ಇಸ್ತಾಂಬುಲ್ : ಹೊಸ ವರ್ಷದ ದಿನ ಇಸ್ತಾಂಬುಲ್ ನೈಟ್‌ಕ್ಲಬ್ ಮೇಲೆ ದಾಳಿ ನಡೆಸಿ 39 ಜೀವಗಳ ಮಾರಣ ಹೋಮ ನಡೆಸಿದ್ದ ಆರೋಪಿಯನ್ನು ಪೊಲೀಸರು ಯಶಸ್ವೀ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಆರೋಪಿಯು ಅಬು ಮುಹಮ್ಮದ್ ಹೊರಾಸನಿ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಎಂದು ಆತನನ್ನು ಬಂಧಿಸಿರುವ ಎಸೆನ್ಯೂರಟ್ ಜಿಲ್ಲಾ ಪೊಲೀಸರು ಹೇಳಿದ್ದಾರೆ. ಹುರಿಯತ್ ನ್ಯೂಸ್‌ಪೇಪರ್ ವೆಬ್ ಸೈಟ್ ಮತ್ತು ಇತರ ಮಾಧ್ಯಮಗಳು ಇಸ್ತಾಂಬುಲ್ ನೈಟ್ ಕ್ಲಬ್ ದಾಳಿಕೋರ ಸೆರೆಯಾಗಿರುವುದನ್ನು ವರದಿ ಮಾಡಿವೆ.
ಆರೋಪಿ ಅಬು ಮುಹಮ್ಮದ್ ಹೊರಾಸನಿ ತನ್ನ ನಾಲ್ಕು ವರ್ಷ ಪ್ರಾಯದ ಮಗನೊಂದಿಗೆ ಅಡಗುದಾಣವೊಂದರಲ್ಲಿ ಅಡಗಿಕೊಂಡಿದ್ದ; ಅಲ್ಲಿಂದಲ್ಲೇ ಆತನನ್ನು ಸೆರೆ ಹಿಡಿಯಲಾಯಿತು ಎದು ಹುರಿಯತ್ ಹೇಳಿದೆ. ತತ್‌ಕ್ಷಣಕ್ಕೆ ಈ ಮಾಹಿತಿಯನ್ನು ದೃಢೀಕರಿಸಲಾಗಿಲ್ಲ.
ಇಸ್ತಾಂಬುಲ್ ನೈಟ್ ಕ್ಲಬ್ ದಾಳಿಯ ಹೊಣೆಯನ್ನು ಈ ಮೊದಲು ಐಸಿಸ್ ಉಗ್ರ ಸಂಘಟನೆ ಹೊತ್ತಿದ್ದು ಈ ತನಕ ಡಜನ್‌ಗಟ್ಟಲೆ ಶಂಕಿತರನ್ನು ಪೊಲೀಸರು ಬಂಧಿಸಿದ್ದರು. ಸಿರಿಯಾದಲ್ಲಿ ಟರ್ಕಿ ಸೇನೆಯ ಹಸ್ತಕ್ಷೇಪಕ್ಕೆ ಮುಯ್ಯಿ ತೀರಿಸಿಕೊಳ್ಳಲು ಇಸ್ತಾಂಬುಲ್ ನೈಟ್ ಕ್ಲಬ್ ದಾಳಿ ನಡೆಸಲಾಯಿತೆಂದು ಐಸಿಸ್ ಹೇಳಿಕೊಂಡಿತ್ತು.
ಜನವರಿ 1ರಂದು ದಾಳಿಕೋರನು ಇಸ್ತಾಂಬುಲ್‌ನ ಪ್ರಸಿದ್ಧ ರೀನಾ ನೈಟ್‌ಕ್ಲಬ್ ಮೇಲೆ ದಾಳಿಗೈದು ತನ್ನ ಆಟೋಮ್ಯಾಟಿಕ್ ರೈಫಲ್‌ನಿಂದ ಅಲ್ಲಿದ್ದವರ ಮೇಲೆ ಗುಂಡಿನ ಮಳೆ ಸುರಿದಿದ್ದ. ಕನಿಷ್ಠ ಆರು ಬಾರಿ ಆತ ತನ್ನ ಆಟೋಮ್ಯಾಟಿಕ್ ರೈಫಲ್‌ಗೆ ಮದ್ದುಗುಂಡುಗಳನ್ನು ತುಂಬಿ ಗಾಯಾಳುಗಳಾಗಿ ನೆಲಕ್ಕೆ ಬಿದ್ದವರ ಮೇಲೂ ಪುನಃ ಪುನಃ ಗುಂಡಿನ ಮಳೆ ಸುರಿದಿದ್ದ ಎಂದು ವರದಿಯಾಗಿತ್ತು.
ಹಂತಕನ ಗುಂಡಿಗೆ ಬಲಿಯಾದವರಲ್ಲಿ ಟರ್ಕಿಗಳು ಮಾತ್ರವಲ್ಲದೆ, ಅನೇಕ ಅರಬ್ ರಾಷ್ಟ್ರದ ಜನರು, ಭಾರತೀಯರು, ಕೆನಡ ದೇಶದವರು ಸೇರಿದ್ದರು.