Advertisement

ಪರಂ, ಜಾಲಪ್ಪ  ಮೇಲಿನ ಐಟಿ ದಾಳಿ ಪ್ರಕರಣ: 100 ಕೋಟಿ ಸಂಕಟ

09:58 AM Oct 13, 2019 | mahesh |

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ಶಾಸಕ ಡಾ| ಜಿ. ಪರಮೇಶ್ವರ್‌ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಆರ್‌.ಎಲ್‌ ಜಾಲಪ್ಪ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಸತತ 2ನೇ ದಿನವೂ ದಾಳಿ ಮುಂದು ವರಿದಿದ್ದು, ಆದಾಯ ತೆರಿಗೆ ಇಲಾಖೆ 100 ಕೋಟಿ ರೂ. ಅಘೋಷಿತ ಆದಾಯ ಪತ್ತೆ ಮಾಡಿದೆ.

Advertisement

ಮೆಡಿಕಲ್‌ ಸೀಟು ಅವ್ಯವಹಾರದ ಸಂಬಂಧ ಶೋಧ ಕಾರ್ಯಾಚರಣೆಯಲ್ಲಿ 100 ಕೋಟಿ ರೂ. ಅನಧಿಕೃತ ಹಣದ ವಹಿವಾಟು ಪತ್ತೆ ಯಾಗಿದ್ದು, ಹವಾಲಾ ವ್ಯವ ಹಾರವೂ ನಡೆದಿದೆ. ಅದೇ ಅಕ್ರಮ ಹಣದಲ್ಲಿ ಹೊಟೇಲ್‌ಗ‌ಳಲ್ಲಿ, ರಿಯಲ್‌ ಎಸ್ಟೇಟ್‌ನಲ್ಲೂ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪ್ರಕಟನೆ ತಿಳಿಸಿದೆ. ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿರುವ ಅನಧಿಕೃತ ಹಣದ ವಹಿವಾಟು ಪರಮೇಶ್ವರ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧ ಪಟ್ಟದ್ದು ಎಂದೂ ಹೇಳಲಾಗಿದೆ.

185 ಸೀಟು ಬ್ಲಾಕ್‌
ಮೆಡಿಕಲ್‌ ಸೀಟುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದ್ದು, ಬ್ಲಾಕಿಂಗ್‌ ಮೂಲಕ 185 ಸೀಟುಗಳನ್ನು ಮಾರಾಟ ಮಾಡಿರುವುದು ಗೊತ್ತಾಗಿದೆ. ಪ್ರತಿ ಸೀಟಿಗೆ 50ರಿಂದ 60 ಲಕ್ಷ ರೂ. ನಗದು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ. ಇದುವರೆಗಿನ ದಾಳಿಯಲ್ಲಿ 4.22 ಕೋಟಿ ರೂ. ಅನಧಿಕೃತ ಹಣ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಕಾಲೇಜಿನ ಪ್ರಮುಖ ಟ್ರಸ್ಟಿಯೊಬ್ಬರ ಮನೆಯಲ್ಲಿ 89 ಲಕ್ಷ ರೂ. ಪತ್ತೆಯಾಗಿದೆ. ಒಟ್ಟು 8.82 ಕೋಟಿ ರೂ. ಅನಧಿಕೃತ ಆಸ್ತಿ ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮುಂದುವರಿದ ಶೋಧ
ಮತ್ತೂಂದೆಡೆ ಪರಮೇಶ್ವರ ಅವರಿಗೆ ಸೇರಿದ ಕಾಲೇಜು, ನಿವಾಸಗಳಲ್ಲಿ ಐಟಿ ಅಧಿಕಾರಿಗಳು ಶೋಧ ಮುಂದುವರಿಸಿದ್ದು, ಶನಿವಾರವೂ ಮುಂದು ವರಿಯುವ ಸಾಧ್ಯತೆಯಿದೆ. ಮತ್ತೂಂದೆಡೆ ಆರ್‌.ಎಲ್‌ ಜಾಲಪ್ಪ ಅವರ ಆಪ್ತರು, ಶಿಕ್ಷಣ ಸಂಸ್ಥೆಗಳ ಮೇಲೆಯೂ ಐಟಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ.

ರಾಜ್ಯದ ವಿವಿಧೆಡೆ ಪ್ರತಿಭಟನೆ
ಡಾ| ಜಿ. ಪರಮೇಶ್ವರ್‌ ಮತ್ತು ಆರ್‌.ಎಲ್‌. ಜಾಲಪ್ಪ ಅವರ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿನ ಐಟಿ ದಾಳಿ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಬ್ಯಾಂಕಿನಲ್ಲೂ ಶೋಧ
ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್‌ ಕಾಲೇಜಿನಲ್ಲೂ ಐಟಿ ಅಧಿಕಾರಿಗಳ ಶೋಧ ಕಾರ್ಯ ಶುಕ್ರವಾರವೂ ಮುಂದುವರಿಯಿತು. ಜತೆಗೆ ಕಾಲೇಜಿನ ಆವರಣದಲ್ಲೇ ಇರುವ ಯುಕೋ ಬ್ಯಾಂಕ್‌ನಲ್ಲಿರುವ ಖಾತೆಗಳನ್ನು ಪರಿಶೀಲನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ದೊಡ್ಡಬಳ್ಳಾಪುರದಲ್ಲೂ ಪರಿಶೀಲನೆ
ಆರ್‌.ಎಲ್‌. ಜಾಲಪ್ಪ ಅವರ ಮೂರನೇ ಪುತ್ರ, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಟ್ರಸ್ಟಿ ಜೆ.ರಾಜೇಂದ್ರ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದರು. ಸಂಜೆ 7 ಗಂಟೆಗೆ ಎರಡು ಸೂಟ್‌ ಕೇಸ್‌ಗಳಲ್ಲಿ ದಾಖಲೆ ಪತ್ರಗಳನ್ನು ಕೊಂಡೊಯ್ದಿದ್ದಾರೆ.

ಬೆಂಗಳೂರಿನ ನಿವಾಸದಲ್ಲಿ ಶೋಧ
ಸದಾಶಿವನಗರದಲ್ಲಿರುವ ಪರಮೇಶ್ವರ್‌ ಅವರ ನಿವಾಸದಲ್ಲಿ ಶೋಧ ಮಂದು ವರಿಸಿದ ಐಟಿ ಅಧಿಕಾರಿಗಳ ತಂಡ, ಅವರ ಕುಟುಂಬಸ್ಥರು ಹೊಂದಿರುವ ಸ್ಥಿರಾಸ್ತಿ, ಚರಾಸ್ತಿಗಳಿಗೆ ಸಂಬಂಧಿಸಿದ ದಾಖಲೆ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಪರಮೇಶ್ವರ್‌ ಅವರ ಸಂಬಂಧಿಕ ರಿಂದ ಮಾಹಿತಿ ಸಂಗ್ರಹಿಸಿದರು. ಜತೆಗೆ, ಬ್ಯಾಂಕ್‌ ಖಾತೆಗಳು, ಹಣದ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದು ಅವರ ಆದಾಯ ಮೂಲದ ಬಗ್ಗೆಯೂ ಪ್ರಶ್ನಿಸಿದ್ದಾರೆ.

24 ಮಂದಿಯಿಂದ ಶೋಧ
ತುಮಕೂರು ನಗರದ ಮರಳೂರಿ ನಲ್ಲಿರುವ ಸಿದ್ಧಾರ್ಥ ಎಂಜಿ ನಿಯರಿಂಗ್‌ ಕಾಲೇಜು, ಹೆಗ್ಗೆರೆ ಯಲ್ಲಿರುವ ಸಿದ್ಧಾರ್ಥ ಮೆಡಿಕಲ್‌ ಕಾಲೇಜು, ದಂತ ವೈದ್ಯ ಕೀಯ ಕಾಲೇಜಿನಲ್ಲಿ ಒಟ್ಟು 24 ಐ.ಟಿ. ಅಧಿಕಾರಿಗಳ ತಂಡ ಅಪರಾಹ್ನ 3 ಗಂಟೆಯವರೆಗೆ ಶೋಧ ನಡೆಸಿ ದಾಖಲಾತಿ ಯೊಂದಿಗೆ ತೆರಳಿದೆ.

ಬ್ಯಾಂಕ್‌ ಖಾತೆ ಬ್ಲಾಕ್‌
ಜಿ. ಪರಮೇಶ್ವರ್‌, ಪತ್ನಿ ಕನ್ನಿಕಾ ಪರಮೇಶ್ವರ್‌ ಹಾಗೂ ಅಣ್ಣನ ಮಗ ಡಾ| ಆನಂದ್‌ ಸಿದ್ಧಾರ್ಥ ಅವರ ಬ್ಯಾಂಕ್‌ ಖಾತೆಗಳನ್ನು ಐಟಿ ಅಧಿಕಾರಿ ಗಳು ಬ್ಲಾಕ್‌ ಮಾಡಿಸಿದ್ದಾರೆ.

ಸಿಬಂದಿ ಹೆಸರಲ್ಲಿ ಖಾತೆ
ಮೆಡಿಕಲ್‌ ಸೀಟುಗಳ ಮಾರಾಟ ಸಂಬಂಧ ನಗದು ರೂಪದಲ್ಲಿ ಬಂದ ಹಣವನ್ನು ಕಾಲೇಜಿನ ಟ್ರಸ್ಟಿಗಳು, ತಮ್ಮ ಸಿಬಂದಿಯ ಹೆಸರಿನ ಬ್ಯಾಂಕ್‌ ಖಾತೆಗಳನ್ನು ತೆರೆದು ಹಣ ಡೆಪಾಸಿಟ್‌ ಮಾಡಿದ್ದಾರೆ. ಈ ರೀತಿಯ ಎಂಟು ಮಂದಿ ಸಿಬಂದಿಯ ಅಕೌಂಟ್‌ಗಳು ಪತ್ತೆಯಾಗಿವೆ.

ಮೆಡಿಕಲ್‌ ಸೀಟುಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದನ್ನು ಮಧ್ಯವರ್ತಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಕೆಲವು ಆಡಿಯೋ ತುಣುಕುಗಳು ಹಾಗೂ ದಾಖಲೆಗಳು ಲಭ್ಯವಾಗಿವೆ ಎಂದು ಐಟಿ ಇಲಾಖೆ ತಿಳಿಸಿದೆ.

ದೇಗುಲದಲ್ಲಿ ಹಣ
ಪರಮೇಶ್ವರ್‌ ಮನೆ ದೇವರು ಮುಳ್ಕಟಮ್ಮ ದೇವಾಲಯದಲ್ಲಿ 40 ಲಕ್ಷ ರೂ. ನಗದು ರೂಪದಲ್ಲಿ ಸಿಕ್ಕಿದೆ ಎಂದು ತಿಳಿದುಬಂದಿದ್ದು, ಪರಂ ಅವರು ಮಂಡ್ಯ ಜಿಲ್ಲೆಯ ಮುಳ್ಕಟಮ್ಮ ದೇವಾಲಯದ ಟ್ರಸ್ಟಿ ಆಗಿದ್ದಾರೆ. ಇನ್ನಷ್ಟು ದಾಖಲೆಗಳ ವಿಚಾರಣೆಗೆ ಪರಮೇಶ್ವರ್‌ ಆಪ್ತ ಕುಮಾರ್‌ ಭಾಸ್ಕರಪ್ಪ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

1.83 ಕೋಟಿ ತೆರಿಗೆ ಬಾಕಿ
ಜಿ. ಪರಮೇಶ್ವರ್‌ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಪಾಲಿಕೆಗೆ 2002ರಿಂದಲೂ ತೆರಿಗೆ ಕಟ್ಟದೆ ವಂಚನೆ ಮಾಡಿದೆ. ಎಂಜಿನಿಯರಿಂಗ್‌ ಕಾಲೇಜು ಆರಂಭವಾದಾಗಿಂದ ಒಮ್ಮೆಯೂ ಪಾಲಿಕೆಗೆ ತೆರಿಗೆ ಕಟ್ಟಿಲ್ಲ. ಒಟ್ಟು 1.83 ಕೋಟಿ ರೂ. ಬಾಕಿ ಇರಿಸಿಕೊಂಡಿದೆ. ಈ ಸಂಬಂಧ ಪಾಲಿಕೆ ಜಾರಿ ಮಾಡಿದ ನೋಟಿಸ್‌, ಐ.ಟಿ ಅಧಿಕಾರಿಗೆ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next