ಬೆಂಗಳೂರು: ಬಹುಕೋಟಿ ಸಾಲ ವಸೂಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ವಿದೇಶಕ್ಕೆ ಪಲಾಯನಗೈದಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಹೈಕೋರ್ಟ್ ಶುಕ್ರವಾರ ಜಾಮೀನು ಸಹಿತ ಬಂಧನದ ವಾರಂಟ್ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಎಸ್.ಪಾಟೀಲ್ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಮಲ್ಯ ವಿರುದ್ಧ 50 ಲಕ್ಷ ರೂ. ಮೊತ್ತದ ಜಾಮೀನು ಸಹಿತ ಬಂಧನದ ವಾರೆಂಟ್ ಹೊರಡಿಸಿ ವಿಚಾರಣೆ ಮುಂದೂಡಿತು.
ಸಾಲ ಮರುಪಾವತಿ ಮಾಡದ ಕಾರಣ ವಿವಿಧ ಬ್ಯಾಂಕುಗಳು ಸಾಲ ವಸೂಲಾತಿ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಿದ್ದವು. ಈ ಪ್ರಕರಣದಲ್ಲಿ ಮಲ್ಯ ಅವರು ನ್ಯಾಯಾಧಿಕರಣಕ್ಕೆ ಬರೆದುಕೊಟ್ಟ ಮುಚ್ಚಳಿಕೆಯನ್ನು ಉಲ್ಲಂ ಸಿದ್ದಾರೆಂದು ಆರೋಪಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ 15 ಬ್ಯಾಂಕುಗಳು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿವೆ.
ಇದರ ವಿಚಾರಣೆ ವಿಭಾಗೀಯ ಪೀಠದಲ್ಲಿ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಧಿಸಿದಂತೆ ಮಲ್ಯ 2017ರ ಜೂ.1ಕ್ಕೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು. ಜಾಮೀನು ಸಹಿತ ಬಂಧನದ ವಾರಂಟ್‌ನ್ನು ಕೇಂದ್ರ ಗೃಹ ಸಚಿವಾಲಯದ ಮೂಲಕ ಮಲ್ಯಗೆ ತಲುಪಿಸಬೇಕು.
ಅವರನ್ನು ವಶಕ್ಕೆ ಪಡೆಯುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರಾಗುವ ಭರವಸೆ ಪಡೆದು. ಅದಕ್ಕೆ 50 ಲಕ್ಷ ರೂ. ಮೊತ್ತದ ಖಾತರಿ ಪಡೆದುಕೊಂಡು ಬಿಡುಗಡೆ ಮಾಡಬಹುದು ಎಂದು ನ್ಯಾಯಪೀಠ ಹೇಳಿತು.