ಗದಗ: ಜಂಗಮ ಸಮಾಜವು ನಿರಂತರ ಶೋಷಣೆಗೆ ಒಳಗಾಗುತ್ತಿದೆ. ಜಂಗಮರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುವುದು ಅವರ ಸಂವಿಧಾನಾತ್ಮಕ ಹಕ್ಕು. ಈ ಹಿನ್ನೆಲೆಯಲ್ಲಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮಂಜೂರು ಮಾಡುವಂತೆ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಆಗ್ರಹಿಸಿ ಅಖೀಲ ಕರ್ನಾಟಕ ಬೇಡಜಂಗಮ ಸಮಾಜದ ನೇತೃತ್ವದಲ್ಲಿ ಸಮಾಜದ ನೂರಾರು ಜನರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮುಳಗುಂದ ನಾಕಾ ಅಡವೀಂದ್ರಸ್ವಾಮಿ ಮಠದಿಂದ ಟಿಪ್ಪು ಸುಲ್ತಾನ್ ವೃತ್ತ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಭಾರತ ಸರಕಾರದ ಅಧಿನಿಯಮ ಡಿಪ್ರಸ್ಡ್ ಕ್ಲಾಸ್-1935ರ ಕಾಯ್ದೆಯನ್ನು ನಂತರ ಬದಲಾಯಿಸಿ ಪರಿಶಿಷ್ಟ ಜಾತಿ ಎಂದು ಮಾಡಲಾಯಿತು. ಅದರಲ್ಲಿ ಜಂಗಮರು ಸೇರಿದಂತೆ 35 ಜಾತಿಗಳಿಗೆ ಮೀಸಲಾತಿ ಕಲ್ಪಿಸಲಾಗಿದ್ದು, ಇಂದಿಗೂ ಮುಂದುವರಿದಿದೆ. ಬಳಿಕ 1997ರಲ್ಲಿ ಜಂಗಮರನ್ನು ಬೇಡ ಜಂಗಮರೆಂದು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ.
ಅಲ್ಲದೇ, ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಪತ್ರ ಬರೆದು, ಕರ್ನಾಟಕ ಗೆಜೆಟಿಯರ್ ವರದಿ ಮತ್ತು ಪಂಚನಾಮೆ ಆಧರಿಸಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ತಿಳಿಸಿದ್ದಾರೆ.
ಆದರೆ, ಕಂದಾಯ ಇಲಾಖೆ ಅಧಿಕಾರಿಗಳು, ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂಬ ಅರ್ಜಿಯನ್ನು ಏಕಪಕ್ಷೀಯವಾಗಿ ತಿರಸ್ಕರಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಉನ್ನತ ಅಧಿಕಾರಿಗಳಿಂದ ಹಿಡಿದು, ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ತಹಶೀಲ್ದಾರರು ಈ ಆದೇಶ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ಇದರಿಂದಾಗಿ ಸಂವಿಧಾನಾತ್ಮಕವಾಗಿ ಬೇಡ ಜಂಗಮರಿಗೆ ದೊರಕಿರುವ ಹಕ್ಕುಗಳನ್ನು ದಮನ ಮಾಡುತ್ತಿದ್ದು, ಸರಕಾರದ ವಿವಿಧ ಯೋಜನೆಗಳು, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸುವ ಮೂಲಕ ಬೇಡಜಂಗಮರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯಾಧ್ಯಕ್ಷ ವೀರೇಂದ್ರ ಪಾಟೀಲ, ಜಿಲ್ಲಾಧ್ಯಕ್ಷ ಶಿದ್ರಾಮಯ್ಯ ಗ. ಕಟಗಿಹಳ್ಳಿಮಠ, ಹೊಸರಿತ್ತಿ ಶ್ರೀಗಳು, ಗುರುಸಿದ್ಧೇಶ್ವರ ಶಿವಾಚಾರ್ಯರು, ಅಟ್ನೂರ್ ಶಿವಾಚಾರ್ಯರು, ಶಿರಹಟ್ಟಿಯ ಜ| ಫಕ್ಕೀರ ಸ್ವಾಮಿಗಳು, ಅಭಿನವ ರುದ್ರಮ್ಮತಾಯಿ ಸೇರಿದಂತೆ ಸಮಾಜದ ಅನೇಕರು ಪಾಲ್ಗೊಂಡಿದ್ದರು.