Advertisement

ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಕಂಚು

03:20 AM Feb 28, 2021 | Team Udayavani |

ಕೈರೊ (ಈಜಿಪ್ಟ್): ಈಜಿಪ್ಟ್ ರಾಜಧಾನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಪಂದ್ಯಾವಳಿಯ ಪುರುಷರ ಸ್ಕೀಟ್‌ ವಿಭಾಗದ ಸ್ಪರ್ಧೆಯಲ್ಲಿ ಭಾರತ ಕಂಚಿನ ಪದಕ ಜಯಿಸಿದೆ.

Advertisement

ಮಿರಾಜ್‌ ಅಹ್ಮದ್‌ ಖಾನ್‌, ಅಂಗದ ವೀರ್‌ ಸಿಂಗ್‌ ಬಾಜ್ವಾ ಮತ್ತು ಗುರುಜ್ಯೋತ್‌ ಖಂಗುರಾ ಅವರನ್ನೊಳಗೊಂಡ ತಂಡ ಕಜಾಕ್‌ಸ್ಥಾನ ತಂಡವನ್ನು 6-2 ಅಂತರದಿಂದ ಮಣಿಸಿತು. ತಮ್ಮೆಲ್ಲ 16 ಗುರಿಗಳನ್ನು ಯಶಸ್ವಿಯಾಗಿ ಪೂರೈಸಿದ ಬಾಜ್ವಾ ಭಾರತ ತಂಡದ ಹೀರೋ ಎನಿಸಿದರು.

ಈ ಮೂವರನ್ನು ಒಳಗೊಂಡ ಭಾರತೀಯ ತಂಡಕ್ಕೆ ಫೈನಲ್‌ ಪ್ರವೇಶದ ಸಾಧ್ಯತೆ ಇತ್ತಾದರೂ ರಶ್ಯ ವಿರುದ್ಧ ಶೂಟೌಟ್‌ನಲ್ಲಿ ಪರಾಭವಗೊಂಡಿತು. ಫೈನಲ್‌ ಹಣಾಹಣಿಯಲ್ಲಿ ಜೆಕ್‌ ಗಣರಾಜ್ಯವನ್ನು ಪರಾಭವಗೊಳಿಸಿದ ರಶ್ಯ ತಂಡ ಚಿನ್ನದ ಪದಕ ಗೆದ್ದಿತು.

ವನಿತಾ ತಂಡ ಪರಾಭವ
ಗಾನೆಮತ್‌ ಶೆಖೋನ್‌, ಪರಿನಾಜ್‌ ಧಾಲೀವಾಲ್‌ ಮತ್ತು ಕಾರ್ತಿಕಿ ಸಿಂಗ್‌ ಶಕ್ತಾವತ್‌ ಅವರನ್ನು ಹೊಂದಿದ್ದ ವನಿತಾ ತಂಡಕ್ಕೆ ಕಂಚಿನ ಪದಕ ಸ್ವಲ್ಪದರಲ್ಲೇ ತಪ್ಪಿತು. ಕಜಾಕ್‌ಸ್ಥಾನ ವಿರುದ್ಧ ಭಾರತದ ವನಿತೆಯರು 4-6ರಿಂದ ಗುರಿ ತಪ್ಪಿದರು.

ವನಿತಾ ವಿಭಾಗದಲ್ಲೂ ರಶ್ಯ ಮತ್ತು ಜೆಕ್‌ ಗಣರಾಜ್ಯ ತಂಡಗಳು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next