ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯ, ಅವುಗಳ ವಸ್ತುಸ್ಥಿತಿ ಹಾಗೂ ನಿರ್ವಹಣೆ ಬಗ್ಗೆ 4 ವಾರಗಳಲ್ಲಿ ಸಮಗ್ರ ವರದಿ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಈ ಕುರಿತಂತೆ “ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ.ಎಚ್.ಟಿ.ನರೇಂದ್ರಪ್ರಸಾದ್‌ರಿದ್ದ ವಿಭಾಗೀಯ ನ್ಯಾಯಪೀಠ, ಆ.17ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಆ.22ಕ್ಕೆ ಮುಂದೂಡಿತು.
ನಿರ್ದೇಶನಕ್ಕೆ ಕೋರಿಕೆ: ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಶಾಲೆಗಳಿಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಬೇಕು. ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗೆ ಅಗತ್ಯ ಸೌಕರ್ಯ ಒದಗಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಬೇಕು, ಬಡ ಮಕ್ಕಳಿಗಾಗಿ ಕೆಲ ಲಸಿಕೆಗಳನ್ನು ಶಾಲೆಗಳಿಗೆ ಪೂರೈಸಬೇಕು. ಶುಚಿ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಮೂಲ ಸೌಕರ್ಯವಿಲ್ಲ: 2017ರ ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರಾಥಮಿಕ ಹಂತದ 21,441 ಸರ್ಕಾರಿ ಶಾಲೆ ಹಾಗೂ 4,279 ಖಾಸಗಿ ಶಾಲೆಗಳಿವೆ. ಈ ಪೈಕಿ ಸರ್ಕಾರಿ ಶಾಲೆಗಳಲ್ಲಿ 53,154 ಶಾಲಾ ಕೊಠಡಿಗಳಿದ್ದು, ಇದರಲ್ಲಿ ಶೇ.60 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಇದೇ ವೇಳೆ ಖಾಸಗಿ ಶಾಲೆಗಳಲ್ಲಿ 20, 405 ಶಾಲಾ ಕೊಠಡಿಗಳಿದ್ದು, ಬಹುತೇಕ ಉತ್ತಮ ಸ್ಥಿತಿಯಲ್ಲಿವೆ.
ಕಳೆದ 10 ವರ್ಷಗಳಲ್ಲಿ 3,446 ಸರ್ಕಾರಿ ಶಾಲೆಗಳು ಮುಚ್ಚಲ್ಪಿಟ್ಟಿದ್ದು, ಇದೇ ಅವಧಿಯಲ್ಲಿ ಹೊಸದಾಗಿ 1,036 ಖಾಸಗಿ ಶಾಲೆ ಪ್ರಾರಂಭವಾಗಿವೆ. ಅನೇಕ ಶಾಲೆಗಳಲ್ಲಿ ಹೆಣ್ಣು -ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.