ಗುರುವಾರ ಬೆಳಗ್ಗೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿದ ಪರಮೇಶ್ವರ್ ಐಟಿ ದಾಳಿಯಿಂದ ಪಕ್ಷ ಹಾಗೂ ಸರಕಾರದ ಮೇಲಾದ ಪರಿಣಾಮ, ರಾಜ್ಯದಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರ ಜವಾಬ್ದಾರಿ ನೋಡಿಕೊಳ್ಳುವ ಕುರಿತು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
Advertisement
ಐಟಿ ದಾಳಿಯಿಂದ ರೆಸಾರ್ಟ್‌ನಲ್ಲಿ ರುವ ಗುಜರಾತ್ ಶಾಸಕರು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಉಸ್ತುವಾರಿ ನೋಡಿಕೊಳ್ಳಲು ಬೇರೆ ಸಚಿವರಿಗೆ ವಹಿಸಿಕೊಡ ಬೇಕಾ ಅಥವಾ ಡಿ.ಕೆ. ಶಿವಕುಮಾರ್ ಸಹೋದರ ಸಂಸದ ಡಿ.ಕೆ. ಸುರೇಶ್‌ಗೆ ವಹಿಸಬೇಕೆನ್ನುವ ಕುರಿತು ಚರ್ಚಿಸಲಾ ಗಿದ್ದು, ಅಲ್ಲದೇ ಪಕ್ಷದ ಪರವಾಗಿ ತಾವೂ ಭೇಟಿ ನೀಡಿ ಶಾಸಕರಲ್ಲಿ ಧೈರ್ಯ ತುಂಬಲು ಪರಮೇಶ್ವರ್ ನಿರ್ಧರಿಸಿದ್ದರು. ಅದರಂತೆ ರೆಸಾರ್ಟ್‌ಗೆ ತೆರಳಿ ಶಾಸಕರನ್ನು ಭೇಟಿ ಮಾಡಿ, ಧೈರ್ಯ ತುಂಬಿದ್ದಾರೆ.
ಮುಖ್ಯಮಂತ್ರಿ ಭೇಟಿ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗುಜರಾತ್ ಶಾಸಕರು ಆತಂಕಪಡುವ ಅಗತ್ಯವಿಲ್ಲ, ಅವರಿಗೆ ಆತಿಥ್ಯ ನೀಡುವ ಜವಾಬ್ದಾರಿ ನಮ್ಮದು. ಕೇಂದ್ರ ಸರಕಾರ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಶಕ್ತಿ ಏನು ಎಂದು ಬಿಜೆಪಿ ಯವರಿಗೆ ಗೊತ್ತಿದೆ. ಆದ್ದರಿಂದ ಅವರನ್ನು ಹಣಿಯುವ ಕೆಲಸ ಮಾಡುತ್ತಿದೆ. ಅವರ ಮನೆಯ ಮೇಲೆ ದಾಳಿ ನಡೆದ ಬಳಿಕ ಆಗಿರುವ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.
Related Articles
Advertisement
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ. ಹೀಗಾಗಿ ಈ ದಾಳಿಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಅವರು ತಿಳಿಸಿದರು.
ಬಿಜೆಪಿ ವಿರುದ್ಧ ಪ್ರತಿತಂತ್ರಕ್ಕೆ ಕಾಂಗ್ರೆಸ್ ಸಿದ್ಧತೆ ?ಕಾಂಗ್ರೆಸ್ ಸಚಿವರ ಮೇಲೆ ಐಟಿ ದಾಳಿ ನಡೆಸಿ ಆತಂಕ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಗುಪ್ತವಾಗಿ ಚರ್ಚೆ ನಡೆಸಿದ್ದು, ಬಿಜೆಪಿ ನಾಯಕರುಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ಚುರುಕುಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಅನಂತಕುಮಾರ್ ಸಹಿತ ಬೇರೆ ಬೇರೆ ಪ್ರಕರಣಗಳಲ್ಲಿ 17ಕ್ಕೂ ಹೆಚ್ಚು ನಾಯಕರ ವಿರುದ್ಧ ಅಕ್ರಮ ಆಸ್ತಿ ಗಳಿಕೆ, ಟ್ರಸ್ಟ್ ಹೆಸರಲ್ಲಿ ವಂಚನೆ ಸಹಿತ ಅನೇಕ ಪ್ರಕರಣಗಳು ಎಸಿಬಿ, ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿದ್ದು, ಅಂತಹ ಪ್ರಕರಣಗಳ ಸದ್ಯದ ಸ್ಥಿತಿಗತಿ ಅರಿತು, ತನಿಖೆ ಚುರುಕುಗೊಳಿಸಲು ಸಿಎಂ ಆಲೋಚಿಸಿದ್ದಾರೆ ಎನ್ನಲಾ ಗಿದೆ. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳನ್ನು ತಮ್ಮ ನಿವಾಸ ಕಾವೇರಿಗೆ ಕರೆಸಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.