ವಾಡಿ: ಸಾಲ ಸೌಲಭ್ಯ ಪಡೆದ ಸಣ್ಣ ರೈ„ತರು ಸಕಾಲಕ್ಕೆ ಹಣ ಮರುಪಾವತಿಸಿದರೆ ಹೆಚ್ಚಿನ ಮೊತ್ತದ ಸಾಲ ಪಡೆಯಬಹುದು. ರೈತರ ಪ್ರಾಮಾಣಿಕತೆ ಗಮನಿಸಿ ಕುರಿ ಸಾಕಾಣಿಕೆ, ನೀರಾವರಿ ಬೇಸಾಯಕ್ಕೆ ಮತ್ತು ಟ್ರ್ಯಾಕ್ಟರ್ ಖರೀದಿಗೂ ಸಾಲ ನೀಡುವ ಆಲೋಚನೆಯಿದೆ ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಬಸವರಾಜ ಪಾಟೀಲ ಹೇರೂರ ಹೇಳಿದರು.
ಹಳಕರ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 120 ರೈತರಿಗೆ ಬಡ್ಡಿ ರಹಿತ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಸಣ್ಣ ರೈತರ ಕೃಷಿ ಚಟುವಟಿಕೆಗೆ ಆರ್ಥಿಕ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಬಡ್ಡಿ ರಹಿತ ಸಹಾಯ ಧನ ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಬೇಕು. ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ಹಣ ಮರಳಿಸದಿದ್ದರೆ ಹೆಚ್ಚಿನ ಸಾಲ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ರೈತರ ಮಧ್ಯೆ ಕೆಲಸ ಮಾಡಲು ಕ್ರಿಯಾಶೀಲ ವಾಗಿರಬೇಕು. ಬ್ಯಾಂಕ್ ಸಿಬ್ಬಂದಿ ಸಾಲ ಸೌಲಭ್ಯದಿಂದ ವಂಚಿತರಾದ ರೈತರನ್ನು ಗುರುತಿಸಿ ನೆರವಾಗಬೇಕು. ಹೆಚ್ಚು ರೈತರನ್ನು ಬ್ಯಾಂಕ್ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಶಾಸಕ ಪ್ರಿಯಾಂಕ್ ಖರ್ಗೆ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ ಎಂದು ಹೇಳಿದರು.
ಎಆರ್‌ಸಿಎಸ್ ಅಕಾರಿ ರವೀಂದ್ರ ಸೇಡಂ, ಕಾಂಗ್ರೆಸ್ ಹಿರಿಯ ಮುಖಂಡ ಜಗದೀಶ ಸಿಂಧೆ, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಮಲ್ಲಣ್ಣ ಸಾಹು ಸಂಗಶೆಟ್ಟಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಓಂಕಾರೇಶ್ವರ, ಹಳಕರ್ಟಿ ಪಿಕೆಪಿಎಸ್‌ನ ಆಡಳಿತಾಕಾರಿ ವಿಶ್ವನಾಥ ಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ಪಿ.ಗೊಬ್ಬೂರ, ಗ್ರಾಪಂ ಅಧ್ಯಕ್ಷ ಸೋಮು ಚವ್ಹಾಣ, ಮುಖಂಡರಾದ ಸಿದ್ಧು ಮುಗುಟಿ, ಗೋವಿಂದ ಜಾಧವ, ರಾಘವೇಂದ್ರ ಅಲ್ಲಿಪುರ ಹಾಗೂ ರೈತರು ಪಾಲ್ಗೊಂಡಿದ್ದರು. ಇದೇ ವೇಳೆ ಒಟ್ಟು 120 ರೈತರಿಗೆ ಬಡ್ಡಿ ರಹಿತ ಸಾಲದ ಚೆಕ್ ವಿತರಿಸಲಾಯಿತು.