Advertisement

ಐಟಿ ಬಿಟಿ ನೀತಿ: ಮೈಸೂರು ಜಿಲ್ಲಾ ನವೀನತಾ ಕೇಂದ್ರ

09:57 PM Aug 28, 2019 | Lakshmi GovindaRaj |

ಮೈಸೂರು: ಕರ್ನಾಟಕದ ಮಾಹಿತಿ-ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ನೀತಿ ರೂಪಿಸುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಹೊಸ ನೀತಿಯನ್ನು ಜಾರಿಗೆ ತರಲಾಗುವುದು ಎಂದು ರಾಜ್ಯ ಸರ್ಕಾರದ ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಹೇಳಿದರು. ಬೆಂಗಳೂರು ಟೆಕ್‌ ಸಮ್ಮಿಟ್‌ ಅಂಗವಾಗಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಬಿಟಿಎಸ್‌ ರೋಡ್‌ಶೋ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸದ್ಯ ಕರ್ನಾಟಕದ ಮಾಹಿತಿ-ತಂತ್ರಜ್ಞಾನ ನೀತಿ ಐದು ವರ್ಷ ಹಳೆಯದು. 2020ನೇ ಇಸವಿಗೆ ಈ ನೀತಿ ಮುಗಿಯಲಿದೆ. ಹೀಗಾಗಿ ಹೊಸ ನೀತಿಯನ್ನು ಜಾರಿಗೆ ತರುವ ಸಂಬಂಧ ಕೈಗಾರಿಕೆಗಳವರು, ಕೈಗಾರಿಕಾ ಸಂಘಗಳವರು, ಭಾರತೀಯ ಕೈಗಾರಿಕಾ ಮಹಾ ಒಕ್ಕೂಟ (ಸಿಐಐ) ಎಲ್ಲರನ್ನೂ ಸೇರಿಸಿ ಹೊಸ ನೀತಿಯಲ್ಲಿ ಏನೇನು ಅಳವಡಿಸಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಈವರೆಗೆ ಯಾವುದೇ ಯೋಜನೆ ಬಂದರೂ ಬೆಂಗಳೂರು ಕೇಂದ್ರೀಕೃತವಾಗಿರುತ್ತಿತ್ತು. ಹೀಗಾಗಿ ಹೊಸ ನೀತಿಯಲ್ಲಿ ಬೆಂಗಳೂರು ಹೊರಗಿನ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮೊದಲಾದ ರಾಜ್ಯದ ಎರಡನೇ ಸ್ತರದ ನಗರಗಳಿಗೆ ಆದ್ಯತೆ ನೀಡುವ ಅಂಶಗಳನ್ನು ಸೇರಿಸಲಾಗುವುದು ಎಂದರು.

6 ಸಾವಿರ ಕೋಟಿ ವಹಿವಾಟು: ಮೈಸೂರಿನಿಂದ ವಾರ್ಷಿಕ ಸುಮಾರು 6 ಸಾವಿರ ಕೋಟಿ ರೂ.ಗಳ ಮಾಹಿತಿ-ತಂತ್ರಜ್ಞಾನ ರಫ್ತು ನಡೆಯುತ್ತಿದ್ದು, ಮೈಸೂರನ್ನು ಜಿಲ್ಲಾ ನವೀನತಾ ಕೇಂದ್ರಗಳಾಗಿಸುತ್ತಿದೆ. ಇಂತಹ ನಗರಗಳನ್ನು ಕೆ-ಟೆಕ್‌ ಡಿಸ್ಟ್ರಿಕ್ಟ್ ಇನ್ನೋವೇಷನ್‌ ಅಸೋಸಿಯೇಟ್ಸ್‌ ಎಂದು ಪುನರ್‌ ನಾಮಕರಣ ಮಾಡಲಾಗುವುದು. ಜಿಲ್ಲಾಮಟ್ಟದಲ್ಲಿ ನವೀನತಾ ಸಂಬಂಧಿ ಕಾರ್ಯಕ್ರಮಗಳಿಗೆ ಇದು ಬೆಂಬಲ ನೀಡಲಿದೆ ಎಂದರು.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ: ಇಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಹ ಅಧಿವೇಶನಗಳು, ಇಂಟರ್ನ್ಶಿಪ್‌ಗ್ಳು ಮತ್ತು ಬೃಹತ್‌ ಕಂಪನಿಗಳು ಅಥವಾ ಇನ್‌ಕ್ಯೂಬೇಟರ್‌ಗಳಿಗೆ ಭೇಟಿ ಮುಂತಾದವುಗಳನ್ನು ಕೆ-ಡಿಯಾಗಳು ಆಯೋಜಿಸಲಿವೆ. ಇಲ್ಲಿ ಹೆಚ್ಚು ದೊಡ್ಡದಾದ ವ್ಯವಸ್ಥೆಗೆ ವಿದ್ಯಾರ್ಥಿಗಳು ತೆರೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಜಾಗತಿಕ ವೇಗ: ಕಳೆದ 21 ವರ್ಷಗಳಲ್ಲಿ ಬೆಂಗಳೂರು ಟೆಕ್‌ ಸಮಿಟ್‌ ತಂತ್ರಜ್ಞಾನ ಮತ್ತು ನವೀನತೆಗೆ ಜಾಗತಿಕವಾಗಿ ವೇಗ ಹೆಚ್ಚಿಸುವ ಕಾರ್ಯಕ್ರಮವಾಗಿದೆ. ನವೆಂಬರ್‌ 18 ರಿಂದ 20ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಬೆಂಗಳೂರು ಟೆಕ್‌ ಸಮಿಟ್‌-2019ರ 22ನೇ ಆವೃತ್ತಿಯೊಂದಿಗೆ ಬೃಹತ್ತಾದ ಮತ್ತು ಉತ್ತಮ ತಂತ್ರಜ್ಞಾನಗಳನ್ನು ಕರ್ನಾಟಕಕ್ಕೆ ಇನ್ನೋವೇಷನ್‌ ಆ್ಯಂಡ್‌ ಇಂಪ್ಯಾಕ್ಟ್ 2.0 ಎಂಬ ತಿರುಳಿನಡಿ ತರುತ್ತಿದ್ದೇವೆ.

Advertisement

ಕಳೆದ ವರ್ಷ ಬಿಟಿಎಸ್‌ನಲ್ಲಿ ಒಟ್ಟಾರೆಯಾಗಿ 9 ಜಿಐಎ ನೇತೃತ್ವದ ಅಧಿವೇಶನಗಳು ಇದ್ದವು. ಆಸ್ಟ್ರೇಲಿಯಾ ಮತ್ತು ಫಿನ್‌ಲೆಂಡ್‌ಗಳ ಸಚಿವರ ನಿಯೋಗ ಹಾಗೂ ಫ್ರಾನ್ಸ್‌ ಮತ್ತು ಎಸ್ಟೋನಿಯಾದ ರಾಯಭಾರಿಗಳು ಆಗಮಿಸಿದ್ದರು. ಬಿಟಿಎಸ್‌-2019ಕ್ಕಾಗಿ ಫ್ರಾನ್ಸ್‌, ನೆದರ್‌ಲೆಂಡ್‌, ಫಿನ್‌ಲೆಂಡ್‌, ಆಸ್ಟ್ರೇಲಿಯಾ, ಕೆನಡಾ ಮುಂತಾದ ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕ್ಷಿಪ್ರ ಬೆಳವಣಿಗೆ: ಐಟಿ-ಬಿಟಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಾತನಾಡಿ, ಮೈಸೂರು ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್‌ ಕೇಂದ್ರವಾಗಿರುವುದರಿಂದ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಮೈಸೂರಿನಿಂದ ಉತ್ತಮ ಪ್ರಮಾಣದ ಭಾಗವಹಿಸುವಿಕೆಯನ್ನು ನಿರೀಕ್ಷಿಸಿಸುತ್ತಿರುವುದಾಗಿ ಹೇಳಿದರು.

ಎಸ್‌ಟಿಪಿಐನ ಹೆಚ್ಚುವರಿ ನಿರ್ದೇಶಕ ಜಯಪ್ರಕಾಶ್‌, ಸಿಲಿಕಾನ್‌ ರೋಡ್‌ನ‌ ಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರ ಸಿಡ್‌ ಮುಖರ್ಜಿ, ಸಿಐಐ ಮೈಸೂರು ವಲಯದ ಮುಖ್ಯಸ್ಥ ಭಾಸ್ಕರ್‌ ಕಳಲೆ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅರಿವು: ನ್ಯೂ ಏಜ್‌ ಇನ್ನೋವೇಷನ್‌ ನೆಟ್‌ವರ್ಕ್‌ ಮೂಲಕ ವಿಶ್ವವಿದ್ಯಾನಿಲಯಗಳನ್ನು ತೊಡಗಿಸುವ ಕಾರ್ಯಕ್ಕೆ ಒತ್ತು ನೀಡಿದ್ದು, ಇದರಲ್ಲಿ ರಾಜ್ಯದ 2ನೇ ಮತ್ತು 3ನೇ ಸ್ತರದ ನಗರಗಳ ಕಡೆಗೆ ಗಮನ ಹರಿಸಲಾಗಿದೆ. 36 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಈ ಪೈಕಿ ಮೈಸೂರಿನ ಎನ್‌ಐಇ, ಎಸ್‌ಜೆಸಿಇ, ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮದರ್ಜೆ ಕಾಲೇಜು ಹಾಗೂ ವಿದ್ಯಾವಿಕಾಸ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆ ಈ ನಾಲ್ಕು ಕಾಲೇಜುಗಳೂ ಸೇರಿವೆ. ಎಂಜಿನಿಯರಿಂಗ್‌ ಮುಗಿಸಿದವರು ಕಾಲೇಜಿನಿಂದ ನೇರ ಉದ್ಯೋಗ ಕ್ಷೇತ್ರಕ್ಕೆ ಬರಲಾಗುತ್ತಿಲ್ಲ. ಹೀಗಾಗಿ ಬ್ರಿಜ್‌ ಕೋರ್ಸ್‌ ಮಾಡಬೇಕಾಗಿದೆ ಎಂದು ಡಾ.ಇ.ವಿ.ರಮಣರೆಡ್ಡಿ ಹೇಳಿದರು.

ಮೈಸೂರು ಪ್ರಮುಖ ಸ್ಟಾರ್ಟ್‌ಅಪ್‌ ಕೇಂದ್ರ: ದೇಶದಲ್ಲಿ ಪ್ರಮುಖ ಸ್ಟಾರ್ಟ್‌ಅಪ್‌ ಕೇಂದ್ರವಾಗುವ ಸಾಮರ್ಥ್ಯವನ್ನು ಮೈಸೂರು ಹೊಂದಿದೆ ಎಂದು ಡಾ.ಇ.ವಿ.ರಮಣರೆಡ್ಡಿ ತಿಳಿಸಿದರು. ಬೆಂಗಳೂರು ನಂತರದ ಆದ್ಯತೆಯ ಗುರಿಯಾಗಿರುವುದಲ್ಲದೆ, ಬದುಕಿನ ಗುಣಮಟ್ಟ ಮತ್ತು ವೆಚ್ಚದಲ್ಲಿ ಮೈಸೂರು ಉತ್ತಮ ಸ್ಥಾನ ಹೊಂದಿದೆ.

ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಮೂಲಸೌಕರ್ಯ, ಸಂಪರ್ಕ ಮತ್ತು ವಲಸಿಗ ಸಮುದಾಯಗಳೊಂದಿಗೆ ಉತ್ತಮ ಸಂಪರ್ಕ ಪೂರೈಸುತ್ತದೆ. ಎಲಿವೇಟ್‌-2019 ಕಾರ್ಯಕ್ರಮದಲ್ಲಿ ಮೈಸೂರಿನ ಎರಡು ಸ್ಟಾರ್ಟ್‌ಅಪ್ಸ್‌ಗಳು ಅಂತಿಮ ಹಂತ ತಲುಪಿದ್ದವು ಎಂಬುದು ಈ ನಗರ ಸ್ಟಾರ್ಟ್‌ಅಪ್‌ ಕೇಂದ್ರವಾಗುವ ಕಡೆಗೆ ಮತ್ತೂಂದು ಹೆಜ್ಜೆ ಮುಂದಿಟ್ಟಿದೆ ಎನ್ನುವುದನ್ನು ಸೂಚಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next