ಹೊಸದಿಲ್ಲಿ: ಭಾರತದ ಶೂಟರ್ ಅಪೂರ್ವಿ ಚಂದೇಲ ತಮ್ಮ ಚಿನ್ನದ ಬೇಟೆಯನ್ನು ಮುಂದುವರಿಸಿದ್ದಾರೆ. ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ವರ್ಷದ 3ನೇ ಐಎಸ್‌ಎಸ್‌ಎಫ್ ರೈಫಲ್/ಪಿಸ್ತೂಲ್ ವಿಶ್ವಕಪ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರಕ್ಕೆ ಗುರಿ ಇರಿಸಿದ್ದಾರೆ.
10 ಮೀ. ಏರ್ ರೈಫಲ್ ಫೈನಲ್
ರವಿವಾರ ನಡೆದ ವನಿತೆಯರ 10 ಮೀ. ಏರ್ ರೈಫಲ್ ಶೂಟಿಂಗ್ ಫೈನಲ್‌ನಲ್ಲಿ ಅವರು ತೀವ್ರ ಪೈಪೋಟಿಯೊಡ್ಡಿದ ಚೀನದ ವಾಂಗ್ ಲುಯಾವೊ ಅವರಿಗೆ ಸೋಲುಣಿಸಿದರು. ಜೈಪುರದ ಶೂಟರ್ ಅಪೂರ್ವಿ 251 ಅಂಕ ಸಂಪಾದಿಸಿದರೆ, ಹತ್ತಿರ ಹತ್ತಿರ ಬಂದ ವಾಂಗ್ ಲುಯಾವೊ 250.8 ಅಂಕ ಗಳಿಸಿ ಬೆೆಳ್ಳಿಗೆ ತೃಪ್ತಿಪಟ್ಟರು. ಚೀನದ ಮತ್ತೋರ್ವ ಶೂಟರ್ ಕ್ಸು ಹಾಂಗ್ 229.4 ಅಂಕ ಗಳಿಸಿ ಕಂಚು ಗೆದ್ದರು.
ಫೈನಲ್ ತಲುಪಿದ ಭಾರತದ ಮತ್ತೋರ್ವ ಸ್ಪರ್ಧಿ ಇಳವೆನಿಲ್ ವಲರಿವನ್ 0.1 ಅಂಕದಿಂದ ಕಂಚನ್ನು ಕಳೆದುಕೊಂಡರು. ಇದು ಈ ವರ್ಷದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಅಪೂರ್ವಿ ಚಂದೇಲ ಜಯಿಸಿದ 2ನೇ ಬಂಗಾರ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದ ಕೂಟದಲ್ಲೂ ಚಿನ್ನ ಜಯಿಸಿದ್ದರು. ಒಟ್ಟಾರೆಯಾಗಿ ಇದು ಅಪೂರ್ವಿ ಜಯಿಸಿದ 4ನೇ ಐಎಸ್‌ಎಸ್‌ಎಫ್ ಚಿನ್ನವಾಗಿದೆ.
ಬೀಜಿಂಗ್‌ನಲ್ಲಿ ನಡೆದ ವರ್ಷದ ದ್ವಿತೀಯ ಲೆಗ್‌ನಲ್ಲಿ ಮಾತ್ರ ಅಪೂರ್ವಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಇಲ್ಲಿ ಅವರಿಗೆ 4ನೇ ಸ್ಥಾನ ಲಭಿಸಿತ್ತು.