ಭಾಲ್ಕಿ: ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಅಂತಿಮ ಪರಿಹಾರವಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಮುಂದಾಗಬಾರದು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಕೃಷಿ ಇಲಾಖೆ ವತಿಯಿಂದ ಆತ್ಮಹತ್ಯೆ ಪರಿಹಾರ ಯೋಜನೆಯಡಿ ಮಂಜೂರಾದ ರವಿವಾರ ಎಂಟು ಮೃತ ರೈತರ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷ ರೂ ಚೆಕ್ ವಿತರಿಸಿ ಅವರು ಮಾತನಾಡಿದರು.
ರೈತ ಸಮುದಾಯ ಸಂಕಷ್ಟದಲ್ಲಿದೆ. ಸಾಕಷ್ಟು ರೈತರು ಆರ್ಥಿಕ ತೊಂದರೆಯಲ್ಲಿದ್ದಾರೆ. ಹಣಕಾಸಿನ ತೊಂದರೆ, ಮಾಡಿರುವ ಸಾಲಗಳಿಗೆ ಅಂಜಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು. ರೈತರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಹಾಗಾಗಿ ಯಾವೊಬ್ಬ ರೈತರು ಆತ್ಮಹತ್ಯೆ ಹಾದಿ ತುಳಿಯಬಾರದು. ಏನೇ ಸಮಸ್ಯೆ ಎದುರಾದರೂ ಗಮನಕ್ಕೆ ತನ್ನಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.
ಸರ್ಕಾರ ಮಟ್ಟದಲ್ಲಿ ನಿರಂತರ ಪ್ರಯತ್ನಿಸಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿ ಚೆಕ್ ಕೊಡುತ್ತಿದ್ದೇನೆ. ಪರಿಹಾರ ಧನ ಮಕ್ಕಳ ಶಿಕ್ಷಣ, ಮದುವೆಯಂತಹ ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕಿನಲ್ಲಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಚಂದರ ಗಂಗಾರಾವ ಮೇಥಿ ಮೇಳಕುಂದಾ, ಗುರುನಾಥ ಅಣೆಪ್ಪ ಭಾತಂಬ್ರಾ, ಶ್ರೀಕಾಂತ ವಿಶ್ವನಾಥ ಭಾತಂಬ್ರಾ, ಲಕ್ಷ್ಮೀಬಾಯಿ ಸಿದ್ರಾಮಪ್ಪ ಹಲಬರ್ಗಾ, ಸಂತೋಷ ರಾಮಚಂದ್ರ ರುದನೂರ್, ದಿಲೀಪ ರೇವಪ್ಪ ಭಾತಂಬ್ರಾ, ಮಾಧವರಾವ್ ಕೇರಬಾ ಕೋಸಂ ಮತ್ತು ಅರಣಕುಮಾರ ಧೂಳಪ್ಪ ತರನಳ್ಳಿ ಕುಟುಂಬದ ಸದಸ್ಯರಿಗೆ ಶಾಸಕ ಈಶ್ವರ ಖಂಡ್ರೆ ತಲಾ 5 ಲಕ್ಷ ರೂ. ಸೇರಿ ಒಟ್ಟು 40 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಕೃಷಿ ನಿರ್ದೇಶಕಿ ರೂಪಾ.ಎಂ, ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಮುಸ್ತಾಕ್ ಅಹ್ಮದ, ಭಯ್ನಾ, ಓಂಕಾರ ಭಾತಂಬ್ರಾ, ಜೈರಾಜ ಮಾನಕರಿ, ಗೊರಖ ಶ್ರೀಮಾಳೆ, ಶಾಮ ಶಾರವಾಲೆ, ವಿಜಯಕುಮಾರ, ಧನರಾಜ ಪಾಟೀಲ್, ರಮೇಶ ಪ್ರಭಾ ಇದ್ದರು.