ಚಾಂಗ್‌ವೋನ್: ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಕಿರಿಯರ ವಿಭಾಗದಲ್ಲಿ ಭಾರತದ ಶೂಟರ್‌ಗಳ ಪದಕ ಬೇಟೆ ಮುಂದುವರಿದಿದೆ. ಹೃದಯ್ ಹಜಾರಿಕಾ ಮತ್ತು ವನಿತಾ ತಂಡ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದೆ. ವಿಶ್ವ ಚಾಂಪಿಯನ್‌ಶಿಪ್‌ನ 6ನೇ ದಿನ ಕಿರಿಯರ ವಿಭಾಗದ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಹೃದಯ್ ಹಜಾರಿಕಾ ಚಿನ್ನದ ಪದಕಕ್ಕೆ ಗುರಿ ಇರಿಸಿದರು. ಹಜಾರಿಕಾ ಈ ಸ್ಪರ್ಧೆಯ ಫೈನಲ್ ಪ್ರವೇಶಿಸಿದ ಏಕೈಕ ಭಾರತೀಯ ಶೂಟರ್ ಆಗಿದ್ದಾರೆ. ಇರಾನ್ ಬೆಳ್ಳಿ, ರಶ್ಯ ಕಂಚಿನ ಪದಕ ಗೆದ್ದಿತು.
ತೀವ್ರ ಪೈಪೋಟಿಯ ಫೈನಲ್‌ನಲ್ಲಿ ಹಜಾರಿಕಾ ಮತ್ತು ಇರಾನ್ ಸ್ಪರ್ಧಿ ಆಮಿರ್ ನಿಯೋಕೌನಮ್ 250.1 ಅಂಕಗಳೊಂದಿಗೆ ಸಮಬಲ ಸಾಧಿಸಿದರು. ಇವರಿಬ್ಬರಿಗೂ 0.1 ಅಂಕದಿಂದ ವಿಶ್ವದಾಖಲೆ ಕೈತಪ್ಪಿತು. ಶೂಟೌಟ್‌ನಲ್ಲಿ ಹಜಾರಿಕಾ 10.3 ಅಂಕ ಗಳಿಸಿದರೆ, ಆಮಿರ್ 10.2 ಅಂಕ ಪಡೆದರು.
ವನಿತಾ ಕಿರಿಯರ 10 ಮೀ. ಏರ್ ರೈಫಲ್ ತಂಡ ವಿಭಾಗದಲ್ಲಿ ಇಳವೆನಿಲ್ ವಲರಿವನ್ (631), ಶ್ರೇಯಾ ಅಗರ್ವಾಲ್ (628.5), ಮಾನಿನಿ ಕೌಶಿಕ್ (621.2) ಅವರನ್ನೊಳಗೊಂಡ ಭಾರತ ತಂಡ ಒಟ್ಟು 1880.7 ಅಂಕಗಳೊಂದಿಗೆ ನೂತನ ದಾಖಲೆ ಬರೆದು ಚಿನ್ನದ ಪದಕ ಗೆದ್ದಿತು. ಪುರುಷರ ತಂಡ ವಿಭಾಗದಲ್ಲಿ ಹೃದಯ್ ಹಜಾರಿಕಾ, ದಿವ್ಯಾಂಶ್ ಪನ್ವಾರ್, ಅರ್ಜುನ್ ಬಬುಟಾ ಒಟ್ಟು 1872.3 ಅಂಕಗಳೊಂದಿಗೆ 4ನೇ ಸ್ಥಾನ ಪಡೆದರು.
ಹಿರಿಯರಿಂದ ಮತ್ತೆ ನಿರಾಸೆ
ವಿಶ್ವ ಚಾಂಪಿಯನ್‌ಶಿಪ್‌ನ ಹಿರಿಯರ ವಿಭಾಗದಲ್ಲಿ ಭಾರತೀಯ ಶೂಟರ್‌ಗಳು ಮತ್ತೆ ನಿರಾಸೆ ಮೂಡಿಸಿದರು. ಪುರುಷರ 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಭಾರತದ ಯಾವುದೇ ಶೂಟರ್‌ಗಳು ಫೈನಲ್ ಪ್ರವೇಶಿಸಲಿಲ್ಲ. ಏಶ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸಂಜೀವ್ ಕಪೂರ್ 58ನೇ ಸ್ಥಾನ, ಸ್ವಪ್ನಿಲ್ ಕುಸಲೆ 55ನೇ ಸ್ಥಾನ, ಅಕಿಲ್ ಶೆರೋನ್ 44ನೇ ಸ್ಥಾನ ಪಡೆದರು. 3 ಶೂಟರ್‌ಗಳನ್ನೊಳಗೊಂಡ ತಂಡ ವಿಭಾಗದಲ್ಲಿ 11ನೇ ಸ್ಥಾನಕ್ಕಿಳಿಯಿತು.