Advertisement

ಸಮಸ್ಯೆಗಳಿಗೆ ವಚನಗಳು ಪರಿಹಾರ

07:44 AM Jan 12, 2019 | Team Udayavani |

ದಾವಣಗೆರೆ: ಪ್ರಸ್ತುತ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿಯನ್ನು ವಚನ ಸಾಹಿತ್ಯ ಹೊಂದಿದೆ ಎಂದು ಸಿರಿಗೆರೆ ಬೃಹನ್ಮಠದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಶುಕ್ರವಾರ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕದಳಿ ಮಹಿಳಾ ವೇದಿಕೆಯ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಅನೇಕ ಶರಣ-ಶರಣೆಯರು ತಮ್ಮ ಬದುಕಿನುದ್ದಕ್ಕೂ ಕಂಡು, ಅನುಭವಿಸಿದ ಅನುಭವವನ್ನೇ ಅದ್ಭುತವಾಗಿ ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅನುಭವದ ನುಡಿಗಳಾದ ವಚನಗಳು ಇಂದಿನ 21ನೇ ಶತಮಾನಕ್ಕೂ ಪ್ರಸ್ತುತವಾಗಿವೆ. ಅವು ಜನರ ನೋವಿಗೆ ಪರಿಹಾರ ದೊರಕಿಸಿಕೊಡುವ ಶಕ್ತಿ ಹೊಂದಿವೆ. ಹಾಗಾಗಿ ವಚನ ಸಾಹಿತ್ಯ ಶ್ರೇಷ್ಠವಾಗಿದೆ ಎಂದರು.

ಕದಳಿ ಎಂದರೆ ಬಾಳೆ. ಆದರೆ, ಕದಳಿ ಕೇವಲ ಬಾಳೆ ಅಲ್ಲ. ಕದಳಿ ಎಂದರೆ ಅದು ತನು, ಮನ, ಸಾಂಸಾರಿಕ ಬದುಕು ಎಂದರ್ಥ. ಕದಳಿ ಎಂಬುದು ಜೀವನದ ಎಲ್ಲ ಅನುಭವದ ಸಾರ ಒಳಗೊಂಡಿದೆ. ಯಾರು ನಿಜವಾಗಲೂ ಬದುಕಿನಲ್ಲಿ ಎದುರಾಗುವ ಜಂಜಾಟಗಳನ್ನು ಎದುರಿಸುವ ಧೈರ್ಯ ರೂಢಿಸಿಕೊಳ್ಳುತ್ತಾರೋ ಅವರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಜಿ.ಎಸ್‌. ಶಿವರುದ್ರಪ್ಪ ಅವರ ಬಹುತೇಕ ಕವಿತೆಗಳಲ್ಲಿ ಸತಿ-ಪತಿ ಜೀವನದ ಸಾಂಸಾರಿಕ ತೊಳಲಾಟ ಕಂಡುಬಂದರೆ, ಕೆಲವು ಕವಿತೆಗಳಲ್ಲಿ ತಂದೆ-ತಾಯಿ, ಮಕ್ಕಳ ವಾತ್ಸಲ್ಯದ ಭಾವನೆಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಕವಿತೆಯ ಅನೇಕ ಶಬ್ದ, ಪದ ಪುಂಜಗಳ ಅರ್ಥಗಳು ಅಕ್ಕಮಹಾದೇವಿಯ ವಚನಗಳಲ್ಲಿ ಕಂಡುಬರುತ್ತವೆ. ಹಾಗಾಗಿ ಜಿಎಸ್‌. ಶಿವರುದ್ರಪ್ಪ ಅವರ ಕವಿತೆಗಳು, ಶರಣೆ ಅಕ್ಕಮಹಾದೇವಿ ವಚನಗಳು ಒಂದೇ ರೀತಿಯ ಸ್ವರೂಪವನ್ನು ಒಳಗೊಂಡಿವೆ ಎಂದರು.

Advertisement

ಭೌತಿಕ ಜೀವನದಲ್ಲಿ ಅನುಭವಿಸುವ ಸಂಕಟ, ಜಗಳದಿಂದ ದೂರವಾಗುವ ಮಹಿಳೆಯರು, ನಂತರದಲ್ಲಿ ತವರು ಮನೆಯ ದಾರಿ ತುಳಿಯುವುದು ಸಾಮಾನ್ಯ. ಅದೇ ರೀತಿ ಸಂದರ್ಭ ಅಕ್ಕಮಹಾದೇವಿಗೂ ಒದಗಿ ಬಂದಿತು. ಆಗ ಅವಳು ಹೆತ್ತ ತಾಯಿ-ತಂದೆಯ ಮನೆ ಕಡೆ ಪ್ರವೇಶಿಸಿದೇ ಆಧ್ಯಾತ್ಮದ ತವರು ಮನೆಯಾದ ಕಲ್ಯಾಣದ ಅನುಭವ ಮಂಟಪದ ಕಡೆ ಹೋಗುತ್ತಾಳೆ. ಅಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ವಿಚಾರ, ಜೀವನದ ಅನುಭವದ ಚರ್ಚೆಯ ವಿಚಾರಗಳು ಬೇರೆಲ್ಲೂ ಕೂಡ ನಡೆಯುತ್ತಿರಲಿಲ್ಲ ಎಂದು ಹೇಳಿದರು.

ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಬಸವರಾಜ ಸಾದರ ಮಾತನಾಡಿ, ವಚನ ಸಂಸ್ಕೃತಿಯ ಪುನರುತ್ಥಾನವನ್ನು ಕದಳಿ ಮಹಿಳಾ ವೇದಿಕೆ ಮಾಡುತ್ತಿದೆ. ಜಗತ್ತಿನ ಎಲ್ಲಾ ನೋವು ನಿವಾರಿಸುವ ಶಕ್ತಿ ವಚನಗಳಿಗಿದೆ. ಅವುಗಳ ಅರ್ಥ ಇಂದು ಅರ್ಧ ವಯಸ್ಸು ಕಳೆದ ನಮ್ಮಂತಹ ಹಿರಿಯರಿಗಿಂತ ಯುವ ಸಮೂಹಕ್ಕೆ ತಲುಪಬೇಕಾಗಿದೆ ಎಂದರು.

ಗರ್ಭಗುಡಿಯ ಮಾಲಕಿ ತಾಯಿ ಆಗಿದ್ದು, ಆ ತಾಯಿಗೆ ದೇವಸ್ಥಾನದ ಗರ್ಭಗುಡಿ ಪ್ರವೇಶ ನಿರ್ಬಂಧಿಸುವುದು ಸರಿಯಲ್ಲ. ಋತುಚಕ್ರ ಸಮಯ ಎಂಬ ಅನಿಷ್ಟ ಪದ್ಧತಿಯಿಂದ ಮಹಿಳೆ ಸೂತಕದಲ್ಲಿ ಬದುಕುವ ಸ್ಥಿತಿ ಇಂದು ನಿರ್ಮಾಣ ಆಗಿದೆ. ಇಂತಹ ಪದ್ಧತಿಯನ್ನು ಬಸವಣ್ಣ, ಅಕ್ಕಮಹಾದೇವಿ ಹಿಂದಿನ ಕಾಲದಲ್ಲೇ ವಿರೋಧಿಸಿದ್ದಾರೆ. ಅವರು ಋತುಚಕ್ರ ಸಮಯ ಸೂತಕವಲ್ಲ, ಪವಿತ್ರವಾದದ್ದು ಎಂದು ಹೇಳಿದ್ದಾರೆ. ಈ ನೀತಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಚನ ಸಾಹಿತ್ಯ, ಸಂಸ್ಕೃತಿ ಸಾಗರವಿದ್ದಂತೆ. ಅದರ ಆಳಕ್ಕೆ ಇಳಿದಂತೆ ಅಣಿಮುತ್ತುಗಳು ದೊರಕುತ್ತವೆ. ಈ ಸಾಹಿತ್ಯದ ಅಧ್ಯಯನದಿಂದ ಇಡೀ ಜಗತ್ತಿನ ಅಂತರ್‌ ಶಿಸ್ತಿನ ಜ್ಞಾನ ಪರಿಚಯವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಡಾ| ಎಚ್. ಗಿರಿಜಮ್ಮ, ಪ್ರೊ| ಟಿ. ನೀಲಾಂಬಿಕ, ಅನುಸೂಯಮ್ಮ ಟಿ.ಎಸ್‌. ಪಾಟೀಲ್‌, ಮಲ್ಲಮ್ಮ, ಸರೋಜಾ ಪಾಟೀಲ್‌, ಪುಟ್ಟಮ್ಮ ಮಹಾರುದ್ರಯ್ಯ, ಡಾ| ಜಸ್ಟಿನ್‌ ಡಿಸೋಜಾ, ಡಾ| ಶಾಂತಾ ಭಟ್, ಚೌಡಿಕೆ ಉಚ್ಚೆಂಗೆಮ್ಮ, ರೇವತಿ ನಾಯಕ್‌ ಅವರಿಗೆ ಕಾಯಕ ಶ್ರೀ ಪ್ರಶಸ್ತಿ ನೀಡಲಾಯಿತು.

ಅಖೀಲ ಭಾರತ ಶರಣ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಚಿಕ್ಕೋಳ್‌ ಈಶ್ವರಪ್ಪ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಪ್ರಮೀಳ ನಟರಾಜ್‌, ಗಿರಿಜಮ್ಮ ಸೋಮಶೇಖರಗೌಡ್ರು, ಸುಲೋಚನಾ ರಾಜಶೇಖರ್‌, ಯಶಾ ದಿನೇಶ್‌ ಇತರರು ಉಪಸ್ಥಿತರಿದ್ದರು. ಕದಳಿ ಮಹಿಳಾ ವೇದಿಕೆಯ ಸದಸ್ಯರು ವಚನ ಗಾಯನ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next