ ಪಾಲಿಕೆಯ ವಲಯ ಕಚೇರಿಯಲ್ಲಿ ಕೇಂದ್ರವನ್ನು ತೆರೆಯಲು ಸ್ಥಳಾವಕಾಶ ಮೀಸಲಿಡಲಾಗಿದೆ. ಈ ಹಿಂದೆ ಮಂಗಳೂರಿನ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಕೇಂದ್ರಕ್ಕೆ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ನೀಡಿತ್ತು. ಪ್ರಸ್ತುತ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅನುದಾನ ಬಿಡುಗಡೆಗೊಳಿಸಿದ್ದು, ದ.ಕ.ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇದರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕೆಸಿಸಿಐ ಮೂಲಗಳು ಉದಯವಾಣಿಗೆ ತಿಳಿಸಿವೆೆ. – ಕಿರಣ್ ಸರಪಾಡಿ